ADVERTISEMENT

ಶಿರಸಿ| ಸ್ವಧರ್ಮ ನಿಷ್ಠೆ ಜತೆ ಪರಧರ್ಮವನ್ನೂ ಗೌರವಿಸಿ: ಸ್ವರ್ಣವಲ್ಲೀ ಶ್ರೀ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 7:31 IST
Last Updated 5 ಜನವರಿ 2026, 7:31 IST
<div class="paragraphs"><p>ಶಿರಸಿಯ ಸೋಂದಾದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ವಿಶ್ವವಲ್ಲಭತೀರ್ಥ ಶ್ರೀಪಾದರು ಮಾತನಾಡಿದರು</p></div>

ಶಿರಸಿಯ ಸೋಂದಾದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ವಿಶ್ವವಲ್ಲಭತೀರ್ಥ ಶ್ರೀಪಾದರು ಮಾತನಾಡಿದರು

   

ಶಿರಸಿ: ‘ಸ್ವಧರ್ಮದ ಬಗ್ಗೆ ನಿಷ್ಠೆ ಮತ್ತು ಆಚರಣೆಯ ಜತೆಗೆ ಪರ ಧರ್ಮಗಳ ಬಗ್ಗೆ ಗೌರವ ಹೊಂದಿರುವುದೇ ನಿಜವಾದ ಸಾಮರಸ್ಯದ ಲಕ್ಷಣ’ ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

​ತಾಲ್ಲೂಕಿನ ಸೋಂದಾ ಜೈನ ಮಠದ ಆವರಣದಲ್ಲಿ ಹಿಂದೂ ಸಮ್ಮೇಳನ ಸಂಚಲನಾ ಸಮಿತಿ ಭೈರುಂಬೆ ಮಂಡಲದ ವತಿಯಿಂದ ಭಾನುವಾರ ಆಯೋಜಿಸಿದ್ದ ಹಿಂದೂ ಸಮ್ಮೇಳನದಲ್ಲಿ ಅವರು ಆಶೀರ್ವಚನ ನೀಡಿದರು.

ADVERTISEMENT

‘ಹಿಂದೂ ಧರ್ಮದ ಜತೆಗೆ ಎಲ್ಲ ಮತಗಳ ಬಗ್ಗೆ ಗೌರವ ಭಾವನೆ ಹೊಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಮರ್ಪಣಾ ಭಾವ ಇಂದಿನ ಸಮಾಜಕ್ಕೆ ಮಾದರಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.

​‘ತಡವಾದ ವಿವಾಹ, ಹೆಚ್ಚುತ್ತಿರುವ ವಿಚ್ಛೇದನ ಹಾಗೂ ಅತಿಯಾದ ಸಂತತಿ ನಿಯಂತ್ರಣದಿಂದ ಹಿಂದೂ ಕುಟುಂಬ ವ್ಯವಸ್ಥೆಗೆ ಧಕ್ಕೆ ಬರುತ್ತಿದೆ. ಸರಿಯಾದ ವಯಸ್ಸಿನಲ್ಲಿ ವಿವಾಹವಾಗಿ, ಪತಿ-ಪತ್ನಿ ಸಂಬಂಧದ ಪಾವಿತ್ರ್ಯತೆ ಉಳಿಸಿಕೊಳ್ಳಬೇಕು. ಮಕ್ಕಳ ವಿಷಯದಲ್ಲಿ ಸಂಕುಚಿತತೆ ಮಾಡಬಾರದು. ಮತಾಂತರದ ಮೂಲಕ ಸಂಖ್ಯೆ ಹೆಚ್ಚಿಸಿಕೊಳ್ಳುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು’ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಜ್ಞಾಪ್ರವಾಹ ಅಖಿಲ ಭಾರತ ಸಹ ಸಂಯೋಜಕ ರಘುನಂದನ ಮಾತನಾಡಿ, ‘ಭಾರತವು ಪುರುಷ ಅಥವಾ ಮಹಿಳಾ ಪ್ರಧಾನ ಸಮಾಜವಲ್ಲ ಬದಲಾಗಿ ಮಾತೃ ಪ್ರಧಾನ ಸಮಾಜ. ಅಹಂಕಾರ, ತಾರತಮ್ಯ ಮರೆತು ಎಲ್ಲರೂ ಅಣ್ಣತಮ್ಮಂದಿರಂತೆ ಸಾಮರಸ್ಯದಿಂದ ಬದುಕಬೇಕು. ಸಂವಿಧಾನದ ಪಾಲನೆಯೊಂದಿಗೆ ಸಂಸ್ಕಾರಯುತ ಪರಿವಾರ ನಿರ್ಮಿಸಿ ಸಮಾಜದ ಜಾಗೃತಿ ಮಾಡುವುದು ಇಂದಿನ ಅಗತ್ಯವಾಗಿದೆ’ ಎಂದರು. 

