
ಶಿರಸಿ: ಇಲ್ಲಿನ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೋರ್ಟ್ ಮೊರೆ ಹೋಗಿದ್ದ ಸ್ಥಾನಗಳ ಪೈಕಿ ಎರಡು ಸ್ಥಾನಗಳ ಮತ ಎಣಿಕೆ ಸೋಮವಾರ ನಡೆದಿದೆ. 16 ನಿರ್ದೇಶಕ ಸ್ಥಾನಗಳ ಪೈಕಿ 13 ನಿರ್ದೇಶಕ ಸ್ಥಾನಗಳ ಫಲಿತಾಂಶ ಈಗ ಪ್ರಕಟವಾಗಿದ್ದು, ಇನ್ನೂ 3 ಸ್ಥಾನಗಳ ಫಲಿತಾಂಶ ಬಾಕಿಯುಳಿದಿದೆ.
ಧಾರವಾಡ ಹೈ ಕೋರ್ಟ್ ಅಂತಿಮ ಆದೇಶದಂತೆ ಉಪವಿಭಾಗಾಧಿಕಾರಿ ಕೆ.ಕಾವ್ಯರಾಣಿ ಅವರು ಕಾರವಾರ ತಾಲ್ಲೂಕಿನ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಮತ ಕ್ಷೇತ್ರದ ಮತ ಎಣಿಕೆ ನಡೆಸಿದರು. ಪ್ರಕಾಶ ಗುನಗಿ 7 ಮತಗಳನ್ನು ಪಡೆದಿದ್ದರೆ ಮಂಕಾಳ ವೈದ್ಯ ಬೆಂಬಲಿಗ ನಂದಕಿಶೋರ ನಾಯ್ಕ 5 ಮತಗಳನ್ನು ಪಡೆದು ಸೋಲು ಒಪ್ಪಿಕೊಂಡರು. ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಾಸಕ ಸತೀಶ ಸೈಲ್ ಯಾವುದೇ ಮತ ಪಡೆದಿಲ್ಲ.
ಔದ್ಯೋಗಿಕ, ನೇಕಾರರ ಸಹಕಾರ ಸಂಘಗಳ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ನಡೆದು ಮಂಕಾಳ ವೈದ್ಯ ಬೆಂಬಲಿಗ ವಿಶ್ವನಾಥ ಭಟ್ 17 ಮತಗಳನ್ನು ಪಡೆದು ವಿಜಯಿಯಾದರೆ ಶಿವರಾಮ ಹೆಬ್ಬಾರ ಅವರ ಬೆಂಬಲಿಗ ರಾಜೇಂದ್ರ ಹೆಗಡೆ 9 ಮತಗಳನ್ನು ಪಡೆದು ಸೋಲುಂಡರು. ಚುನಾವಣೆ ಪ್ರಕ್ರಿಯೆಯಲ್ಲಿ ಸಹಾಯಕ ಚುನಾವಣಾ ಅಧಿಕಾರಿ ಅಜಿತ ಶಿರಹಟ್ಟಿ ಪಾಲ್ಗೊಂಡಿದ್ದರು.
ಧಾರವಾಡ ಹೈ ಕೋರ್ಟ್ ಆದೇಶದ ಬಳಿಕವೇ ಇನ್ನುಳಿದ ಮೂರು ನಿರ್ದೇಶಕ ಸ್ಥಾನದ ಮತ ಎಣಿಕೆ ನಡೆಯಬೇಕಿದೆ. ಹೆಬ್ಬಾರ ಅವರಿಗೆ ಬಹುಮತ ಲಭಿಸಿದ್ದರೂ ಈ ಫಲಿತಾಂಶ ಬರದೇ ಅಧ್ಯಕ್ಷ ಗಾದಿ ಏರುವಂತಿಲ್ಲ. ಸಿದ್ದಾಪುರ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳ ಮತ ಕ್ಷೇತ್ರ, ಗ್ರಾಹಕರ ಉತ್ಪಾದನೆ ಹಾಗೂ ಸಂಸ್ಕರಣಾ ಸಂಘಗಳ ಮತ ಕ್ಷೇತ್ರ ಹಾಗೂ ಅರ್ಬನ್ ಬ್ಯಾಂಕ್ ಕೃಷಿಯೇತರ ಸಹಕಾರಿ ಸಂಘಗಳ ಮತ ಕ್ಷೇತ್ರ ಕುರಿತಂತೆ ಸ್ಪರ್ಧಿಗಳು ಹೈ ಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದಾರೆ.
ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಕೆಡಿಸಿಸಿ ಬ್ಯಾಂಕ್ ಶಾಖೆಗಳಲ್ಲಿ ವ್ಯವಹಾರಕ್ಕೆ ಸಮಸ್ಯೆ ಆಗುತ್ತಿದೆ. ಆದಷ್ಟು ಶೀಘ್ರದಲ್ಲಿ ಉಳಿದ ಫಲಿತಾಂಶ ಪ್ರಕಟಗೊಳ್ಳಬೇಕಿದೆ.
–ಶಿವರಾಮ ಹೆಬ್ಬಾರ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ
ಬಹುಮತ ಪಡೆದ ಹೆಬ್ಬಾರ ಬಣ
ಈ ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ ಶಿವರಾಮ ಹೆಬ್ಬಾರ ಬಣಕ್ಕೆ ಸೋಮವಾರದ ಮತ ಎಣಿಕೆ ಬಹುಮತ ಸ್ಪಷ್ಟಪಡಿಸಿದಂತಾಗಿದೆ. ಅಧ್ಯಕ್ಷ ಸ್ಥಾನಕ್ಕಾಗಿ 9 ನಿರ್ದೇಶಕರ ಬೆಂಬಲ ಅಗತ್ಯವಿದೆ. ಮತ ಎಣಿಕೆಯಲ್ಲಿ ಎರಡೂ ಕಡೆಯಿಂದ ತಲಾ ಒಬ್ಬಬ್ಬರ ವಿಜಯವಾದರೂ ಈ ವಿಜಯದೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ಅಗತ್ಯವಾದ 9 ನಿರ್ದೇಶಕರ ಬೆಂಬಲ ಹೆಬ್ಬಾರ ಅವರಿಗೆ ಲಭಿಸಿದಂತಾಗಿದೆ. ಇನ್ನೂ ಮೂರು ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟ ಆಗಬೇಕಿದೆಯಾದರೂ ಹೆಬ್ಬಾರ ಅಥವಾ ಅವರ ಬೆಂಬಲಿಗರೇ ಬ್ಯಾಂಕ್ ಅಧ್ಯಕ್ಷರಾಗುವುದು ಖಚಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.