
ಶಿರಸಿ: ತಾಲ್ಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ಸ್ವಾದಿ ಜೈನಮಠವು ಶುಕ್ರವಾರ ಅಧ್ಯಾತ್ಮ ಲೋಕದ ಅಪರೂಪದ ಮೈಲಿಗಲ್ಲೊಂದಕ್ಕೆ ಸಾಕ್ಷಿಯಾಯಿತು. ದಕ್ಷಿಣ ಭಾರತದಲ್ಲಿಯೇ ಅತ್ಯಂತ ದೊಡ್ಡದಾದ ಹಾಗೂ ಭವ್ಯವಾದ ಭಗವಾನ್ ನೇಮಿನಾಥ ತೀರ್ಥಂಕರರ ಮೂರ್ತಿಯನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಪ್ರತಿಷ್ಠಾಪಿಸಲಾಯಿತು.
ಸುಮಾರು 80 ಟನ್ ಭಾರವಿರುವ ಈ ಬೃಹತ್ ಶಿಲಾಮೂರ್ತಿಯು ಪದ್ಮಾಸನ ಭಂಗಿಯಲ್ಲಿದ್ದು, ಬರೊಬ್ಬರಿ 24 ಅಡಿ ಎತ್ತರವಿದೆ. ಇಷ್ಟು ಬೃಹತ್ ಪ್ರಮಾಣದ ಪದ್ಮಾಸನಸ್ಥ ಮೂರ್ತಿ ಈ ಭಾಗದಲ್ಲಿಯೇ ಅತಿ ದೊಡ್ಡದೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ದೃಶ್ಯವು ಭಕ್ತಾದಿಗಳ ಕಣ್ಮನ ಸೆಳೆಯಿತು.
ಈ ಐತಿಹಾಸಿಕ ಘಳಿಗೆಯು ಆಚಾರ್ಯ ಪುಣ್ಯಸಾಗರ ಮಹಾರಾಜ ಹಾಗೂ ಸ್ವಾದಿ ಜೈನಮಠದ ಪೀಠಾಧಿಪತಿ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ವ್ಯವಸ್ಥಿತವಾಗಿ ನೆರವೇರಿತು. ವರೂರು ಹುಬ್ಬಳ್ಳಿಯ ಧರ್ಮಸೇನ ಭಟ್ಟಾರಕ ಸ್ವಾಮೀಜಿ, ಕಂಬದಳ್ಳಿ ಜೈನಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಪಾಲ್ಗೊಂಡು ಧಾರ್ಮಿಕ ವಿಧಿವಿಧಾನಗಳಿಗೆ ಸಾಕ್ಷಿಯಾದರು. ಶಿರಸಿ ಮಾತ್ರವಲ್ಲದೆ, ಹೊರ ಜಿಲ್ಲೆ ಹಾಗೂ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಜೈನ ಸಮಾಜದ ಶ್ರಾವಕ-ಶ್ರಾವಕಿಯರು ಭಜನೆ, ಜಯಘೋಷಗಳೊಂದಿಗೆ ಮೂರ್ತಿ ಸ್ಥಾಪನೆಯ ಸಂಭ್ರಮದಲ್ಲಿ ಪಾಲ್ಗೊಂಡರು. ಈ ಕಾರ್ಯವು ಸೋಂದಾ ಕ್ಷೇತ್ರದ ಧಾರ್ಮಿಕ ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಿ ದಾಖಲಾಗಿದ್ದು, ನೆರೆದಿದ್ದ ಭಕ್ತ ಸಮೂಹವು ಭಗವಾನ್ ನೇಮಿನಾಥರ ದರ್ಶನ ಪಡೆದು ಪುನೀತರಾದರು.