
ಶಿರಸಿ: ಎರಡು ವರ್ಷಕ್ಕೊಮ್ಮೆ ಭಕ್ತರಿಗೆ ಜಾತ್ರಾ ಮಂಟಪದಲ್ಲಿ ದರ್ಶನ ನೀಡುವ ಜಾಗೃತ ಶಕ್ತಿ ಸ್ವರೂಪಿಣಿ ಶಿರಸಿ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಇದರ ಪ್ರಮುಖ ಘಟ್ಟವಾಗಿ, ರಥ ನಿರ್ಮಾಣಕ್ಕೆ ಬಳಸುವ ಮರಗಳ ತುಂಡುಗಳನ್ನು ಮಂಗಳವಾರ ಅಂಕೆಯ ಹೊರಬೀಡಿನ ಶುಭ ಮುಹೂರ್ತದಲ್ಲಿ ಶ್ರದ್ಧಾಭಕ್ತಿಯಿಂದ ನಗರಕ್ಕೆ ತರಲಾಯಿತು.
ನಿಗದಿತ ಬೆಳಿಗ್ಗೆ 9.55ರಿಂದ 11.47ರ ಒಳಗಿನ ಮುಹೂರ್ತದಲ್ಲಿ, ಅಲಂಕೃತ ಎತ್ತಿನ ಗಾಡಿಗಳಲ್ಲಿ ವಾದ್ಯಮೇಳಗಳ ಮಂಗಳಘೋಷದೊಂದಿಗೆ ಮರದ ಬೃಹತ್ ತುಂಡುಗಳನ್ನು ಮೆರವಣಿಗೆಯ ಮೂಲಕ ತರಲಾಯಿತು. ನಗರದ ಗಡಿಯಿಂದ ಸಾಂಪ್ರದಾಯಿಕವಾಗಿ ಸ್ವಾಗತಿಸಿ, ದೇವಿಯ ದೇವಾಲಯದ ಎದುರಿಗೆ ತರಲಾಯಿತು. ಇದಕ್ಕೂ ಮುನ್ನ ಕಳೆದ ಶುಕ್ರವಾರ 4ನೇ ಹೊರಬೀಡಿನಂದು ತಾಲ್ಲೂಕಿನ ಬ್ಯಾಗದ್ದೆಯ ಅಶೋಕ ಶಿವು ನಾಯ್ಕ ಅವರು ಸೇವಾರ್ಥವಾಗಿ ನೀಡಿದ್ದ ಮರವನ್ನು ಗುರುತಿಸಿ, ಶಾಸ್ತ್ರೋಕ್ತವಾಗಿ ವೃಕ್ಷಪೂಜೆ ನೆರವೇರಿಸಿ ಕಡಿಯಲಾಗಿತ್ತು.
ಮೆರವಣಿಗೆಯಲ್ಲಿ ತರಲಾದ ಈ ಮರದ ತುಂಡುಗಳಿಗೆ ಮೊದಲು ಕೋಟೆಕೆರೆಯ ಬಳಿ ವಿಶೇಷ ಪೂಜೆ ಮತ್ತು ಆರತಿ ನೆರವೇರಿಸಲಾಯಿತು. ನಂತರ ದೇವಸ್ಥಾನದ ಮಹಾದ್ವಾರದ ಬಳಿ ಸಾಲಾಗಿ ಇಟ್ಟು, ಧರ್ಮದರ್ಶಿಗಳು, ಅರ್ಚಕರು, ಬಾಬದಾರರು ಹಾಗೂ ಬಾಬದಾರ ಕುಟುಂಬದ ಮಹಿಳೆಯರು ಭಕ್ತಿಯಿಂದ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಧರ್ಮದರ್ಶಿ ಮಂಡಳಿಯ ಪದಾಧಿಕಾರಿಗಳು, ಬಾಬದಾರ ಪ್ರಮುಖರಾದ ಜಗದೀಶ ಗೌಡ, ದೇವಸ್ಥಾನದ ಸಿಬ್ಬಂದಿ ಹಾಗೂ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.