ADVERTISEMENT

ಶಿರಸಿ | ನಗರಸಭೆ ಸಾಮಾನ್ಯ ಸಭೆ: ಆಡಳಿತ ವ್ಯವಸ್ಥೆ ಬಗ್ಗೆ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 4:45 IST
Last Updated 28 ಅಕ್ಟೋಬರ್ 2025, 4:45 IST
ಶಿರಸಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿದರು
ಶಿರಸಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿದರು   

ಶಿರಸಿ: ‘ಕಟ್ಟಡ ನಿರ್ಮಾಣ ಸಂಬಂಧ ಸೂಕ್ತ ದಾಖಲೆ ನೀಡಿದರೂ ಪರವಾನಗಿ ನೀಡಲು ಸಾಕಷ್ಟು ಗೊಂದಲ ಸೃಷ್ಟಿಸುವ ಕೆಲಸ ನಗರಸಭೆಯಿಂದ ಆಗುತ್ತಿದೆ. ಆದರೆ, ಕೆಲವು ವ್ಯಕ್ತಿಗಳಿಗೆ ಮಾತ್ರ ಸರಳವಾಗಿ ಪರವಾನಗಿ ದೊರೆಯುತ್ತಿದ್ದು, ಆಡಳಿತ ಮಧ್ಯವರ್ತಿಗಳ ಹಿಡಿತದಲ್ಲಿದೆಯೇ ಎಂಬ ಭಾವನೆ ಬರುತ್ತಿದೆ’ ಎಂದು ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಆರೋಪಿಸಿದರು.

ನಗರದ ಅಟಲ್‌ಜೀ ಸಭಾಭವನದಲ್ಲಿ ಸೋಮವಾರ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಅಗತ್ಯ ದಾಖಲೆಗಳನ್ನು ಪೂರೈಸಿದರೂ ಅನುಮತಿ ನಿರಾಕರಿಸುತ್ತಿರುವ ಉದಾಹರಣೆ ಸಾಕಷ್ಟಿದೆ. ನಗರಸಭೆ ಸದಸ್ಯನಾಗಿ ನನಗೇ ಸಮಸ್ಯೆಯಾಗಿದೆ. ಮಧ್ಯವರ್ತಿಗಳ  ಮೂಲಕ ಹೋದರೆ ಮಾತ್ರ ಅನುಮತಿ ಲಭ್ಯವಾಗುತ್ತದೆ. ತಂತ್ರಾಂಶವು ಮಧ್ಯವರ್ತಿಗಳು ಬಂದರೆ ಮಾತ್ರ ಕೆಲಸ ಮಾಡುತ್ತದೆಯೇ? ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ನಾಗರಾಜ ನಾಯ್ಕ, ‘ನಗರಸಭೆಯ ಕಚೇರಿಯಲ್ಲಿ ರಾತ್ರಿ 8 ಗಂಟೆಯವರೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಏನು ಕೆಲಸ ಇರುತ್ತದೆ. ಮಧ್ಯವರ್ತಿಗಳಿಗಾಗಿಯೇ ಪ್ರತ್ಯೇಕ ಕೊಠಡಿ ನಿರ್ಮಿಸಿ’ ಎಂದು ಆಕ್ರೋಶ ಹೊರಹಾಕಿದರು. 

ADVERTISEMENT

ಸದಸ್ಯ ಪ್ರಾನ್ಸಿಸ್‌ ನರೋನಾ ಮಾತನಾಡಿ, ‘ನಗರಸಭೆಯ ಹಿಂಬದಿಯ ಸರ್ವೆ ನಂಬರ್ 73 ಜಾಗ ಕಬ್ಜಾ ತೆಗೆದುಕೊಳ್ಳಲು ಯಾಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದ ಅವರು, ನಗರೋತ್ಥಾನ ಕಾಮಗಾರಿ ಅರ್ಧಂಬರ್ಧವಾಗಿದೆ.‌ ಯಾವುದೇ ಕಾರಣಕ್ಕೂ ಬಿಲ್ ಪಾವತಿ ಮಾಡಬೇಡಿ’ ಎಂದು ಸೂಚಿಸಿದರು. 

ಸದಸ್ಯ ರಾಘವೇಂದ್ರ ಶೆಟ್ಟಿ ಮಾತನಾಡಿ, ‘ರಸ್ತೆಯನ್ನು ಅಗೆದು ಹಾಗೆಯೇ ಬಿಟ್ಟಿದ್ದಾರೆ. ಕಾಮಗಾರಿ ಪೂರ್ಣಗೊಳಿಸುವ ವರೆಗೆ ಬಿಲ್‌ ಪಾವತಿ ಮಾಡಬಾರದು’ ಎಂದರು.