ವಾದಿರಾಜ ಮಠದ ವಿಶ್ವವಲ್ಲಭತೀರ್ಥ ಶ್ರೀಪಾದರು ಮಾತನಾಡಿ, ‘ಸನಾತನ ಸಂಸ್ಕೃತಿಯನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಇದು ಎಲ್ಲ ಧರ್ಮಗಳಿಗೂ ಮೂಲವಾಗಿದೆ. ಯುವಜನತೆ ಇತಿಹಾಸ ಅರಿತು ಸಮಾಜದ ಉಳಿವಿಗಾಗಿ ಶ್ರಮಿಸಬೇಕು’ ಎಂದರು.

ಜೈನ ಮಠದ ​ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಮಾತನಾಡಿ, ‘ಎಲ್ಲರೂ ಒಂದು ಎಂಬ ಭಾವನೆಯೇ ಹಿಂದುತ್ವ. ಅಸೂಯೆ ಬಿಟ್ಟು ಎಲ್ಲರನ್ನೂ ಸಮಾನವಾಗಿ ಕಾಣುವವನೇ ನಿಜವಾದ ಹಿಂದೂ’ ಎಂದರು. 

ಸಮಾವೇಶದಲ್ಲಿ ಭೈರುಂಬೆ ಮಂಡಲ ವ್ಯಾಪ್ತಿಯ 25 ಸಾಧಕರನ್ನು ಹಾಗೂ ವಿವಿಧ ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು. ಸ್ನೇಹ ಶಕ್ತಿ ಸಂಜೀವಿನಿ ಸ್ತ್ರೀ ಶಕ್ತಿ ಸಂಘ ಒಕ್ಕೂಟದ ಅಧ್ಯಕ್ಷೆ ರೇಖಾ ಗೊರೆ, ಕಾರ್ಯಕ್ರಮದ ಸಂಚಾಲಕ ವಿಶ್ವನಾಥ ಬುಗಡಿಮನೆ, ಸಮಿತಿ ಅಧ್ಯಕ್ಷ ಅನಂತ ಹುಳಗೋಳ ಇದ್ದರು.

ತನಗೆ ತಾನು ಹಿಂದೂ ಎಂದು ಗೊತ್ತಾದಾಗ ಮಾತ್ರ ಹಿಂದೂ ಸಮಾಜ ಉಳಿಯುತ್ತದೆ. ಈ ನಿಟ್ಟಿನಲ್ಲಿ ಸಂಘ ಸದಾ ಜಾಗೃತಿ ಮಾಡುತ್ತಿದೆ.
ರಘುನಂದನ ಪ್ರಜ್ಞಾಪ್ರವಾಹ ಅಖಿಲ ಭಾರತ ಸಹ ಸಂಯೋಜಕ
ಜ.11ರಂದು ಶಿರಸಿಯಲ್ಲಿ ನಡೆಯುವ ನದಿ ತಿರುವು ವಿರೋಧಿ ಸಮಾವೇಶದಲ್ಲಿ ಎಲ್ಲರೂ ಭಾಗವಹಿಸಬೇಕು
ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸ್ವರ್ಣವಲ್ಲೀ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.