ADVERTISEMENT

ಶಿರಸಿ| ರಸ್ತೆ ವಿಸ್ತರಣೆ: 300 ಮರಗಳಿಗೆ ಕೊಡಲಿ

ರಸ್ತೆ ನಿರ್ಮಾಣ ಕಂಪನಿಯಿಂದ ಮರಗಳ ತೆರವು ಕಾರ್ಯಾಚರಣೆಗೆ ಚಾಲನೆ

ರಾಜೇಂದ್ರ ಹೆಗಡೆ
Published 7 ಜುಲೈ 2025, 2:59 IST
Last Updated 7 ಜುಲೈ 2025, 2:59 IST
ಶಿರಸಿ ಹಾವೇರಿ ರಸ್ತೆ ವಿಸ್ತರಣೆಗಾಗಿ ತಾಲ್ಲೂಕಿನ ಮಾವಿನಕೊಪ್ಪ ಸಮೀಪ ರಸ್ತೆ ಪಕ್ಕ ಮರಗಳನ್ನು ಕತ್ತರಿಸಿರುವುದು 
ಶಿರಸಿ ಹಾವೇರಿ ರಸ್ತೆ ವಿಸ್ತರಣೆಗಾಗಿ ತಾಲ್ಲೂಕಿನ ಮಾವಿನಕೊಪ್ಪ ಸಮೀಪ ರಸ್ತೆ ಪಕ್ಕ ಮರಗಳನ್ನು ಕತ್ತರಿಸಿರುವುದು    

ಶಿರಸಿ: ಸಾಗರಮಾಲಾ ಯೋಜನೆಯಡಿ ಶಿರಸಿ–ಹಾವೇರಿ ಹೆದ್ದಾರಿ (766ಇ) ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಳ್ಳಲು ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿದ್ದು ರಸ್ತೆ ನಿರ್ಮಾಣದ ಜವಾಬ್ದಾರಿಯಿರುವ ಗುತ್ತಿಗೆದಾರರು ರಸ್ತೆಯಂಚಿನಲ್ಲಿ ಗುರುತು ಮಾಡಿದ ಮರಗಳ ತೆರವು ಕಾರ್ಯ ನಡೆಸಿದ್ದಾರೆ. ಯೋಜನೆಯನ್ವಯ ಅಂದಾಜು 300ರಷ್ಟು ದೊಡ್ಡ ಮರಗಳು ನಾಶವಾಗಲಿವೆ. 

