
ಶಿರಸಿ: ರಾಜ್ಯ ಸರ್ಕಾರದ ಪ್ರತಿಷ್ಠಿತ ಉತ್ಸವಗಳಲ್ಲಿ ಒಂದಾಗಿರುವ ಬನವಾಸಿಯ ಕದಂಬೋತ್ಸವದಲ್ಲಿ ಕಲಾರಸಿಕರ ಮನ ತಣಿಸಿದ ಕಲಾವಿದರಿಗೆ ಹದಿನೈದು ದಿನ ಕಳೆದರೂ ಕಲಾ ‘ಕಾಣಿಕೆ’ ಸಂದಾಯವಾಗಿಲ್ಲ. ಆಡಳಿತದಿಂದ ನಿಗದಿತ ದಿನಾಂಕ ನಮೂದಿಸಿ ಚೆಕ್ ನೀಡಿದ್ದು, ಆ ದಿನದೊಳಗೆ ಬ್ಯಾಂಕ್‍ಗೆ ಚೆಕ್ ಹಾಕದಂತೆ ಕೋರಲಾಗಿದೆ ಎಂಬುದು ಕಲಾವಿದರ ಅಳಲಾಗಿದೆ.
ಬನವಾಸಿಯಲ್ಲಿ ಏ.12 ಮತ್ತು 13ರಂದು ಕದಂಬೋತ್ಸವ ಅದ್ಧೂರಿಯಾಗಿ ಜರುಗಿತ್ತು. ಸ್ಥಳೀಯ ಕಲಾವಿದರ ಜತೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರಾಗಿದ್ದ ಕಲಾವಿದರನ್ನೂ ಒಳಗೊಂಡ ಸಾಂಸ್ಕೃತಿಕ ವೈಭವ ಜನಮನ ರಂಜಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ನೃತ್ಯ, ಗಾಯನ, ವಾದನ, ರಸಮಂಜರಿ, ಕವಿಗೋಷ್ಠಿ, ಸ್ಪರ್ಧೆ, ಕುಸ್ತಿ, ನಿರೂಪಣೆಯಾದಿಯಾಗಿ ಯಾರೊಬ್ಬರಿಗೂ ಈವರೆಗೆ ಗೌರವಧನ ಸಂದಾಯವಾಗಿಲ್ಲ.
‘ಉತ್ಸವದ ಮೊದಲ ದಿನ ಪಾಲ್ಗೊಂಡ ಕಲಾವಿದರಿಗೆ ಮೇ 2ರ ದಿನಾಂಕ ನಮೂದಿಸಿದ ಚೆಕ್ ಹಾಗೂ ಎರಡನೇಯ ದಿನ ವೇದಿಕೆ ಹಂಚಿಕೊಂಡವರಿಗೆ ಮೇ 6ರ ದಿನಾಂಕ ನಮೂದಿಸಿ ಚೆಕ್ ನೀಡಲಾಗಿದೆ. ಈ ಮೊದಲು ನಡೆದ ಉತ್ಸವದಲ್ಲಿ ಇಂಥ ಘಟನೆಗಳು ನಡೆದಿರಲಿಲ್ಲ. ಪೆಂಡಾಲ್ ಹಾಕಿದ ಗುತ್ತಿಗೆದಾರರಿಗೆ ಹಣ ಸಂದಾಯ ವಿಳಂಬವಾದ ಬಗ್ಗೆ ಮಾಹಿತಿಯಿದ್ದು, ಈ ಬಾರಿ ಸಣ್ಣ ಸಣ್ಣ ಮೊತ್ತವನ್ನು ಕೊಟ್ಟಿಲ್ಲ. ಈ ಬಗ್ಗೆ ತಕ್ಷಣಕ್ಕೆ ಪ್ರಶ್ನಿಸಿದ ಕಲಾವಿದರೊಬ್ಬರಿಗೆ ಅಧಿಕಾರಿಗಳು ವಿನಂತಿಸಿಕೊಂಡು ಕಳುಹಿಸಿದ್ದಾರೆ. ಅನಿವಾರ್ಯವಾಗಿ ಸುಮ್ಮನಿರುವ ಸ್ಥಿತಿಯಿದೆ’ ಎಂಬುದು ಬಹುತೇಕ ಕಲಾವಿದರ ಮಾತು.
