ಶಿರಸಿ: ಆದಿಕವಿ ಪಂಪನ ಹೆಸರಿನಲ್ಲಿ ದಶಕಗಳ ಹಿಂದೆ ಬನವಾಸಿಯಲ್ಲಿ ನಿರ್ಮಿಸಿದ್ದ ವನದ ಕುರುಹುಗಳು ಕಾಣದಂಥ ಶೋಚನೀಯ ಸ್ಥಿತಿ ಎದುರಾಗಿದೆ.
ಬನವಾಸಿ ಕದಂಬರ ಕಾಲದ ರಾಜವೈಭವ, ಮಧುಕೇಶ್ವರ ದೇವಾಲಯದ ಕೆತ್ತನೆಗೆ ಪ್ರಸಿದ್ಧ. ರಾಜ್ಯದ ಮೂಲೆ ಮೂಲೆಯಿಂದಲೂ ಪ್ರವಾಸಿಗರು ಬನವಾಸಿಗೆ ಬರುತ್ತಾರೆ. ಬಂದವರು ಸ್ವಲ್ಪ ಹೊತ್ತು ವಿರಮಿಸಲು ಅನುವಾಗಲಿ ಎಂಬ ಉದ್ದೇಶದಿಂದ ಅರಣ್ಯ ಇಲಾಖೆ ಮತ್ತು ಬನವಾಸಿ ದೇವಾಲಯದ ವತಿಯಿಂದ 20 ವರ್ಷಗಳ ಹಿಂದೆ ಇಲ್ಲಿಯ ಆದಿ ಮಧುಕೇಶ್ವರ ದೇವಾಲಯದ ಸುತ್ತಲಿನ ಸ್ಥಳವನ್ನು ಪಂಪ ವನವಾಗಿ ನಿರ್ಮಿಸಲಾಗಿತ್ತು. ಆದರೆ, ಸದ್ಯ ವನ ನಿರ್ವಹಣೆ ಇಲ್ಲದೆ ದುಸ್ಥಿತಿಗೆ ತಲುಪಿದೆ.
‘ಆದಿ ಮಧುಕೇಶ್ವರ ದೇವಾಲಯ, ಎದುರಿನ ಪುಷ್ಕರಣಿಯನ್ನೂ ಒಳಗೊಂಡಂತೆ 9 ಎಕರೆ ವಿಸ್ತೀರ್ಣದಲ್ಲಿ ಪಂಪವನ ನಿರ್ಮಿಸಲಾಗಿದೆ. ಪಂಪ ವನದ ಒಳಗಡೆ ಮಕ್ಕಳಿಗೆ ಮನೋರಂಜನಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲಲ್ಲಿ ಕುಟೀರಗಳನ್ನೂ ನಿರ್ಮಿಸಲಾಗಿತ್ತು. ಅರಣ್ಯ ಇಲಾಖೆ ಮತ್ತು ಬನವಾಸಿ ದೇವಾಲಯದ ಆಡಳಿತ ಮಂಡಳಿ ಜಂಟಿಯಾಗಿ ಪಂಪವನದ ನಿರ್ವಹಣೆ ಮಾಡುತ್ತಿತ್ತು. ಈಚಿನ ವರ್ಷಗಳಲ್ಲಿ ಪಂಪವನ ಸಂಪೂರ್ಷ ಜೀರ್ಣಾವಸ್ಥೆ ತಲುಪಿದೆ. ಒಂದು ಕಾಲದಲ್ಲಿ ಪ್ರವಾಸಿಗರಿಗೆ ವಿಹಾರ ಮತ್ತು ವಿಶ್ರಾಂತಿ ತಾಣವಾಗಿದ್ದ ವನವೀಗ ಸ್ಥಳೀಯರ ದನ ಮೇಯಿಸುವ ಜಾಗವಾಗಿ ಪರಿವರ್ತನೆಯಾಗಿದೆ’ ಎಂಬುದು ಸ್ಥಳೀಯರ ದೂರು.