ಶಿರಸಿ–ಹಾವೇರಿ ಹೆದ್ದಾರಿ (766ಇ)ಯಲ್ಲಿ ಒಟ್ಟು 74 ಕಿ.ಮೀ ವರೆಗೆ ರಸ್ತೆ ವಿಸ್ತರಣೆ ಹಾಗೂ ಸುಧಾರಣೆಯಾಗಬೇಕಿದೆ. ಅದರಲ್ಲಿ, ಶಿರಸಿ ತಾಲ್ಲೂಕು ವ್ಯಾಪ್ತಿಯಲ್ಲಿ 22 ಕಿ.ಮೀ ವರೆಗೆ ರಸ್ತೆ ಕಾಮಗಾರಿ ನಡೆಯಬೇಕಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಡಿ ಅಮ್ಮಾಪುರ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಕಾಮಗಾರಿ ಗುತ್ತಿಗೆ ಪಡೆದಿದೆ. ವರ್ಷಗಳ ನಂತರ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆ ಕಂಪನಿಯು ಪ್ರಸ್ತುತ ಹೆದ್ದಾರಿ ವಿಸ್ತರಣೆ ಜಾಗದಲ್ಲಿನ ಮರಗಳ ತೆರವು ಕಾರ್ಯ ನಡೆಸಿದ್ದಾರೆ. 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಾಮಗಾರಿಗೆ ಗುತ್ತಿಗೆ ಕೊಟ್ಟ ನಂತರ ರಸ್ತೆ ವಿಸ್ತರಣೆಗಾಗಿ ಗಿಡ ಕತ್ತರಿಸಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಆಗ ಇಡೀ ರಸ್ತೆ ಅರಣ್ಯ ಇಲಾಖೆ ಜಾಗದಲ್ಲಿದೆ ಎಂಬ ಅಂಶ ಬೆಳಕಿಗೆ ಬಂದಿತ್ತು. ಹೀಗಾಗಿ, ಅರಣ್ಯ ಇಲಾಖೆಯು ಕಾಮಗಾರಿಯನ್ನು ಸ್ಥಗಿತಗೊಳಿಸಲು ಸೂಚಿಸಿತ್ತು. ವರ್ಷದ ಹಿಂದೆ ಗುತ್ತಿಗೆದಾರ ಕಂಪನಿಯು ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಲು ಕೇಂದ್ರ ಪರಿಸರ ಮಂತ್ರಾಲಯಕ್ಕೆ ಪ್ರಸ್ತಾವ ಕಳುಹಿಸಲಾಗಿತ್ತು. ದಾಖಲೆಗಳನ್ನು ಸರಿಯಾಗಿ ಒದಗಿಸದ ಕಾರಣ, ಒಪ್ಪಿಗೆ ಸಿಕ್ಕಿರಲಿಲ್ಲ. ಅರಣ್ಯ ಇಲಾಖೆಯೇ ಸೂಕ್ತ ದಾಖಲೆಗಳನ್ನು ಒದಗಿಸಿದ್ದು, ವರ್ಷಗಳಿಂದ ಸರ್ಕಾರ ಮಟ್ಟದಲ್ಲಿ ಚರ್ಚೆಯಾಗಿತ್ತು. ನಂತರ, ಅರಣ್ಯ ಇಲಾಖೆಗೆ ಅನುಮತಿಗಾಗಿ ಸೂಚಿಸಲಾಗಿತ್ತು. ಇದೀಗ ಕಾಮಗಾರಿ ಚಾಲನೆಗೆ ಅನುಮತಿ ದೊರೆತಿದ್ದು, ಗುತ್ತಿಗೆದಾರರು ಗುರುತು ಹಾಕಿರುವ ಮರಗಳನ್ನು ಕತ್ತರಿಸುತ್ತಿದ್ದಾರೆ. 

ADVERTISEMENT

‘ರಸ್ತೆಯ ಮಾವಿನಕೊಪ್ಪ, ಎಕ್ಕಂಬಿ ಸಮೀಪ ಚಿಕ್ಕ ಗಿಡಗಳ ಜತೆ ಜಂಬೆ, ಮತ್ತಿ, ಸಳ್ಳೆ, ಅಕೇಶಿಯಾದಂಥ ವಿವಿಧ ಜಾತಿಯ 3–4 ಅಡಿ ಸುತ್ತಳತೆಯ ಮರಗಳನ್ನು ಈಗಾಗಲೇ ಕಡಿಯಲಾಗಿದೆ. ಕೆಲವು ಕಡಿದ ಮರಗಳನ್ನು ಸಾಗಿಸಲಾಗಿದೆ. ಉಳಿದೆಡೆ ಇನ್ನೂ ತೆರವು ಕಾರ್ಯ ಆಗಬೇಕಿದೆ. ವಿಪರೀತ ಮಳೆಯ ಕಾರಣ ಮರ ತೆರವು ಕಾರ್ಯಕ್ಕೆ ಹಿನ್ನಡೆಯಾಗಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ಎಲ್ಲ ಮರಗಳನ್ನು ತೆರವು ಮಾಡಲಾಗುವುದು’ ಎಂಬುದು ಗುತ್ತಿಗೆ ಕಂಪನಿಯವರ ಮಾತಾಗಿದೆ. 

