ADVERTISEMENT

ಶಿರಸಿ: ಗೌರಿ ತೋಡಿದ ಬಾವಿಯಲ್ಲಿ ಚಿಮ್ಮಿದ ನೀರು

ಹಲವು ಅಡೆತಡೆ ನಡುವೆ 45 ಅಡಿ ಬಾವಿ ತೋಡಿದ ಏಕಾಂಗಿ ಮಹಿಳೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 23:36 IST
Last Updated 6 ಮಾರ್ಚ್ 2024, 23:36 IST
ಶಿರಸಿಯ ಗಣೇಶನಗರದ ಅಂಗನವಾಡಿ ಬಳಿ ತಾವು ತೋಡಿದ ಬಾವಿಗೆ ಗೌರಿ ನಾಯ್ಕ ಬುಧವಾರ ಪೂಜೆ ಸಲ್ಲಿಸಿದರು
ಶಿರಸಿಯ ಗಣೇಶನಗರದ ಅಂಗನವಾಡಿ ಬಳಿ ತಾವು ತೋಡಿದ ಬಾವಿಗೆ ಗೌರಿ ನಾಯ್ಕ ಬುಧವಾರ ಪೂಜೆ ಸಲ್ಲಿಸಿದರು   

ಶಿರಸಿ: ಶಿರಸಿ ಹೊರವಲಯದ ಗಣೇಶನಗರ ಅಂಗನವಾಡಿ ಕೇಂದ್ರ 6ರ ಬಳಿ ಇಲ್ಲಿನ 57 ವರ್ಷದ ಗೌರಿ ನಾಯ್ಕ ಒಬ್ಬಂಟಿಯಾಗಿ ತೋಡುತ್ತಿದ್ದ ಬಾವಿಯಲ್ಲಿ ಬುಧವಾರ ನೀರು ಚಿಮ್ಮಿದೆ.

ಜನವರಿ 30ರಿಂದ ನಿರಂತರವಾಗಿ ಗೌರಿ ನಾಯ್ಕ ಅವರು ಒಂಟಿಯಾಗಿ ಬಾವಿ ತೋಡಿದರು. ಈವರೆಗೆ 45 ಅಡಿ ಆಳ ತೋಡಿರುವ ಅವರು ಇನ್ನೂ 5 ಅಡಿ ಆಳ ತೋಡುವರು. ಆರೋಗ್ಯದಲ್ಲಿ ಏರುಪೇರಾದ ಕಾರಣ ಕೊನೆಯ ಮೂರು ದಿನ ಬಾವಿಯಿಂದ ಮಣ್ಣು ಎತ್ತಲು ಇಬ್ಬರು ಕೂಲಿಗಳ ನೆರವು ಪಡೆದರು.

ಬಾವಿಯಲ್ಲಿ ನೀರು ಚಿಮ್ಮುತ್ತಿದ್ದಂತೆ ಗೌರಿ ನಾಯ್ಕ ಸೇರಿ ಗ್ರಾಮಸ್ಥರು ಬಾವಿಗೆ ಪೂಜೆ ಸಲ್ಲಿಸಿದರು. ಬಾವಿಯಲ್ಲಿ ಚಿಮ್ಮಿದ ನೀರನ್ನು ಅವರು ತಲೆಯ ಮೇಲೆ ಹಾಕಿಕೊಂಡರು. ನಂತರ ಎಲ್ಲರೂ ಸಿಹಿ ಹಂಚಿ ಸಂಭ್ರಮಿಸಿದರು.

ADVERTISEMENT

‘ಸಾಕಷ್ಟು ಪ್ರಯತ್ನದ ಬಳಿಕ ಬಾವಿಯಲ್ಲಿ ನೀರು ಬಂದಿದೆ. ಮನಸ್ಸಿಗೆ ನೆಮ್ಮದಿ ತಂದಿದೆ. ಬಾವಿಯನ್ನು ಇನ್ನಷ್ಟು ಆಳ ಮಾಡಲಾಗುವುದು’ ಎಂದು ಗೌರಿ ನಾಯ್ಕ ತಿಳಿಸಿದರು.

‘ಗ್ರಾಮ ಪಂಚಾಯಿತಿ ಮತ್ತು ದಾನಿಗಳ ನೆರವಿನಿಂದ ಅಂಗನವಾಡಿ ಕೇಂದ್ರ ಅಭಿವೃದ್ಧಿ ಆಗುತ್ತಿದೆ. ಅವರ ಸಹಕಾರದಿಂದ ಬಾವಿ ಸುತ್ತ ರಕ್ಷಣೆ, ನೀರೆತ್ತುವ ವ್ಯವಸ್ಥೆ ಮಾಡುತ್ತೇವೆ’ ಎಂದು ಅಂಗನವಾಡಿ ಶಿಕ್ಷಕಿ ಜ್ಯೋತಿ ನಾಯ್ಕ ಹೇಳಿದರು. 

ಅಂಗನವಾಡಿ ಮಕ್ಕಳಿಗೆ ನೀರಿನ ಸಮಸ್ಯೆ ಆಗದಿರಲಿ ಎಂದು ಸ್ವತಃ ಗೌರಿ ನಾಯ್ಕ ಅವರೊಬ್ಬರೇ ಬಾವಿ ತೋಡುವ ಕಾರ್ಯ ಕೈಗೊಂಡರು. ‘ಬಾವಿ ತೋಡಲು ಅನುಮತಿಯಿಲ್ಲ’ ಎಂದು ಅಧಿಕಾರಿಗಳು ಆಕ್ಷೇಪಿಸಿದರು. ಎಲ್ಲಾ ಸಮಸ್ಯೆ, ಸವಾಲುಗಳ ಮಧ್ಯೆ ಅವರು ಬಾವಿ ತೋಡಿದರು. ಗೌರಿಯವರು ಏಕಾಂಗಿಯಾಗಿ ತೋಡಿದ ಮೂರನೇ ಬಾವಿ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.