‘ಮೂಲದ ಪ್ರಕಾರ ರಾಜ್ಯ ಸರ್ಕಾರದಿಂದ ಈವರೆಗೆ ಜಿಲ್ಲಾಡಳಿತದ ಖಾತೆಗೆ ಕದಂಬೋತ್ಸವ ಆಚರಣೆಗೆ ನೀಡುವ ಹಣದ ಮೊತ್ತ ಬಿಡುಗಡೆಯೇ ಆಗಿಲ್ಲ. ಇದರಿಂದಾಗಿ ಕಲಾವಿದರಿಗೆ ಗೌರವಧನ ನೀಡುವ ಜವಾಬ್ದಾರಿಯಿರುವ ಉಪವಿಭಾಗಾಧಿಕಾರಿ ಖಾತೆಯೂ ಖಾಲಿಯಿರುವಂತಾಗಿದೆ. ಜಿಲ್ಲಾಡಳಿತದ ಖಾತೆಯಿಂದ ಉಪವಿಭಾಗಾಧಿಕಾರಿ ಖಾತೆಗೆ ಹಣ ಜಮಾವಣೆಯಾದ ನಂತರವಷ್ಟೇ ಕಲಾವಿದರೆಲ್ಲರೂ ಬ್ಯಾಂಕ್‍ಗಳಿಗೆ ಚೆಕ್ ಹಾಕಬೇಕಷ್ಟೇ. ಆವರೆಗೆ ಕಲಾವಿದರ ಮೊಬೈಲ್‍ಗೆ ಅಧಿಕಾರಿಗಳಿಂದ ಚೆಕ್ ಹಾಕುವ ದಿನ ಮುಂದೂಡುವ ಕೋರಿಕೆಯ ಸಂದೇಶ ಬರುತ್ತಿರುತ್ತವೆ’ ಎಂಬುದು ಹೆಸರು ಹೇಳಲಿಚ್ಛಿಸದ ಹಿರಿಯ ಕಲಾವಿದರೊಬ್ಬರ ಅಭಿಪ್ರಾಯ.
‘ಕದಂಬೋತ್ಸವ ಯಶಸ್ಸಿನಲ್ಲಿ ಜಿಲ್ಲಾಡಳಿತ, ಉಪವಿಭಾಗಾಧಿಕಾರಿಗಳ ಶ್ರಮ ಮಹತ್ವದ್ದಾಗಿದೆ. ಸಾಕಷ್ಟು ಪ್ರಯತ್ನದ ಫಲವಾಗಿ ಕಳೆದೆಲ್ಲ ಕದಂಬೋತ್ಸವಗಳಿಂತ ಅದ್ಧೂರಿಯಾಗಿ ಈ ವರ್ಷ ಉತ್ಸವಾಚರಣೆ ಆಗಿದೆ. ಆದರೆ ಸರ್ಕಾರ ಹಣ ಬಿಡುಗಡೆಗೆ ವಿಳಂಬ ಮಾಡುತ್ತಿರುವ ಕಾರಣ ಯಾವುದೇ ತಪ್ಪಿಲ್ಲದ ಅಧಿಕಾರಿಗಳು ಕಲಾವಿದರ ವಲಯದಲ್ಲಿ ಮುಜುಗರಕ್ಕೆ ಒಳಗಾಗುವಂತಾಗಿದೆ. ಇಂಥ ಸನ್ನಿವೇಶಗಳಿಗೆ ಸರ್ಕಾರ ಎಡೆ ಮಾಡಿಕೊಡಬಾರದು. ತಕ್ಷಣ ಜಿಲ್ಲಾಡಳಿತದ ಖಾತೆಗೆ ಹಣ ಬಿಡುಗಡೆ ಮಾಡಿ, ಆ ಮೂಲಕ ಉಪವಿಭಾಗಾಧಿಕಾರಿ ಖಾತೆಗೆ ವರ್ಗಾಯಿಸಬೇಕು. ಕಲಾವಿದರಿಗೆ ನಿಗದಿತ ದಿನದಂದು ಹಣ ಕೈಗೆ ಸಿಗುವಂತಾಗಬೇಕು’ ಎನ್ನುತ್ತಾರೆ ಅವರು.
ಶೀಘ್ರ ಹಣ ಬಿಡುಗಡೆ
ಕೆಲವು ಕಲಾವಿದರು ನಿಗದಿತ ದಿನಾಂಕಕ್ಕಿಂತ ಪೂರ್ವ ಚೆಕ್‍ಅನ್ನು ಬ್ಯಾಂಕ್‍ಗೆ ಹಾಕಿದ ಕಾರಣ ಗೊಂದಲ ಉಂಟಾಗಿತ್ತು. ಹೀಗಾಗಿ ಕಲಾವಿದರಿಗೆ ಸಂದೇಶ ನೀಡಲಾಗಿದೆ. ಶೀಘ್ರವೇ ಸರ್ಕಾರದಿಂದ ಹಣ ಬಿಡುಗಡೆಯಾಗಲಿದ್ದು ಕಲಾವಿದರಿಗೆ ನೀಡಿದ ಚೆಕ್‍ನಲ್ಲಿ ನಮೂದಿಸಿದ ದಿನದಂದು ಅವರು ಬ್ಯಾಂಕ್‍ಗೆ ಚೆಕ್ ಹಾಕಬಹುದಾಗಿದೆ ಎಂದು ಶಿರಸಿ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.