ADVERTISEMENT

ಶಿರಸಿ: ಸಹಕಾರ ಕ್ಷೇತ್ರದಲ್ಲಿ ‘ರಾಜಕೀಯ’ ಪ್ರವೇಶ

ರಾಜಕೀಯ ನಾಯಕರ ಪ್ರತಿಷ್ಠೆಗೆ ವೇದಿಕೆಯಾಗಿರುವ ಕೆಡಿಸಿಸಿ ಬ್ಯಾಂಕ್ ಚುನಾವಣೆ

ರಾಜೇಂದ್ರ ಹೆಗಡೆ
Published 16 ಅಕ್ಟೋಬರ್ 2025, 4:52 IST
Last Updated 16 ಅಕ್ಟೋಬರ್ 2025, 4:52 IST
ಶಿರಸಿಯಲ್ಲಿರುವ ಕೆಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ 
ಶಿರಸಿಯಲ್ಲಿರುವ ಕೆಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ    

ಶಿರಸಿ: ಸಹಕಾರ ಕ್ಷೇತ್ರದಲ್ಲಿ ರಾಜ್ಯಕ್ಕೆ ಮಾದರಿ ಆಗಿರುವ ಉತ್ತರ ಕನ್ನಡದಲ್ಲಿ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಅಧಿಕೃತವಾಗಿ ರಾಜಕೀಯ ಪ್ರವೇಶವಾಗಿದೆ. ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮತ್ತು ಪ್ರಭಾವಿ ಶಾಸಕ ಶಿವರಾಮ ಹೆಬ್ಬಾರ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ‌.

ಬ್ಯಾಂಕ್‍ನಲ್ಲಿ ಒಟ್ಟು 16 ನಿರ್ದೇಶಕ ಸ್ಥಾನಗಳಿವೆ. ಅ.25ಕ್ಕೆ ಎಲ್ಲ ಸ್ಥಾನಗಳಿಗೆ ಚುನಾವಣೆ ಜರುಗಲಿದೆ. ಶಾಸಕ ಶಿವರಾಮ ಹೆಬ್ಬಾರ ಹಾಲಿ ಅಧ್ಯಕ್ಷರಾಗಿದ್ದಾರೆ. ಹಿಂದಿನ ಆಡಳಿತ ಮಂಡಳಿಯಲ್ಲಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕೂಡ ನಿರ್ದೇಶಕರಿದ್ದು, ಈಗ ಇವರಿಬ್ಬರ ಶಕ್ತಿ ಪ್ರದರ್ಶನಕ್ಕೆ ಬ್ಯಾಂಕ್ ಚುನಾವಣೆ ವೇದಿಕೆಯಾಗಿದೆ. ಪರಿಣಾಮ ಎಂದೂ ಕಾಣದಂತಹ ರಾಜಕೀಯ ಈ ಬಾರಿ ಕಾಣುತ್ತಿದೆ ಎಂಬ ಅಭಿಪ್ರಾಯ ಸಹಕಾರ ಕ್ಷೇತ್ರದ ಪ್ರಮುಖರಿಂದ ವ್ಯಕ್ತವಾಗಿದೆ.‌

ಬ್ಯಾಂಕ್ ಆಡಳಿತ ಮಂಡಳಿಗೆ ಕಳೆದ ಚುನಾವಣೆಯಲ್ಲಿ ಸಹಕಾರಿಗಳ ಮಧ್ಯೆ ಎರಡು ತಂಡ ಇತ್ತು. ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಪ್ರವೇಶವಾಗಿದ್ದರೂ ಸಹ ಸಹಕಾರಿ ನಾಯಕರ ಹೆಸರಲ್ಲಿ ಚುನಾವಣೆ ನಡೆದಿತ್ತು. ಆದರೆ ಈ ಬಾರಿ ನೇರವಾಗಿ ರಾಜಕೀಯ ಪಕ್ಷಗಳ ನಾಯಕರ ಹೆಸರಲ್ಲಿ ಚುನಾವಣೆ ರಂಗೇರಿದೆ. ಬೆಳಗಾವಿಯ ಡಿಸಿಸಿ ಬ್ಯಾಂಕ್ ರಾಜಕಾರಣದಂತೆ ಇಲ್ಲಿಯೂ ಬಿಜೆಪಿಯಲ್ಲಿ ಗುರುತಿಸಿಕೊಂಡ ಕೆಲವರು ಕಾಂಗ್ರೆಸ್ ನಾಯಕರ ಜತೆ, ಕಾಂಗ್ರೆಸ್‍ನ ಕೆಲವರು ಬಿಜೆಪಿ ಪ್ರಮುಖರ ಜತೆ ಗುರುತಿಸಿಕೊಂಡಿದ್ದಾರೆ. 

ADVERTISEMENT

ಬಿಜೆಪಿ ಬೆಂಬಲಿತ ಸಹಕಾರ ಭಾರತಿ ತಂಡ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಜತೆಗಿದೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯವಿಲ್ಲ ಎಂದು ರಾಜಕೀಯ ನಾಯಕರು ಈವರೆಗೆ ಸಮರ್ಥನೆ ಮಾಡಿದರೂ ಈ ಬಾರಿ ಜಿಲ್ಲೆಯ ಪ್ರಮುಖ ನಾಯಕರೆನಿಸಿಕೊಂಡವರೇ ರಾಜಕೀಯ ಅಧಿಕಾರ, ಪಕ್ಷದ ಬಲ ಬಳಸಿಕೊಂಡು ಸಹಕಾರ ಕ್ಷೇತ್ರದ ಬ್ಯಾಂಕ್ ಒಂದಕ್ಕೆ ಬರಲು ಸಿದ್ಧತೆ ನಡೆಸುತ್ತಿರುವುದು ಬಹು ಚರ್ಚಿತ ವಿಷಯವಾಗಿದೆ.

