ಬಂಧನ
(ಪ್ರಾತಿನಿಧಿಕ ಚಿತ್ರ)
ಯಲ್ಲಾಪುರ: ದರೋಡೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರಗಳೊಂದಿಗೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಕೆ ಮಿಲನ್ ಹೋಟೆಲ್ ಹತ್ತಿರ ಹೊಂಚುಹಾಕುತ್ತಿದ್ದ ವ್ಯಕ್ತಿಗಳ ಮೇಲೆ ಪೊಲೀಸರು ಬುಧವಾರ 8 ಅಂತರರಾಜ್ಯ ದರೋಡೆಕೋರರನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಪುಣೆಯ ಆಟೊ ಚಾಲಕ ಉಮೇಶ ರಾಮಾ ಗಾಯಕವಾಡ, ಥಾಣೆಯ ಆಟೊ ಚಾಲಕ ಶ್ರೀನಾಥ ಶಂಕರ ಜಾಧವ, ಪುಣೆಯ ಪ್ಲಂಬರ್ ಲಖನ್ ಸುಹಾಸ ಜಾಧವ, ಪುಣೆಯ ಆಟೊ ಚಾಲಕ ಪ್ರಶಾಂತ ಅಖಿಲ್ ಪವಾರ, ಚಾಲಕ ವೃತ್ತಿಯ ದೀಪಕ ಚಂದರಲಾಲ್ ದುಂಬಾನಿ, ಥಾಣೆಯ ಬಟ್ಟೆ ವ್ಯಾಪಾರಿ ಸುಂದರ ಕೈಲಾಸ ಗಾಯಕವಾಡ, ಥಾಣೆಯ ಅಂಬಿಕಾ ಪ್ರಕಾಶ ಜಾಧವ ಹಾಗೂ ನಾಗುಬಾಯಿ ಗಣೇಶ ಜಾಧವ ಬಂಧಿತರು.
ಆರೋಪಿತರಿಂದ 1 ಮಾರುತಿ ಎರ್ಟಿಗಾ ಕಾರು, 4 ಮಂಕಿ ಕ್ಯಾಪ್, 1 ಕಾರದಪುಡಿ ಪ್ಯಾಕೆಟ್, 7 ಮೊಬೈಲ್, 4 ಕಬ್ಬಿಣದ ರಾಡ್ ಸೇರಿದಂತೆ ಒಟ್ಟು ₹4 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿಪಡಿಸಿಕೊಂಡಿದ್ದಾರೆ.
‘ಆರೋಪಿತರು ಈ ಹಿಂದೆ ದಕ್ಷಿಣ ಭಾರತದ ಪ್ರವಾಸಿ ತಾಣ, ದೇವಸ್ಥಾನಗಳಿಗೆ ಭೇಟಿ ನೀಡಿ ಜನಸಂದಣಿಯಲ್ಲಿ ಪಿಕ್ ಪಾಕೆಟ್, ಮಹಿಳೆಯರ ಸರ, ಬಳೆ, ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ದಕ್ಷಿಣ ಭಾರತದ ಪ್ರಸಿದ್ಧ ಜಾತ್ರೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಕಲ್ಲಿನಿಂದ ಹಲ್ಲೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಶಿರಸಿಯ ಮಾರಿಕಾಂಬಾ ಜಾತ್ರೆಯಲ್ಲಿ ಕಳವು ಮಾಡುವ ಉದ್ದೇಶದಿಂದ ಮಹಾರಾಷ್ಟ್ರದಿಂದ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಪಿಎಸ್‌ಐ ಸಿದ್ದಪ್ಪ ಗುಡಿ ತಮ್ಮ ತಂಡದೊಂದಿಗೆ ಬೆಳಗಿನ ಜಾವ 5.30ರ ಸುಮಾರಿಗೆ ದರೋಡೆಕೋರರ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.