ADVERTISEMENT

ಶಿರಸಿ | ಕಲಾವಿದರ ಕೈಚಳಕ; ನೋಡುಗರ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 6:09 IST
Last Updated 30 ಆಗಸ್ಟ್ 2025, 6:09 IST
   

ಶಿರಸಿ: ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಗಣೇಶೋತ್ಸವವನ್ನು ಶ್ರದ್ದೆ ಮತ್ತು ಸೌಹಾರ್ದದಿಂದ ಆಚರಿಸಲಾಗುತ್ತಿದ್ದು, ಧಾರ್ಮಿಕ ಸಂಪ್ರದಾಯಕ್ಕೆ ಸೀಮಿತಗೊಳ್ಳದೆ ವೈವಿಧ್ಯತೆಯ ಜತೆಗೆ ಐತಿಹಾಸಿಕ ಮತ್ತು ನೈಸರ್ಗಿಕ ದೃಶ್ಯಕಾವ್ಯಗಳ ಮೂಲಕ ಸಾಮಾಜಿಕ ಕಳಕಳಿ ಮೂಡಿಬಂದಿದೆ.

ನಗರದ 50ಕ್ಕೂ ಹೆಚ್ಚು ಕಡೆ ಅನೇಕ ಸಂಘಟನೆಗಳ ವತಿಯಿಂದ ವಿವಿಧ ರೀತಿಯ ಪರಿಕಲ್ಪನೆಯಲ್ಲಿ ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿವೆ. ಅನೇಕ ಸ್ಥಳಗಳಲ್ಲಿ ಭಕ್ತರು ಸಾಲುಗಟ್ಟಿ ಗಣಪನ ದರ್ಶನ ಪಡೆಯುತ್ತಿರುವುದು ಕಂಡುಬಂದಿತು. ಅಲ್ಲದೆ ಭಕ್ತರಿಗೆ ಸಂಘಟನೆಗಳ ವತಿಯಿಂದ ಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಕೆಲವು ಕಡೆಗಳಲ್ಲಿನ ವಿಶೇಷತೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಝೂ ಸರ್ಕಲ್ ನ ಗಜಾನನೋತ್ಸವ ಮಂಡಳಿ ವತಿಯಿಂದ ಇತಿಹಾಸ ಪ್ರಸಿದ್ಧ ದೇವಗಿರಿ ಕೋಟೆ ನಿರ್ಮಿಸಲಾಗಿದೆ. ದೂರದಿಂದ ಗಮನಿಸಿದರೆ ಥೇಟ್ ಕಲ್ಲಿನ ಕೋಟೆಯಂತೆ ಭಾಸವಾಗುತ್ತಿದ್ದು, ಕಲಾವಿದರ ಕೈಚಳಕವನ್ನು ನೋಡುಗರ ಪ್ರಶಂಸಿಸುತ್ತಿದ್ದಾರೆ. ಇನ್ನು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಉದ್ಯಾನದೊಳಗೆ ವಿರಾಜಮಾನವಾಗಿರುವ ಗಣಪನನ್ನು ಪ್ರತಿಷ್ಠಾಪಿಸಲಾಗಿದೆ.

ADVERTISEMENT

ಹುಬ್ಬಳ್ಳಿ ರಸ್ತೆ ಅಂಬೇಡ್ಕರ ಭವನದ ಸಮೀಪ ಫಯಾಜ್ ಚೌಟಿ ಎಂಬುವವರ ನೇತೃತ್ವದಲ್ಲಿ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪಿಸಲಾಗಿದ್ದು, ಜನಮನ ಸೆಳೆಯುತ್ತಿದೆ. ಮರಾಠಿಕೊಪ್ಪದ ಗಜಾನನೋತ್ಸವ ಮಂಡಳಿಗೆ 50ರ ಸಂಭ್ರಮವಾಗಿದ್ದು, ಸ್ಥಳೀಯ ಉದ್ಯಮಿ ಶ್ರೀಧರ ಮೊಗೇರ ₹5 ಲಕ್ಷ ವೆಚ್ಚದ ಬೆಳ್ಳಿಯ ಬೃಹತ್ ಕಿರೀಟವನ್ನು ಗಣಪತಿಗೆ ಸಮರ್ಪಿಸಿದ್ದು ವಿಶೇಷವಾಗಿದೆ. ಇದೇ ಮೊದಲ ಬಾರಿ 15 ಅಡಿ ಎತ್ತರದ ಗಣಪನನ್ನು ಅಯ್ಯಪ್ಪನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ವಿಶೇಷವಾಗಿ ಭಕ್ತರನ್ನು ಆಕರ್ಷಿಸುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.