
ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿ ಹರಕೆ ತೀರಿಸಿದ ಭಕ್ತರು
ಶಿರಸಿ: ಮಲೆನಾಡಿನ ಆರಾಧ್ಯ ದೈವ, ಶಿರಸಿಯ ಮಾರಿಕಾಂಬಾ ದೇವಿಯ ದ್ವಿವಾರ್ಷಿಕ ಜಾತ್ರಾ ಮಹೋತ್ಸವದ ರಥೋತ್ಸವವು ಸಡಗರ, ಸಂಭ್ರಮದಿಂದ ಜರುಗಿತು. ಮಂಗಳವಾರ ರಾತ್ರಿ ಜರುಗಿದ ಧಾರ್ಮಿಕ ವಿಧಿವಿಧಾನಗಳ ನಂತರ ಕಲ್ಯಾಣಿಯಾಗಿದ್ದ ದೇವಿಯು, ಬುಧವಾರ ಬೆಳಿಗ್ಗೆ ರಥಾರೂಢಳಾಗಿ ಭಕ್ತರಿಗೆ ದರ್ಶನ ನೀಡುವ ಮೂಲಕ ಶಿರಸಿಯ ನೆಲದಲ್ಲಿ ಧಾರ್ಮಿಕ ವೈಭವವನ್ನು ಅನಾವರಣಗೊಳಿಸಿದಳು.
ಕಲ್ಯಾಣೋತ್ಸವದ ಬಳಿಕ, ಬುಧವಾರ ಬೆಳಿಗ್ಗೆ ಸರ್ವಾಲಂಕಾರ ಭೂಷಿತಳಾದ ದೇವಿಯನ್ನು ಮಂದಿರದಿಂದ ಹೊರತಂದು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ದೇವಸ್ಥಾನದಿಂದ ಜಾತ್ರಾ ಗದ್ದುಗೆಯವರೆಗಿನ ಸುಮಾರು ಅರ್ಧ ಕಿಲೋಮೀಟರ್ ದೂರವನ್ನು ಭಕ್ತರು ಎರಡು ಗಂಟೆಗಳ ಕಾಲ ರಥ ಎಳೆಯುವ ಮೂಲಕ ಸಾಗಿದರು. ಮೆರವಣಿಗೆಯುದ್ದಕ್ಕೂ ವಾದ್ಯಮೇಳ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಗಮನ ಸೆಳೆದವು.
ದೇವಿ ಮೆರವಣಿಗೆ ಆರಂಭಗೊಳ್ಳುತ್ತಿದ್ದಂತೆ ಭಕ್ತರು ಭಾವಪರವಶರಾದರು. ರಥಕ್ಕೆ ಬಾಳೆಹಣ್ಣು, ಹಾರುಗೋಳಿ, ಕಡಲೆ ಸೋಕಿ ಹರಕೆ ಒಪ್ಪಿಸಿದರು. ಅಡಿಕೆ ಸಿಂಗಾರ, ಬೇವಿನ ಸೊಪ್ಪು ಹಿಡಿದು ಮೈತುಂಬ ಕುಂಕುಮ ಸೋಕಿಕೊಂಡಿದ್ದ ದುರಗಮುರುಗಿಯರು, ಲಂಬಾಣಿ ಮಹಿಳೆಯರು ಭಕ್ತಿಪರವಶಗೊಂಡು ಅರಚಾಡುತ್ತಿದ್ದರು. ಗಾಳಿಮಾರಿಗಳು ಮೈಗೆ ಚಾಟಿ ಬೀಸಿಕೊಂಡು ದೇವಿಯ ಲಕ್ಷ್ಯ ಸೆಳೆಯಲು ಪ್ರಯತ್ನಿಸುತ್ತಿದ್ದರು.
ದೇವಸ್ಥಾನದ ಧರ್ಮದರ್ಶಿ ಮಂಡಳಿ ಸದಸ್ಯರು, ಬಾಬುದಾರರು ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಶ್ರದ್ಧಾಭಕ್ತಿಯಿಂದ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಮಧ್ಯಾಹ್ನ 12.48ರ ನಂತರ ಜಾತ್ರಾ ಗದ್ದುಗೆಯಲ್ಲಿ ದೇವಿಯನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಯಿತು.
ಸಾರ್ವಜನಿಕ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗುರುವಾರ ಬೆಳಿಗ್ಗೆ 5 ಗಂಟೆಯಿಂದ ಭಕ್ತರಿಗೆ ದೇವಿಯ ದರ್ಶನ, ವಿಶೇಷ ಪೂಜೆ ಹಾಗೂ ಹರಕೆ ಸಮರ್ಪಿಸಲು ಅವಕಾಶ ಕಲ್ಪಿಸಲಾಗಿದೆ.
ಮಳೆಯ ಆತಂಕ
ದೇವಿ ಕಲ್ಯಾಣೋತ್ಸವ ದಿನವಾದ ಮಂಗಳವಾರ ಸಂಜೆಯ ವೇಳೆಗೆ ಮಳೆಯ ಹನಿಯ ಸಿಂಚನವಾಗಿತ್ತು. ಗ್ರಾಮೀಣ ಭಾಗದಲ್ಲಿ ಕೆಲ ಸಮಯ ಮಳೆಯಾಗಿತ್ತು. ಬುಧವಾರ ಕೂಡ ರಥೋತ್ಸವದ ನಂತರ ಮಳೆಯ ಸಿಂಚನವಾಗಿದೆ. ಇಡಿ ದಿನ ಮೋಡ ಕವಿದ ವಾತಾವರಣವಿದ್ದು ಸಂಜೆಯ ವೇಳೆಗೆ ಗುಡುಗು ಸಹಿತ ಅರ್ಧ ಗಂಟೆ ಮಳೆಯಾಗಿದೆ. ಇದು ಅಂಗಡಿಕಾರರ ಆತಂಕಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.