‘ಯೋಜನೆಯ ಪ್ರಕಾರ ಈ ರಸ್ತೆಗಾಗಿ ನಾಶವಾಗುವ ಅರಣ್ಯದ ಬದಲಿಯಾಗಿ ಬೇರೆಡೆ ಅರಣ್ಯ ಬೆಳೆಸುವ ಕಾರ್ಯ ಆಗಬೇಕು. ಅದಕ್ಕಾಗಿ ಈಗಾಗಲೇ ಜಾಗ ಗುರುತಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ನಿಗದಿತ ಮೊತ್ತವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿಕೊಳ್ಳಲಾಗಿದೆ. ಆ ಮೊತ್ತದಲ್ಲಿ ಅರಣ್ಯೀಕರಣ ಕಾರ್ಯ ನಡೆಸಲಾಗುವುದು. ಗುರುತು ಹಾಕಿರುವ ಮರಗಳನ್ನು ಹೊರತುಪಡಿಸಿ ಮತ್ಯಾವುದೇ ಗಿಡಮರಗಳನ್ನು ನಾಶ ಮಾಡದಂತೆ ಸೂಚನೆ ಕೂಡ ನೀಡಲಾಗಿದೆ’ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಒಟ್ಟು 74 ಕಿ.ಮೀ ರಸ್ತೆ ವಿಸ್ತರಣೆ  | 22 ಕಿ.ಮೀ ಶಿರಸಿ ತಾಲ್ಲೂಕಿನಲ್ಲಿ ಹಾದುಹೋಗುವ ರಸ್ತೆ  | ಬೇರೆಡೆ ಗಿಡ ಬೆಳೆಸಲು ಜಾಗದ ಗುರುತು
ಹೆದ್ದಾರಿ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಳ್ಳಲು ಈಗಾಗಲೇ ಅನುಮತಿ ಸಿಕ್ಕಿದ್ದು ಮಳೆ ನಿಂತ ನಂತರ ಕಾಮಗಾರಿ ಪೂರ್ಣಪ್ರಮಾಣದಲ್ಲಿ ಆರಂಭಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಅಲ್ಲಿವರೆಗೆ ರಸ್ತೆಯನ್ನು ತಾತ್ಕಾಲಿಕವಾಗಿ ನಿರ್ವಹಿಸಲು ಸೂಚಿಸಿದ್ದೇನೆ
ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದ

ತಾತ್ಕಾಲಿಕ ಕಾರ್ಯದಿಂದ ಪ್ರಯೋಜನವಿಲ್ಲ: 

ವರ್ಷಗಳಿಂದ ನಿರ್ವಹಣೆಯಿಲ್ಲದ ಕಾರಣ ಶಿರಸಿ– ಹಾವೇರಿ ರಸ್ತೆ ಸಂಪೂರ್ಣ ಹದಗೆಟ್ಟು ಓಡಾಡಲು ದುಸ್ತರವಾಗಿತ್ತು. ಪ್ರಸ್ತುತ ಹೆಚ್ಚಿನ ಹೊಂಡ–ಗುಂಡಿಗಳಿರುವಲ್ಲಿ ತಾತ್ಕಾಲಿಕವಾಗಿ ಗುಂಡಿ ಮುಚ್ಚಲಾಗುತ್ತಿದೆ. ಆದರೆ ನಿತ್ಯ ಸಾವಿರಾರು ವಾಹನ ಓಡಾಡುವ ಮಾರ್ಗದಲ್ಲಿ ತಾತ್ಕಾಲಿಕ ಕಾರ್ಯದಿಂದ ಪ್ರಯೋಜನವಾಗದು. ಇತ್ತೀಚೆಗೆ ದುರಸ್ತಿ ಮಾಡಿದ್ದ ಜಾಗಗಳು ಮಳೆಯ ಕಾರಣಕ್ಕೆ ಮತ್ತೆ ಗುಂಡಿಗಳಾಗಿ ಮಾರ್ಪಡುತ್ತಿವೆ. ಹಾಗಾಗಿ ಮಳೆ ಬಿಡುವಾದಾಗ ಶಾಶ್ವತ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಬೇಕು ಎಂಬುದು ಈ ಭಾಗದ ನಾಗರಿಕರ ಒತ್ತಾಯವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.