
ಶಿರಸಿ: ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ಬೃಹತ್ ಜನಾಂದೋಲನ ರೂಪಿಸುವ ಜತೆಗೆ ನದಿ ಆಧಾರಿತ ಜನಜೀವನ, ಜೀವವೈವಿಧ್ಯ, ಪರಿಸರದ ಸಮಗ್ರ ಅಧ್ಯಯನ ಹಾಗೂ ವರದಿ ಸಿದ್ಧಪಡಿಸುವಿಕೆ ಉದ್ದೇಶದೊಂದಿಗೆ ಪಟ್ಟಣದ ಹೊಳೆ ಪಾತ್ರದಲ್ಲಿ ಆಯೋಜಿಸಿರುವ ಮೂರು ದಿನಗಳ ‘ನದಿ-ಹರಿವು-ಅರಿವು: ಅಧ್ಯಯನ ನಡಿಗೆ’ಗೆ ತಾಲ್ಲೂಕಿನ ಮಂಜುಗುಣಿ ಕಣಿವೆ ಕಾಡಿನಲ್ಲಿ ಶನಿವಾರ ಚಾಲನೆ ನೀಡಲಾಯಿತು.
ನಡಿಗೆಯ ಭಾಗವಾಗಿ ತಾಲ್ಲೂಕಿನ ದೇವನಳ್ಳಿ ವೀರಭದ್ರ ದೇವಾಲಯದ ಸಭಾಂಗಣದಲ್ಲಿ ನಡೆದ ಸಭೆ ಉದ್ಘಾಟಿಸಿ ಮಾತನಾಡಿದ ಸ್ವರ್ಣವಲ್ಲೀ ಸಂಸ್ಥಾನದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ, ‘ಪಶ್ಚಿಮಘಟ್ಟವು ಜಾಗತಿಕ ಹವಾಮಾನ ವ್ಯವಸ್ಥೆಗೆ ಅಪಾರ ಕೊಡುಗೆ ನೀಡುತ್ತಿದೆ. ಇಂಥ ಪ್ರದೇಶದಲ್ಲಿ ಯಾವುದೇ ಯೋಜನೆ ಅನುಷ್ಠಾನಪೂರ್ವ ಸೂಕ್ಷ್ಮ ಹಾಗೂ ತಳಮಟ್ಟದ ಅಧ್ಯಯನ ಅಗತ್ಯ. ಆದರೆ ಸರ್ಕಾರಗಳು ಅಂಥ ಅಧ್ಯಯನ ನಡೆಸದೆ ಏಕಾಏಕಿ ಯೋಜನೆ ಜಾರಿಮಾಡಲು ಮುಂದಾಗುತ್ತಿವೆ. ಇದು ಯೋಜನೆಗಳ ವೈಫಲ್ಯಕ್ಕೆ ಹಾಗೂ ಪರಿಸರ ವ್ಯವಸ್ಥೆಗೆ ಧಕ್ಕೆಗೆ ಕಾರಣವಾಗುತ್ತದೆ. ಇಂಥ ಅವೈಜ್ಞಾನಿಕ ನಡೆ ವಿರುದ್ಧ ಜನಾಂದೋಲನ ಸೃಷ್ಟಿಯಾಗುವುದು ಅತ್ಯಗತ್ಯ’ ಎಂದರು.
‘ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ನಿಸರ್ಗದತ್ತವಾಗಿ ಪರಿಸರವೇ ತನ್ನ ಜೀವವೈವಿಧ್ಯತೆ ಉಳಿಸಿಕೊಂಡಿದೆ. ಅದನ್ನು ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ’ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ನಾರಾಯಣ ಮರಾಠೆ ಹಳ್ಳಿಕೇರಿ, ‘ಈ ಹಿಂದೆ ನಡೆದ ಬೇಡ್ತಿ ಹೋರಾಟದಂತೆ ಈ ಬಾರಿಯೂ ಹೋರಾಟ ಸಂಘಟಿಸುವ ಅಗತ್ಯತೆಯಿದೆ. ಪ್ರತಿ ಮನೆಯಿಂದ ಜನರು ಬೆಂಬಲ ನೀಡಬೇಕು’ ಎಂದರು.
ಸಾಮಾಜಿಕ ಕಾರ್ಯಕರ್ತ ವಿಶ್ವನಾಥ ಹೆಗಡೆ ಶಿಗೇಹಳ್ಳಿ, ‘ಯೋಜನೆಗಳ ಸಾಧಕ ಬಾಧಕ ಕುರಿತು ವೈಜ್ಞಾನಿಕ ಅಧ್ಯಯನದ ಜತೆ ಆ ಭಾಗದ ರೈತರಿಗೆ ಎದುರಾಗುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿದರೆ ಅಧ್ಯಯನಕ್ಕೆ ಇನ್ನಷ್ಟು ಬಲ ಸಿಗಲಿದೆ’ ಎಂದರು.
ಪ್ರಮುಖರಾದ ಶಾಂತಾರಾಮ ದಿವೇಕರ, ಗ್ರಾಮ ಪಂಚಾಯಿತಿ ಸದಸ್ಯರಾದ ಕಿರಣ ಮರಾಠೆ, ನಾಗರಾಜ ಗೌಡ, ಸ್ಥಳೀಯರಾದ ಮಂಜುನಾಥ ಮರಾಠೆ, ನಾಗರತ್ನಾ ಸಿದ್ದಿ ಇತರರಿದ್ದರು. ಶ್ರೀಪಾದ ಪಾಟೀಲ ಸ್ವಾಗತಿಸಿದರು. ಸಂಘಟಕ ನರಸಿಂಹ ಹೆಗಡೆ ಮಾನಿಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಳಮಟ್ಟದ ಅಧ್ಯಯನ
ನೂರಾರು ಪರಿಸರ ಕಾರ್ಯಕರ್ತರು ಪಾಲ್ಗೊಂಡಿರುವ ಮೂರು ದಿನಗಳ ಅಧ್ಯಯನ ನಡಿಗೆ ವೇಳೆ ಪಟ್ಟಣದ ಹೊಳೆ ತಟದ ಜೀವವೈವಿಧ್ಯತೆ ಜನಜೀವನದ ಅಧ್ಯಯನ ಜೌಗು ಪ್ರದೇಶದ ಕುರಿತು ಅರಿವು ಕೃಷಿ ವೈವಿಧ್ಯತೆ ಪಟ್ಟಣದಹೊಳೆ ಜಲಾನಯ ಪ್ರದೇಶದಲ್ಲಿನ ಇಂಗಾಲ ಶೇಖರಣೆ ಪ್ರಮಾಣದ ಕುರಿತು ಅಧ್ಯಯನ ನಡೆಯಲಿದೆ. ವಿಶೇಷವಾಗಿ ಜಾಗತಿಕ ಮಹತ್ವದ ಒಂದಂಕಿ ಕಾಡು ದೇವರ ಕಾಡುಗಳು ಹೆಚ್ಚೇನು ಪಡೆ ಮರಗಳು ಉಪವನ ಉತ್ಪನ್ನಗಳ ಕುರಿತು ತಳಮಟ್ಟದ ಅಧ್ಯಯನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.