
ಶಿರಸಿ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ಒಳಪಡದ ಕುಟುಂಬಗಳನ್ನು ಗುರುತಿಸಿ, ಅಕುಶಲ ಕೆಲಸಕ್ಕಾಗಿ ನೋಂದಾಯಿಸುವ ದೃಷ್ಟಿಯಿಂದ ಹಮ್ಮಿಕೊಂಡಿರುವ ‘ದುಡಿಯೋಣ ಬಾ’ ಕಾರ್ಯಕ್ರಮದ ಕುರಿತು ತಾಲ್ಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳಲಿ ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು.
ಬುಧವಾರ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತಾ ಗುಡ್ಡದಮನೆ, ನರೇಗಾದಡಿ ಸಿಗುವ ಸೌಲಭ್ಯಗಳು, ಕೂಲಿಕಾರರ ದಿನಗೂಲಿ ₹349ನಿಂದ ₹370ಕ್ಕೆ ಏರಿಕೆ, ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಹೆಚ್ಚಿಸುವುದು, ವರಿಗೆ ಕೆಲಸದಲ್ಲಿನ ವಿನಾಯಿತಿ, ಸಹಾಯಧನದ ಬಳಕೆ, ಎನ್ಎಂಎಂಎಸ್ ಹಾಜರಾತಿ ಇತ್ಯಾದಿ ವಿಷಯಗಳ ಕುರಿತು ತಿಳಿಸಿದರು.
ಐಇಸಿ ಸಂಯೋಜಕಿ ಪೂರ್ಣಿಮಾ ಮಾತನಾಡಿ, ‘ಉದ್ಯೋಗ ಖಾತ್ರಿ ಯೋಜನೆಯಡಿ ಮನೆ, ದನದ ಕೊಟ್ಟಿಗೆ ನಿರ್ಮಾಣ ಮಾತ್ರವಲ್ಲದೇ ತೋಟಗಾರಿಕಾ ಬೆಳೆಗಳಿಗೆ ಸಹಾಯಧನ ಪಡೆಯಬಹುದು’ ಎಂದರು.
ಬಚ್ಚಲುಗುಂಡಿ, ಎರೆಹುಳು ತೊಟ್ಟಿ, ಕುರಿ–ಕೋಳಿ ಶೆಡ್ ನಿರ್ಮಾಣ, ವರ್ಷದಲ್ಲಿ ಕುಟುಂಬವೊಂದಕ್ಕೆ 100 ದಿನಗಳ ಕೆಲಸ ಖಾತ್ರಿ, ಗಂಡು–ಹೆಣ್ಣಿಗೆ ಸಮಾನ ಕೂಲಿ, ಮಹಿಳೆಯರಿಗೆ ಆದ್ಯತೆ, ಹಿರಿಯ ನಾಗರಿಕರು–ಅಂಗವಿಕಲರು–ಗರ್ಭಿಣಿ ಹಾಗೂ ಬಾಂಣಂತಿಯರಿಗೆ ಕೆಲಸದಲ್ಲಿ ಶೇ 50ರಷ್ಟು ವಿನಾಯಿತಿ, ಇತರೆ ವಿಷಯಗಳ ಕುರಿತು ಅರಿವು ಮೂಡಿಸಲಾಯಿತು.
ಉದ್ಯೋಗ ಚೀಟಿ ನವೀಕರಣ, ಹೊಸ ಉದ್ಯೋಗ ಚೀಟಿ ಪಡೆಯುವುದು, ನಿಧನರಾದವರು ಹಾಗೂ ಮದುವೆಯಾಗಿ ಬೇರೆ ಊರಿಗೆ ಹೋದವರ ಹೆಸರನನ್ನು ಉದ್ಯೋಗ ಚೀಟಿಯಲ್ಲಿ ರದ್ದು ಮಾಡುವುದು ಕಡ್ಡಾಯ ಎಂಬುದನ್ನೂ ತಿಳಿಸಿದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.