
ಶಿರಸಿ: ಮಂಗಳವಾರ ಸಂಭವಿಸುವ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಮಾರಿಕಾಂಬಾ ದೇವಿಗೆ ಪೂಜೆ ಹಾಗೂ ಹರಕೆ ಸಲ್ಲಿಕೆಗೆ ಸಮಯ ಮಿತಿಗೊಳಿಸಲ್ಪಟ್ಟ ಕಾರಣ, ಸೋಮವಾರ ಜಾತ್ರಾ ಚಪ್ಪರದಲ್ಲಿ ಅಪಾರ ಜನಸಂದಣಿ ಕಂಡುಬಂತು. ದೇವಿಯ ದರ್ಶನ ಮತ್ತು ಹರಕೆ ಸಲ್ಲಿಸಲು ಭಕ್ತರು ಬೆಳಿಗ್ಗೆಯಿಂದಲೇ ಜಾತ್ರಾ ಗದ್ದುಗೆಯತ್ತ ಹರಿದುಬಂದಿದ್ದು, ದಿನವಿಡೀ ಜನ ಜಂಗುಳಿ ಆವರಿಸಿತು.
ಗ್ರಹಣದ ದಿನ ಜಾತ್ರಾ ಆಚರಣೆ ಕ್ರಮಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಪೂಜೆ ಹಾಗೂ ದರ್ಶನ ಸಮಯವನ್ನು ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ದೂರದೂರಿನಿಂದ ಆಗಮಿಸುವ ಭಕ್ತರು ತಮ್ಮ ಹರಕೆಗಳನ್ನು ಮುಂಚಿತವಾಗಿ ಸಲ್ಲಿಸಲು ಸೋಮವಾರವೇ ಗದ್ದುಗೆಗೆ ಆಗಮಿಸಿದರು. ಪರಿಣಾಮವಾಗಿ ಗದ್ದುಗೆ, ಜಾತ್ರಾ ಚಪ್ಪರ ಒಳಾಂಗಣ, ಜಾತ್ರೆ ಮೈದಾನ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಯಿತು. ಗ್ರಹಣದ ಪರಿಣಾಮ ಜಾತ್ರೆಯ ದಿನಚರಿಯಲ್ಲಿ ಬದಲಾವಣೆ ತಂದರೂ, ಭಕ್ತರ ಉತ್ಸಾಹದಲ್ಲಿ ಯಾವುದೇ ಕಡಿಮೆ ಕಾಣಿಸಲಿಲ್ಲ.
ಧಾರ್ಮಿಕ ನಂಬಿಕೆಗಳ ಪ್ರಕಾರ ಗ್ರಹಣ ಸಮಯದಲ್ಲಿ ಪೂಜೆ ವಿಧಿವಿಧಾನಗಳಿಗೆ ಕೆಲವು ನಿಯಮಾವಳಿ ಪಾಲಿಸಲಾಗುತ್ತದೆ. ಅದೇ ಹಿನ್ನೆಲೆಯಲ್ಲಿ ಈ ಬಾರಿ ಸಮಯ ಮಿತಿಗೊಳಿಸಲಾಗಿದೆ. ದೇವಸ್ಥಾನ ಮೂಲಗಳ ಪ್ರಕಾರ, ಗ್ರಹಣ ಮುಕ್ತಿಯಾದ ಬಳಿಕ ಶುದ್ಧೀಕರಣ ವಿಧಿ ನೆರವೇರಿಸಿ ರಾತ್ರಿ 7.30ರ ನಂತರ ಸಾಮಾನ್ಯ ದರ್ಶನ ವ್ಯವಸ್ಥೆ ಪುನರಾರಂಭಿಸಲಾಗುತ್ತದೆ.
ಸ್ಥಳೀಯ ವ್ಯಾಪಾರಿಗಳಿಗೂ ಉತ್ತಮ ವಹಿವಾಟು ಕಂಡುಬಂತು. ಪೂಜೆ ಸಾಮಗ್ರಿ, ಹೂವು, ಹಣ್ಣು ಮತ್ತು ಪ್ರಸಾದ ಅಂಗಡಿಗಳಲ್ಲಿ ಖರೀದಿ ಜೋರಾಗಿತ್ತು. ಜಾತ್ರೆಯ ಸಂಭ್ರಮದ ಜತೆಗೆ ಭಕ್ತರ ಭಕ್ತಿ ಭಾವನೆಗೂ ಒತ್ತು ದೊರಕಿತು. ‘ಗ್ರಹಣದ ಕಾರಣಕ್ಕೆ ಮಂಗಳವಾರ ಸಮಯ ಕಡಿಮೆ ಇರುವುದರಿಂದ ನಾವು ಕುಟುಂಬ ಸಮೇತ ಸೋಮವಾರವೇ ಹರಕೆ ಸಲ್ಲಿಸಿದ್ದೇವೆ’ ಎಂದು ಜಾತ್ರೆಗೆ ಆಗಮಿಸಿದ ಭಕ್ತರೊಬ್ಬರು ಹೇಳಿದರು.
ಮಂಗಳವಾರ ಗ್ರಹಣ ಕಾಲದಲ್ಲಿ ಹಣ್ಣುಕಾಯಿ ಸೇವೆಗೆ ಅವಕಾಶವಿಲ್ಲ. ದೇವಿಯ ದರ್ಶನಕ್ಕಷ್ಟೇ ಅವಕಾಶ ಇರುತ್ತದೆ.ಆರ್.ಜಿ.ನಾಯ್ಕ ಮಾರಿಕಾಂಬಾ ದೇವಾಲಯದ ಅಧ್ಯಕ್ಷ
ಜಾತ್ರೆಗೆ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದ ಕಾರಣ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಕಾಣಿಸಿಕೊಂಡಿತು. ಜಾತ್ರಾ ಗದ್ದುಗೆ ಸುತ್ತಮುತ್ತಲಿನ ಪ್ರದೇಶ ಬಸ್ ನಿಲ್ದಾಣ ಮಾರುಕಟ್ಟೆ ಯಲ್ಲಾಪುರ ಹುಬ್ಬಳ್ಳಿ ಕುಮಟಾ ರಸ್ತೆಗಳಲ್ಲಿ ಕಿಲೋಮೀಟರ್ ಗಳವರೆಗೆ ವಾಹನಗಳ ಸರತಿ ಸಾಲು ಕಂಡು ಬಂದಿತು. ಪೊಲೀಸರು ವಾಹನ ದಟ್ಟಣೆ ನಿಯಂತ್ರಿಸಲು ಹರಸಾಹಸಪಟ್ಟರು. ಸಂಜೆಯ ವೇಳೆಗೆ ವಾಹನ ದಟ್ಟಣೆ ತಾರಕಕ್ಕೇರಿದ್ದು ವಾಹನ ಸವಾರರು ಆಮೆ ಗತಿಯಲ್ಲಿ ಸಾಗಬೇಕಾದ ಪರಿಸ್ಥಿತಿ ಉಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.