ADVERTISEMENT

ಶಿರಸಿ: ಬಿಳೆಹೊಳೆಯ ಶ್ವೇತ ಸುಂದರಿ 'ಕೆಪ್ಪಜೋಗ'

ಕವಲಾಗಿ ಹರಿದು ಏಳು ಹಂತದಲ್ಲಿ ಜಲಪಾತ ಸೃಷ್ಟಿ: ಚಾರಣ ಅನಿವಾರ್ಯ

ರಾಜೇಂದ್ರ ಹೆಗಡೆ
Published 22 ಡಿಸೆಂಬರ್ 2024, 5:40 IST
Last Updated 22 ಡಿಸೆಂಬರ್ 2024, 5:40 IST
ಶಿರಸಿ ತಾಲ್ಲೂಕಿನ ಬನಗೆರೆ ಸಮೀಪದಲ್ಲಿ ಬಿಳೆಹೊಳೆಯಿಂದ ಸೃಷ್ಟಿಗೊಂಡ ಕೆಪ್ಪಜೋಗ 
ಶಿರಸಿ ತಾಲ್ಲೂಕಿನ ಬನಗೆರೆ ಸಮೀಪದಲ್ಲಿ ಬಿಳೆಹೊಳೆಯಿಂದ ಸೃಷ್ಟಿಗೊಂಡ ಕೆಪ್ಪಜೋಗ    

ಶಿರಸಿ: ಹಸಿರು ಕ್ಯಾನ್ವಾಸ್ ಮೇಲೆ ಬಿಳಿಯ ಬಣ್ಣದ ತೈಲ ಚಿತ್ರದಂತೆ ಕಂಗೊಳಿಸುವ ತಾಲ್ಲೂಕಿನ ಬನಗೆರೆ ಸಮೀಪದ ಬಿಳೆಹೊಳೆಯ ಶ್ವೇತ ಸುಂದರಿ ‘ಕೆಪ್ಪಜೋಗ’ ಪ್ರವಾಸಿಗರು ಹಾಗೂ ಚಾರಣಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.

ನಗರದಿಂದ 40 ಕಿ.ಮೀ ದೂರದ ಕೊಡ್ನಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನಗೆರೆ ಬಳಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಬಿಳಿಹೊಳೆ ಜಲಪಾತವಾಗಿ ಮುಂದೆ ಸಾಗುತ್ತದೆ. ಬೃಹದಾಕಾರದ ಮರಗಳ ಕೆಳಗೆ ತೆವಳುತ್ತ ಬರುವ ಬಿಳೆಹೊಳೆಯು ಸುಮಾರು 80–100 ಅಡಿ ಎತ್ತರದಿಂದ ಧುಮ್ಮಿಕುತ್ತದೆ. ಕಾಡುದಾರಿಯಲ್ಲಿ ನಾಲ್ಕು ಕಿ.ಮೀ  ಹೆಜ್ಜೆ ಹಾಕುತ್ತ ಸಾಗಿದರೆ ಹಸಿರು ಫ್ರೇಮಿನ ಒಳಗೆ ಕಾಣುವ ಕೆಪ್ಪಜೋಗ ಜಲಪಾತ ನೋಡುಗರ ಮನತಣಿಸುತ್ತದೆ.

ಹೆಬ್ಬಂಡೆಯಿಂದ ಧುಮ್ಮಿಕ್ಕುವ ಈ ಜಲಪಾತವು ಜೀರುಂಡೆಗಳ ಗಾಯನ, ಹಕ್ಕಿಗಳ ಕಲರವ, ಕಾಡುಜೀವಿಗಳ ಮಾತು ಆಲಿಸುತ್ತ ಮನುಷ್ಯರಿಂದ ಬಹುತೇಕ ಅಜ್ಞಾತವಾಗಿತ್ತು. ಸುತ್ತಮುತ್ತಲಿನ ಜನರನ್ನು ಹೊರತುಪಡಿಸಿದರೆ ಈ ಜಲಪಾತ ವೀಕ್ಷಿಸಿದವರು ಕಡಿಮೆ ಮಂದಿ ಮಾತ್ರ. ಇದಕ್ಕೆ ಕಾರಣವೂ ಇದೆ. ಜಲಪಾತಕ್ಕೆ ಸಾಗಲು ಸೂಕ್ತ ವ್ಯವಸ್ಥೆ ಇಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಚಾರಣದ ಗೀಳಿಗೆ ಬಿದ್ದ ಪ್ರವಾಸಿಗರು ಹೆಚ್ಚೆಚ್ಚು ಬರುತ್ತಿರುವ ಕಾರಣಕ್ಕೆ ಮುನ್ನೆಲೆಗೆ ಬಂದು ಬಹುಬೇಗ ಪ್ರಸಿದ್ಧಿ ಪಡೆಯುತ್ತಿದೆ. 