‘ಸಹಕಾರ ಚುನಾವಣೆಯಲ್ಲಿ ರಾಜಕೀಯ ಮಾಡುವ ಉದ್ದೇಶಕ್ಕೆ ಹೆಬ್ಬಾರ ಅವರ ಹೆಸರು ಕೆಡಿಸಲು ವಿರೋಧಿಗಳು ಬ್ಯಾಂಕ್ ಕುರಿತು ಅಪಪ್ರಚಾರ ಆರಂಭಿಸಿದ್ದು, ಇದು ಬ್ಯಾಂಕ್ ಘನತೆಗೆ ಧಕ್ಕೆ ತರುವ ಸಾಧ್ಯತೆಯಿದೆ’ ಎಂಬುದು ಬಹುತೇಕ ಮತದಾರರ ಮಾತಾಗಿದೆ.

ಹೆಬ್ಬಾರ ಮತ್ತು ವೈದ್ಯರು 16 ನಿರ್ದೇಶಕ ಸ್ಥಾನಗಳಿಗೂ ತಮ್ಮದೇ ಆದ ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ಕಾಂಗ್ರೆಸ್‍ನ ಆರ್.ವಿ. ದೇಶಪಾಂಡೆ, ಸತೀಶ ಸೈಲ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಮಂಕಾಳ ವೈದ್ಯ ಒಂದೆಡೆ ಗುರುತಿಸಿಕೊಂಡರೆ, ಇನ್ನೊಂದೆಡೆ ಹೆಬ್ಬಾರ ಜತೆ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಎಸ್.ಎಲ್. ಘೋಟ್ನೇಕರ್, ಮಾಜಿ ಶಾಸಕರಾದ ವಿ.ಎಸ್. ಪಾಟೀಲ, ಸುನೀಲ ಹೆಗಡೆ ಕಾಣಿಸಿಕೊಂಡಿದ್ದಾರೆ. ಹೀಗಾಗಿ 16 ಸ್ಥಾನಗಳಿಗೂ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.

ರಾಜಕಾರಣದ ಅಡಿಪಾಯವೇ ಸಹಕಾರ ಕ್ಷೇತ್ರ. ಹಾಗಾಗಿ ಸಹಕಾರ ರಂಗದಲ್ಲಿ ರಾಜಕೀಯ ಇಲ್ಲ ಎಂಬುದು ಸುಳ್ಳು. ರಾಜಕಾರಣವಿದೆ ಎಂಬ ಮಾತ್ರಕ್ಕೆ ಸಂಘರ್ಷ ಅನಿವಾರ್ಯವಲ್ಲ
ಶಿವರಾಮ ಹೆಬ್ಬಾರ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ
ಘಟಾನುಘಟಿಗಳು ಒಂದೆಡೆ
ಶಿವರಾಮ ಹೆಬ್ಬಾರ ಬಿಜೆಪಿಗೆ ಅನ್ಯಾಯ ಮಾಡಿದ್ದಾರೆಂಬ ಕಾರಣ ಒಡ್ಡಿ ಬಿಜೆಪಿಗರು ಸಹಕಾರ ಭಾರತಿ ಮೂಲಕ ಕಾಂಗ್ರೆಸ್‍ನ ಮಂಕಾಳ ವೈದ್ಯ ಬಣಕ್ಕೆ ಬೆಂಬಲ ನೀಡಿದ್ದಾರೆ. ಬಿಜೆಪಿ ಬಿಟ್ಟು ಹೊರ ಬಂದಿರುವ ಹೆಬ್ಬಾರ ಅವರು ಕಾಂಗ್ರೆಸ್ ಸೇರ್ಪಡೆಯಾದರೆ ಅಲ್ಲಿ ಶಕ್ತಿ ಕೇಂದ್ರವಾಗುತ್ತಾರೆ ಎಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ಹೆಬ್ಬಾರ ವಿರುದ್ಧ ಒಂದಾಗಿದ್ದಾರೆ. ಜಿಲ್ಲೆಯ ಘಟಾನುಘಟಿ ನಾಯಕರು ಹೆಬ್ಬಾರರನ್ನು ಮಣಿಸಲು ಜತೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಹೆಬ್ಬಾರ ಜತೆಗೂಡಿ ನಿರ್ದೇಶಕರಾಗಿ ಆಯ್ಕೆಗೊಂಡ ಕೆಲವು ನಿರ್ದೇಶಕರು ಹೆಬ್ಬಾರರ ಮೇಲೆ ದೂಷಣೆ ಮಾಡಿ ಅವರಿಂದ ದೂರಾಗಿದ್ದಾರೆ. ಆದರೆ ಹೆಬ್ಬಾರ ಅವರು ಬ್ಯಾಂಕ್‍ನಲ್ಲಿ ಮಾಡಿದ ಸಾಧನೆ ಕಾರ್ಯಚಟುವಟಿಕೆ ಪ್ರಗತಿ ಮುಂದಿಟ್ಟು ಮತ್ತೊಮ್ಮೆ ಆಯ್ಕೆಗೊಳ್ಳುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.