ಶಿರಸಿ: ಔಷಧ ಮಾರಾಟ ಪ್ರತಿನಿಧಿಗಳು ಅತ್ಯಂತ ಶ್ರಮಜೀವಿಗಳು. ತಮ್ಮ ವೃತ್ತಿಯ ಜತೆಗೆ ಸಂಘಟನೆ ಮೂಲಕ ಸಾಮಾಜಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ನಗರ ಠಾಣೆ ಪಿಎಸ್ಐ ನಾಗಪ್ಪ ಬಿ., ಹೇಳಿದರು.
ನಗರದ ರೋಟರಿ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ಶಿರಸಿ ಘಟಕದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಯಂ ಕಾಯಕದ ಜತೆ ಸಮಾಜದ ಪರ ಚಿಂತನೆ ಇಂದಿನ ಅಗತ್ಯತೆಯಾಗಿದೆ ಎಂದರು.
ವೈದ್ಯ ಡಾ. ಜೆ.ಬಿ.ಕಾರಂತ ಮಾತನಾಡಿ, ಪ್ರತಿ ವರ್ಷ ರಾಷ್ಟ್ರೀಯ ಹಬ್ಬದ ದಿನ ಸಂಘವು ರಕ್ತದಾನ ಮಾಡುವ ವಿಚಾರ ಶ್ಲಾಘನೀಯ ಎಂದರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಆನಂದರಾಜು ಕೆ.ಎಚ್. ಮಾತನಾಡಿ, ಔಷಧಗಳ ಬೆಲೆ ಕಡಿಮೆ ಮಾಡಬೇಕು ಹಾಗೂ ಕಾರ್ಮಿಕರ ಪರವಾದ ಕಾನೂನು ಕಡ್ಡಾಯಗೊಳಿಸಲು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿ ವರ್ಷದಂತೆ ನಿವೃತ್ತಿ ಅಂಚಿನಲ್ಲಿ ಇರುವ ಇಬ್ಬರು ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.
ಶಿರಸಿ ಘಟಕದ ಅಧ್ಯಕ್ಷ ಸಂತೋಷ ನವಿಲಗೋಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕಾರಿಣಿ ಸದಸ್ಯ ಮಧುಕರ ಹಳ್ಕರ್ ಹಾಗೂ ರಾಜ್ಯ ಕಾರ್ಯದರ್ಶಿ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
ಅರುಣ ಕೊಪ್ಪ ಸ್ವಾಗತಿಸಿದರು. ಶಿರಸಿ ಘಟಕದ ಕಾರ್ಯದರ್ಶಿ ರಮೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಘಟಕದ ಖಜಾಂಚಿ ವಿನಾಯಕ ನಾಯ್ಕ, ಜಂಟಿ ಕಾರ್ಯದರ್ಶಿಗಳಾದ ನಿತಿನ್ ಪಾಲೇಕರ್, ಕೃಷ್ಣಮೂರ್ತಿ ನಾಯ್ಕ, ನವೀನ ನಾಯ್ಕ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.