ADVERTISEMENT

ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ: ನಾರಾಯಣ ಭಾಗ್ವತ್‌, ಸಪ್ನಾ ಶ್ರೀಶೈಲ ಆಯ್ಕೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2023, 18:13 IST
Last Updated 27 ಆಗಸ್ಟ್ 2023, 18:13 IST
   

ಶಿರಸಿ/ಮಹಾಲಿಂಗಪುರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ನಾರಾಯಣ ಭಾಗ್ವತ್‌ ಹಾಗೂ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪೌಢಶಾಲೆಯ ವಿಜ್ಞಾನ ಶಿಕ್ಷಕಿ ಸಪ್ನಾ ಶ್ರೀಶೈಲ ಅನಿಗೋಳ ಅವರು ಕೇಂದ್ರ ಶಿಕ್ಷಣ ಸಚಿವಾಲಯದ ‘ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸೆ.5ರಂದು ದೆಹಲಿಯಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಿಕ್ಷಕರಿಗೆ ₹50 ಸಾವಿರ ನಗದು ಹಾಗೂ ಬೆಳ್ಳಿ ಫಲಕದೊಂದಿಗೆ ಪ್ರಶಸ್ತಿ ಪ್ರದಾನ ಮಾಡುವರು.

ನಾರಾಯಣ ಭಾಗ್ವತ್ ಅವರು, ಉತ್ತರ ಕನ್ನಡ ಜಿಲ್ಲೆ ಕುಮಟಾ ಹಂದಿಗೋಣದವರು. ಕನ್ನಡ ಎಂಎ., ಎಂ.ಇಡಿ. ಪದವೀಧರರಾಗಿರುವ ಇವರು ರಂಗ ಶಿಕ್ಷಣದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಕಥೆ, ಕವನ, ನಾಟಕ ರಚನೆ, ಚಿತ್ರಕಲೆ, ಸಂಗೀತ, ನಾಟಕ ನಿರ್ದೇಶನ ಮತ್ತು ಅಭಿನಯ, ಉಪನ್ಯಾಸ, ರಜಾ ಶಿಬಿರಗಳ ಸಂಘಟನೆ, ಯಕ್ಷಗಾನ, ಕರಕುಶಲ ಕಲೆಯ ಜ್ಞಾನ ಹೊಂದಿದ್ದಾರೆ. 

ADVERTISEMENT

ಸಪ್ನಾ ಶ್ರೀಶೈಲ ಅನಿಗೋಳ ಅವರು, ಎಂಎಸ್ಸಿ. ಬಿ.ಇಡಿ ಪದವೀಧರರಾಗಿದ್ಧಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಕ್ಕಳಿಗೆ ಸಹಾಯ ಮಾಡಿ ಶಾಲೆಗೆ ಕರೆತಂದು ಅವರಿಗೆ ಶಿಕ್ಷಣ ಕೊಡುತ್ತಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ನಂತರ ಪ್ರೌಢಶಾಲೆಗೆ ಅವಕಾಶ ವಂಚಿತ ಹೆಣ್ಣುಮಕ್ಕಳ ಪಾಲಕರ ಮನೆಗೂ ಭೇಟಿ ನೀಡಿ ಶಿಕ್ಷಣದ ಮಹತ್ವ ಹಾಗೂ ಸರ್ಕಾರದ ಸೌಲಭ್ಯಗಳನ್ನು ತಿಳಿಸಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. 

‘ಕನ್ನಡ ಭಾಷೆ ನಂಬಿದರೆ ಅದು ಕೈಬಿಡುವುದಿಲ್ಲ ಎಂಬುದಕ್ಕೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಬಂದಿರುವುದು ಸಾಕ್ಷಿಯಾಗಿದೆ‘ ಎಂದು ಶಿಕ್ಷಕ ನಾರಾಯಣ ಭಾಗ್ವತ್‌ ತಿಳಿಸಿದರು.

‘ಪ್ರಶಸ್ತಿ ಬಂದಿದ್ದು ಸಂತಸವಾಗಿದೆ. ನನ್ನ ಜವಾಬ್ದಾರಿ ಹೆಚ್ಚಿದೆ. ಮಕ್ಕಳಿಗೆ ಇನ್ನಷ್ಟು ಉತ್ತಮವಾಗಿ ಶಿಕ್ಷಣ ನೀಡಲು ಪ್ರಯತ್ನಿಸುತ್ತೇನೆ’ ಎಂದು ಸಪ್ನಾ ಅನಿಗೋಳ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.