ಶಿರಸಿ: ಪರೀಕ್ಷೆ ಬರೆಯಲಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಗೂ ಬರುವ ಶೈಕ್ಷಣಿಕ ವರ್ಷಕ್ಕೆ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ವಿತರಿಸಲು ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ‘ಮಾಸ್ಕ್ ಬ್ಯಾಂಕ್’ ರಚನೆಯಾಗಿದೆ.
ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ನಿಯಂತ್ರಿಸಲು ಸರ್ಕಾರ ಮುಖಗವಸು ಧರಿಸುವುದನ್ನು ಕಡ್ಡಾಯ ಮಾಡಿರುವ ಹಿನ್ನೆಲೆಯಲ್ಲಿ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ ಒಳಗೊಂಡ ಶೈಕ್ಷಣಿಕ ಜಿಲ್ಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಆರ್‌ಪಿಗಳು ಆಯಾ ತಾಲ್ಲೂಕಿನ ದಾನಿಗಳನ್ನು ಸಂಪರ್ಕಿಸಿ ಮುಖಗವಸು ಸಂಗ್ರಹದಲ್ಲಿ ತೊಡಗಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್ ಮುಖಗವಸು ಕೊಡುಗೆಯಲ್ಲಿ ಬಹುಮುಖ್ಯ ಪಾತ್ರವಹಿಸಿದೆ.
‘ಎಸ್‌ಡಿಎಂಸಿ, ಕೆಲವು ಪಾಲಕರು, ದಾನಿಗಳು ಮುಖಗವಸು ನೀಡಲು ಮುಂದಾಗಿದ್ದಾರೆ. ದಾಂಡೇಲಿಯ ಒಬ್ಬರು ದಾನಿ ಕರೆ ಮಾಡಿ, ಮುಖಗವಸು, ಸ್ಯಾನಿಟೈಸರ್ ಕೊಡುವುದಾಗಿ ತಿಳಿಸಿದರು. ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಆಗಿ ಉಳಿದವುಗಳನ್ನು ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಉಳಿದ ಮಕ್ಕಳಿಗೆ ವಿತರಿಸಲಾಗುತ್ತದೆ. ಕೋವಿಡ್ ಕಾಯಿಲೆ ಯಾವಾಗ ನಿಯಂತ್ರಣಕ್ಕೆ ಬರಬಹುದೋ ಗೊತ್ತಿಲ್ಲ. ಹೀಗಾಗಿ, ಪ್ರತಿ ವಿದ್ಯಾರ್ಥಿಗೆ ಎರಡು ಪುನರ್ ಬಳಕೆಯ ಮುಖಗವಸು ನೀಡಲು ಯೋಚಿಸಲಾಗಿದೆ. ದಿನಕ್ಕೆ ಒಂದರಂತೆ ಬಳಕೆ ಮಾಡಿ, ತೊಳೆದು ಮತ್ತೆ ಬಳಕೆ ಮಾಡಬಹುದು’ ಎಂದು ಡಿಡಿಪಿಐ ದಿವಾಕರ ಶೆಟ್ಟಿ ತಿಳಿಸಿದರು.
ಮನೆ–ಮನೆಯಲ್ಲಿ ಮುಖಗವಸು ಸಿದ್ಧತೆ:ಮುಖಗವಸು ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ಮಕ್ಕಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳು ಮುಖಗವಸು ಸಿದ್ಧಪಡಿಸುತ್ತವೆ. ಶಿರಸಿಯಲ್ಲಿ ಮಾರುತಿ ಉಪ್ಪಾರ, ಸುಮನಾ ಹೆಗಡೆ, ಯಮುನಾ ಪೈ, ಸಿದ್ದಾಪುರದಲ್ಲಿ ಜಿ.ಜಿ.ಹೆಗಡೆ, ಹಳಿಯಾಳದಲ್ಲಿ ರಮೇಶ ಕುರಿಯರ್, ಯಲ್ಲಾಪುರದಲ್ಲಿ ಚಂದ್ರಶೇಖರ, ಮುಂಡಗೋಡಿನಲ್ಲಿ ರಮೇಶ ಚೌವ್ಹಾಣ ನೇತೃತ್ವದಲ್ಲಿ ಸ್ಕೌಟ್ಸ್– ಗೈಡ್ಸ್ ಶಿಕ್ಷಕರು, ಪ್ರಮುಖರು ಮರುಬಳಕೆಯ ಮುಖಗವಸು ಹೊಲಿಯುತ್ತಿದ್ದಾರೆ. ಸ್ಕೌಟ್ಸ್–ಗೈಡ್ಸ್ ಮಕ್ಕಳು, ರೇಂಜರ್ಸ್–ರೋವರ್ಸ್‌ಗಳು ಸಹ ಉತ್ಸಾಹದಿಂದ ಮುಖಗವಸು ತಯಾರಿಸುತ್ತಿದ್ದಾರೆ.
