ಶಿರಸಿ:ಇತಿಹಾಸ ತಜ್ಞ ಡಾ.ಎ.ಕೆ. ಶಾಸ್ತ್ರಿ (80) ಹೃದಯಾಘಾತದಿಂದ ಶನಿವಾರ ನಿಧನರಾದರು. ಮೋಡಿ ಲಿಪಿಯಲ್ಲಿರುವ ಕಡತಗಳ ಮೇಲೆ ಅಧ್ಯಯನ ನಡೆಸಿದ್ದ ಅವರು 'ಕಡತ ಶಾಸ್ತ್ರಿ' ಎಂದೇ ಪ್ರಸಿದ್ಧರಾಗಿದ್ದರು.ಇಬ್ಬರು ಪುತ್ರರು ಇದ್ದಾರೆ.
15ನೇ ಶತಮಾನದಿಂದ 19ನೇ ಶತಮಾನದವರೆಗಿನ ಕಡತಗಳ ಮೇಲೆ ಅವರು ಅಧ್ಯಯನ ಮಾಡಿದ್ದರು. ಇತಿಹಾಸದ ಮೇಲೆ ಅನೇಕ ಮೌಲಿಕ ಕೃತಿಗಳನ್ನು ರಚಿಸಿದ್ದರು. ಶೃಂಗೇರಿ ಮಠದ ದಾಖಲೆಗಳ ಮೇಲೆ ವಿಶೇಷ ಅಧ್ಯಯನ ಮಾಡಿ ಪುಸ್ತಕ ಪ್ರಕಟಿಸಿದ್ದರು.
ಶಿರಸಿಯ ಎಂ.ಎಂ.ಕಲಾ ಮತ್ತು ವಿಜ್ಞಾನ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿಯಾದ ನಂತರ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಚುಟುಕು ಬರವಣಿಗೆ ಅವರ ಹವ್ಯಾಸವಾಗಿತ್ತು.
ಇಲ್ಲಿನ ನಾವು- ನೀವು ಬಳಗದ ಸದಸ್ಯರಾಗಿದ್ದ ಅವರು, ಜ.1ರಂದು ನೆಮ್ಮದಿ ಕುಟೀರದಲ್ಲಿ ನಡೆದ ಮಾಸದ ಮಾತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
‘ಕಾರ್ಯಕ್ರಮ ಮುಗಿದ ಮೇಲೆ ನೆಮ್ಮದಿ ಕಾರ್ಯಕ್ರಮಗಳಿಗೆ ₹5000 ಚೆಕ್ ಕೊಟ್ಟರು. ತಕ್ಷಣವೇ ಅದನ್ನು ವಾಪಸ್ ಪಡೆದು, ಪಕ್ಕದಲ್ಲಿರುವ ರುದ್ರಭೂಮಿ ಅಭಿವೃದ್ಧಿಗೂ ಇರಲಿ ಎಂದು ಹೊಸ ಚೆಕ್‌ನಲ್ಲಿ ಹೆಚ್ಚಿನ ಮೊತ್ತ ಬರೆದು ಕೊಟ್ಟರು’ಎಂದು ಬಳಗದ ಉಸ್ತುವಾರಿ ನೋಡಿಕೊಳ್ಳುತ್ತಿರುವ ವಿ.ಪಿ.ಹೆಗಡೆ ವೈಶಾಲಿ ನೆನಪಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.