ಪೌರಾಯುಕ್ತ ಪ್ರಕಾಶ ಚನ್ನಪ್ಪನವರ ಮಾತನಾಡಿ, ‘ನಗರೋತ್ಥಾನದ ₹1.20 ಕೋಟಿ ಬಿಲ್ ಪಾವತಿ ಬಾಕಿ ಇದೆ. ‌ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ವರದಿ ಸಲ್ಲಿಸಲಾಗಿದೆ. ನಗರಸಭೆಯ ಹಿಂಭಾಗದ ಜಾಗದ ಕುರಿತು 3 ಬಾರಿ ವಿಚಾರಣೆ ನಡೆಸಿ ಎಂದು ಕೋರ್ಟ್ ಆದೇಶ ಮಾಡಿದೆ. ಈಗಾಗಲೇ 2 ವಿಚಾರಣೆ ನಡೆಸಲಾಗಿದ್ದು, ಸದ್ಯದಲ್ಲಿ 3ನೇ ವಿಚಾರಣೆ ನಡೆಸುತ್ತೇವೆ. ಕೋರ್ಟ್ ಆದೇಶದ ನಂತರ ಅಂತಿಮ ಆದೇಶ ಪ್ರಕಟಿಸಲಾಗುತ್ತದೆ’ ಎಂದರು.

ಪಟ್ಟಣ ಲಕ್ಷಣವುಳ್ಳ ಭಾಗಶಃ ಪ್ರದೇಶವನ್ನು ನಗರಸಭಾ ವ್ಯಾಪ್ತಿಗೆ ಸೇರಿಕೊಳ್ಳುವ ಕುರಿತು 2016 ರಲ್ಲಿ ಠರಾವು ಆಗಿತ್ತು. ಒಟ್ಟು 143 ಎಕರೆ ಜಾಗವನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ಉಪಾಧ್ಯಕ್ಷ ರಮಾಕಾಂತ್ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಮತ್ತಿತರರು ಇದ್ದರು.

ತೆರಿಗೆ ಹಣ ಬಿಟ್ಟು ವಿಶೇಷ ಅನುದಾನವಿಲ್ಲ. ಬೇರೆ ಅನುದಾನ ಬರುತ್ತಿಲ್ಲ. ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸಮೀಕ್ಷೆಗೆ ನೇಮಿಸಲಾಗಿದೆ. ಹೀಗಾಗಿ ತೆರಿಗೆ ಸಂಗ್ರಹಕ್ಕೂ ಸಮಸ್ಯೆಯಾಗುತ್ತಿದೆ
ಶರ್ಮಿಳಾ ಮಾದನಗೇರಿ ನಗರಸಭೆ ಅಧ್ಯಕ್ಷೆ

ಬಿಲ್ ಕೂಡಲೇ ವಿಲೇವಾರಿ ಮಾಡಿ

‘ಕಾಮಗಾರಿ ಮುಕ್ತಾಯಗೊಂಡರೂ ಬಿಲ್ ಬರೆಯುತ್ತಿಲ್ಲ.‌ ಆದ್ದರಿಂದ ನಗರಸಭೆಯ ಕಾಮಗಾರಿಗಳಿಗೆ ಟೆಂಡರ್ ಹಾಕುವುದಿಲ್ಲ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ.‌ ಯಾವ ಕಾರಣಕ್ಕೆ ಬಿಲ್ ಬರೆಯುತ್ತಿಲ್ಲ’ ಎಂದು ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಪ್ರಶ್ನಿಸಿದರು. ಇದಕ್ಕೆ ದನಿ ಗೂಡಿಸಿದ ಸದಸ್ಯ ಆನಂದ ಸಾಲೇರ ಮಾತನಾಡಿ ‘ಕಾಮಗಾರಿ ನಿರ್ವಹಿಸಿದ ಮೇಲೆ ಬಿಲ್ ಬರೆಯಬೇಕು. ಇಲ್ಲವಾದಲ್ಲಿ ಕೆಲಸ ಮಾಡಿದವರಿಗೆ ಬಹಳ ತೊಂದರೆಯಾಗುತ್ತದೆ. ಮಾರಿಕಾಂಬಾ ಜಾತ್ರೆಯ ಸಾಕಷ್ಟು ಬಿಲ್ ಕೂಡ ಬಾಕಿ ಇದೆ. ಅದನ್ನು ಕೂಡಲೇ ವಿಲೇವಾರಿ ಮಾಡಿ’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.