‘ತಿಗಣಿ ಗ್ರಾಮದಲ್ಲಿ ಆರೆಂಟು ಮಹಿಳೆಯರು ಸ್ವಯಂಪ್ರೇರಣೆಯಿಂದ 1000ದಷ್ಟು ಮುಖಗವಸು ಸಿದ್ಧಪಡಿಸಿದ್ದಾರೆ. ಕೆಲವರು ಸ್ನೇಹಿತರು ಹೊಸ ಬಟ್ಟೆ ನೀಡಿ ಸಹಕರಿಸಿದ್ದಾರೆ. ಹಳ್ಳಿಗರು ಸ್ವ ಖುಷಿಯಿಂದ ಮುಖಗವಸು ಸಿದ್ಧತೆಗೆ ಮುಂದಾಗಿರುವುದು ಹೆಮ್ಮೆಯ ಸಂಗತಿ. ಶೈಕ್ಷಣಿಕ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ 11ಸಾವಿರ ಮುಖಗವಸು ಸಿದ್ಧಪಡಿಸಿ, ಶಿಕ್ಷಣ ಇಲಾಖೆಗೆ ನೀಡಲು ಯೋಚಿಸಲಾಗಿದೆ’ ಎನ್ನುತ್ತಾರೆ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಮಾರುತಿ ಉಪ್ಪಾರ್.
ದೇಶಪಾಂಡೆ ಟ್ರಸ್ಟ್ ಕೊಡುಗೆ
ಕೋವಿಡ್ 19 ಕಾಯಿಲೆ ಪ್ರಾರಂಭವಾದಾಗಿನಿಂದ ನಿರಂತರವಾಗಿ ಮುಖಗವಸು ಸಿದ್ಧಪಡಿಸಿ ವಿತರಿಸುತ್ತಿರುವ ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್, ಹಳಿಯಾಳ ಮತ್ತು ಜೊಯಿಡಾ ತಾಲ್ಲೂಕುಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸುಮಾರು 7000 ಮುಖಗವಸು ನೀಡುವುದಾಗಿ ತಿಳಿಸಿದೆ. ಈಗಾಗಲೇ ಸ್ವ ಸಹಾಯ ಸಂಘಗಳ 100 ಮಹಿಳೆಯರಿಗೆ ಉದ್ಯೋಗ ನೀಡಿ 50ಸಾವಿರ ಮುಖಗವಸುಗಳನ್ನು ಟ್ರಸ್ಟ್ ಸಿದ್ಧಪಡಿಸಿ, ಕೊರೊನಾ ವಾರಿಯರ್ಸ್‌ಗಳಿಗೆ ವಿತರಿಸಿದೆ.
*
ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 2.50 ಲಕ್ಷ ಮುಖಗವಸು ಸಂಗ್ರಹಿಸುವ ಗುರಿಯಿದ್ದು, ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಹಂಚಿಕೆ ಮಾಡುತ್ತೇವೆ
– ದಿವಾಕರ ಶೆಟ್ಟಿ, ಡಿಡಿಪಿಐ
ಶಿರಸಿ ಶೈಕ್ಷಣಿಕ ಜಿಲ್ಲೆ
ಒಟ್ಟು ವಿದ್ಯಾರ್ಥಿಗಳು 1.12 ಲಕ್ಷ
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು 10,300
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.