ADVERTISEMENT
ಒತ್ತಡದ ನಡುವೆ ನಲುಗುವ ನಗರವಾಸಿಗಳಿಗೆ ಕೆಪ್ಪಜೋಗ ಮನೋಲ್ಲಾಸ ನೀಡುತ್ತದೆ. ಮನಸ್ಸಿನಲ್ಲಿ ಪ್ರಶಾಂತ ಮನೆ ಮಾಡುತ್ತದೆ. ಚಾರಣಕ್ಕೆ ಈ ಪ್ರದೇಶ ಸೂಕ್ತ
ಅಮಿತ್ ಗೋಸಾವಿ, ಚಾರಣಿಗ

‘ಅಗಲವಾದ ಬಂಡೆಕಲ್ಲಿನಲ್ಲಿ ಸರಾಗವಾಗಿ ಹರಿಯುವ ನೀರು ಹಲವಾರು ಕವಲುಗಳಿಂದ ಹರಿಯುತ್ತ, ಸಾಗುತ್ತ ಏಳು ಹಂತದಲ್ಲಿ ಜಲಧಾರೆಯಾಗಿ ಧುಮ್ಮಿಕ್ಕುತ್ತದೆ. ಈ ಏಳು ಜಲಧಾರೆಗಳು ಒಮ್ಮೆಲೇ ಕಾಣುವುದಿಲ್ಲ. ಅಷ್ಟಿಷ್ಟು ದೂರದಲ್ಲಿ ನೆಲಕ್ಕಪ್ಪಳಿಸುತ್ತ ತನ್ನನ್ನು ಮತ್ತೆ ಮತ್ತೆ ನೋಡುವಂತೆ ಮಾಡುತ್ತವೆ. ಇದರ ಜತೆ, ಜಲರಾಶಿಯ ನಡುವೆ ದುರ್ಗದ ಬೆಟ್ಟ, ಮಂಜು ಮುಸುಕಿನ ಸೊಬಗು ಪರಿಸರ ಆರಾಧಕರ ಕಣ್ಣಿಗೆ ಹಬ್ಬವಾಗಿದೆ. ಹಂತ ಹಂತವಾಗಿ ನೀರು ಕೆಳಗೆ ಬೀಳುವುದರಿಂದ ಇಡೀ ವಾತಾವರಣದಲ್ಲಿ ಕೇವಲ ಜಲಧಾರೆಯ ಸಪ್ಪಳ ಕೇಳುತ್ತದೆ. ಹೀಗಾಗಿ ಕೆಪ್ಪಜೋಗ ಎಂದು ಹೆಸರು ಬಂದಿರುವ ಸಾಧ್ಯತೆಯಿದೆ’ ಎಂಬುದಾಗಿ ಸ್ಥಳೀಯರು ಹೇಳುತ್ತಾರೆ.

ಜಲಪಾತ ವೀಕ್ಷಣೆ ಹೇಗೆ?

ಕೆಪ್ಪಜೋಗವು ಆಕರ್ಷಕವಾಗಿದ್ದರೂ ಇದೊಂದು ಪ್ರವಾಸಿ ತಾಣವಾಗಿ ರೂಪುಗೊಂಡಿಲ್ಲ. ಇಲ್ಲಿಗೆ ಹೋಗುವ ಯಾವ ಮಾರ್ಗಸೂಚಿಯೂ ಇಲ್ಲ. ಶಿವಗಂಗಾ ಜಲಪಾತದಿಂದ  ಕೇವಲ 10 ಕಿ.ಮೀ  ಅಂತರದಲ್ಲಿ ಈ ಜಲಪಾತವಿದೆ. ಶಿರಸಿಯಿಂದ ಜಡ್ಡಿಗದ್ದೆಗೆ ತೆರಳುವ ಮಾರ್ಗದ ಮಧ್ಯ ಸಿಗುವ ಬನಗೆರೆ ಬಳಿ ಇದರ ವೀಕ್ಷಣಾ ಸ್ಥಳವಿದೆ. ಜಲಪಾತಕ್ಕೆ ತೆರಳಲಾಗದವರು ದೂರದಿಂದಲೇ ನೋಡಬಹುದಾಗಿದೆ. ಮುಖ್ಯರಸ್ತೆಯಿಂದ ಜಲಪಾತದ ಬಳಿ ತೆರಳಲು ಭೂಸನಕೇರಿ ಮಾರ್ಗವಾಗಿ ತೆಂಗಿನಮುಡಿಗೆ 3 ಕಿ.ಮೀ. ವಾಹನದ ಮೂಲಕ ತೆರಳಬಹುದು. ಅಲ್ಲಿಂದ ಮುಂದೆ ವಾಹನ ಕೊಂಡೊಯ್ಯಲು ಸಾಧ್ಯವಿಲ್ಲ. ಕಾಡಿನ ನಡುವೆ 4 ಕಿ.ಮೀ. ಕಾಲ್ನಡಿಗೆಯ ಮೂಲಕ ಹೋಗುವುದು ಅನಿವಾರ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.