‘ನಾಲ್ಕು ವರ್ಷಗಳಿಂದ ಪಂಪವನ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಅರಣ್ಯ ಇಲಾಖೆ ಈ ವನದ ನಿರ್ವಹಣೆಯ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ದಾಸನಕೊಪ್ಪ ರಸ್ತೆಯಲ್ಲಿ ಸಾಲುಮರದ ತಿಮ್ಮಕ್ಕ ಉದ್ಯಾನ ನಿರ್ಮಾಣವಾದ ಬಳಿಕ ಅರಣ್ಯ ಇಲಾಖೆಯ ಲಕ್ಷ್ಯ ಆ ಉದ್ಯಾನಕ್ಕೆ ಮಾತ್ರ ಸೀಮಿತವಾಗಿದೆ. ಬನವಾಸಿ ದೇವಾಲಯದಿಂದ ನಿರ್ವಹಣೆ ಸಾಧ್ಯವಾಗದೇ ವನದ ತುಂಬೆಲ್ಲ ಹುಲ್ಲು, ಗಿಡಗಂಟಿಗಳು ಬೆಳೆದು ನಿಂತಿವೆ. ವನದೊಳಗಿರುವ ಕುಟೀರಗಳು ಮುರಿದು ಬಿದ್ದು ಮಣ್ಣು ಸೇರಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದ ಕುಡಿಯುವ ನೀರಿನ ವ್ಯವಸ್ಥೆ ಪಾಳು ಬಿದ್ದಿದೆ. ಇಲ್ಲಿಯ ವಾಕ್‌ಪಾತ್‌ಗಳಲ್ಲಿ ಹುಲ್ಲು ಬೆಳೆದು ನಡೆದಾಡಲು ಭಯ ಮೂಡಿಸುತ್ತಿವೆ’ ಎನ್ನುತ್ತಾರೆ ಸ್ಥಳೀಯ ಮಧುಸೂದನ ಗೌಡ.
‘ಬನವಾಸಿ ಸುತ್ತಮುತ್ತಲಿನ ಜನ ಇಲ್ಲಿ ನಿತ್ಯ ದನ ಕರುಗಳನ್ನು ಮೇಯಿಸಿಕೊಂಡು ಹೋಗುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಮದ್ಯಪಾನ ಮಾಡುವವರ ನೆಚ್ಚಿನ ಸ್ಥಳವಾಗಿ, ಅನೈತಿಕ ಚಟುವಟಿಕೆ ಸ್ಥಳವಾಗಿ ಪಂಪವ ವನ ಈಗ ಬದಲಾಗಿದೆ. ಸದ್ಯ ತಾತ್ಕಾಲಿಕ ಬೇಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ’ ಎನ್ನುತ್ತಾರೆ ಅವರು.
ಪಂಪವನದ ಅಭಿವೃದ್ಧಿಗಾಗಿ ₹60 ಲಕ್ಷ ಮಂಜೂರಾಗಿದೆ. ಅದರಿಂದ ಆದಿಮಧುಕೇಶ್ವರ ದೇವಾಲಯಕ್ಕೆ ಶೀಟ್ ಅಳವಡಿಕೆ ವನದ ಸುತ್ತ ಬೇಲಿ ನಿರ್ಮಿಸಿ ಅಕ್ರಮ ಚಟುವಟಿಕೆ ತಡೆಯುವ ಕಾರ್ಯವಾಗಲಿದೆರಾಜಶೇಖರ ಒಡೆಯರ್ ನಿಕಟಪೂರ್ವ ಅಧ್ಯಕ್ಷ ಬನವಾಸಿ ಮಧುಕೇಶ್ವರ ದೇವಾಲಯ
ತ್ವರಿತ ಕಾಮಗಾರಿಗೆ ಒತ್ತಾಯ
‘ಪಂಪವನದ ಸುತ್ತ ರಕ್ಷಣಾ ಬೇಲಿಯ ಅಗತ್ಯವಿದೆ. ವನದ ಮುಖ್ಯದ್ವಾರ ಮುಚ್ಚಿದ್ದರೂ ಅದರ ಅಗತ್ಯವೇ ಇರದಂತೆ ಸುತ್ತೆಲ್ಲ ಮಾರ್ಗಗಳು ನಿರ್ಮಾಣವಾಗಿವೆ. ಮಧುಕೇಶ್ವರ ದೇವಾಲಯದ ಆಡಳಿತ ಮಂಡಳಿ ಅವಧಿ ಮುಕ್ತಾಯಗೊಂಡಿದೆ. ತಹಶೀಲ್ದಾರರು ದೇವಾಲಯದ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಬಿಡುಗಡೆಯಾದ ಅನುದಾನದಲ್ಲಿ ತ್ವರಿತವಾಗಿ ಬೇಲಿ ಕಾಂಪೌಂಡ್ ನಿರ್ಮಾಣ ಆಗಬೇಕು’ ಎಂಬುದು ಸಾರ್ವಜನಿಕರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.