ADVERTISEMENT

ಶಿರಸಿಯಲ್ಲಿ 105 ಮಿ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 14:07 IST
Last Updated 4 ಆಗಸ್ಟ್ 2020, 14:07 IST
ಶಿರಸಿ ತಾಲ್ಲೂಕಿನ ನೆಲ್ಲಿಮಡ್ಕಿಯ ಸರಸ್ವತಿ ನಾಯ್ಕ ಅವರ ಮನೆಯ ಮೇಲೆ ಮರ ಮುರಿದು ಬಿದ್ದಿರುವುದು
ಶಿರಸಿ ತಾಲ್ಲೂಕಿನ ನೆಲ್ಲಿಮಡ್ಕಿಯ ಸರಸ್ವತಿ ನಾಯ್ಕ ಅವರ ಮನೆಯ ಮೇಲೆ ಮರ ಮುರಿದು ಬಿದ್ದಿರುವುದು   

ಶಿರಸಿ: ತಾಲ್ಲೂಕಿನಲ್ಲಿ ಸೋಮವಾರದಿಂದ ಪ್ರಾರಂಭವಾಗಿರುವ ಗಾಳಿಸಹಿತ ಮಳೆ ಮಂಗಳವಾರವೂ ಮುಂದುವರಿಯಿತು. ಮಂಗಳವಾರ ಬೆಳಿಗ್ಗೆ ಕೊನೆಗೊಂಡಂತೆ ಕಳೆದ 24 ತಾಸುಗಳಲ್ಲಿ ತಾಲ್ಲೂಕಿನಲ್ಲಿ 105 ಮಿ.ಮೀ ಮಳೆಯಾಗಿದೆ.

ಗಾಳಿಯ ಅಬ್ಬರಕ್ಕೆ ಹಲವೆಡೆ ಮನೆಗಳ ಮೇಲೆ ಮರ ಮುರಿದು ಬಿದ್ದಿದೆ. ಬನವಾಸಿ ಹೋಬಳಿಯಲ್ಲಿ ಬಾಳೆ ತೋಟಕ್ಕೆ ಹಾನಿಯಾಗಿದೆ. ವಿದ್ಯುತ್ ಮಾರ್ಗಗಳ ಮೇಲೆ ಮರಗಳು ಉರುಳಿ, ಗ್ರಾಮೀಣ ಭಾಗದ ಹಲವೆಡೆಗಳಲ್ಲಿ ವಿದ್ಯುತ್ ವ್ಯತ್ಯಯಗೊಂಡಿದೆ.

ತಾಲ್ಲೂಕಿನ ಬಿಸಲಕೊಪ್ಪ ನೆಲ್ಲಿಮಡ್ಕಿಯ ಸರಸ್ವತಿ ನಾಯ್ಕ ಅವರ ಮನೆಯ ಮೇಲೆ ಮರ ಬಿದ್ದು ₹ 50ಸಾವಿರದಷ್ಟು ನಷ್ಟವಾಗಿದೆ. ಕಾನಗೋಡ ಹೊಳೆಕೈಯ ಜ್ಯೋತಿ ದೇವಾಡಿಗ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ₹ 23ಸಾವಿರದಷ್ಟು ನಷ್ಟವಾಗಿದೆ. ಭಾಶಿಯ ಮಲ್ಲಿಕಾರ್ಜುನ ಗೌಡ ಅವರ ಮನೆಗೆ ಭಾಗಶಃ ಹಾನಿಯಾಗಿದೆ.

ADVERTISEMENT

ಗಾಳಿಯಿಂದಾಗಿ 30 ವಿದ್ಯುತ್ ಕಂಬಗಳು, ನಾಲ್ಕು ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿ, ₹ 8 ಲಕ್ಷ ನಷ್ಟವಾಗಿದೆ.

ಬನವಾಸಿಯಲ್ಲಿ ವರದಾ ನದಿ ತುಂಬಿ ಹರಿಯುತ್ತಿದೆ. ಇದೇ ರೀತಿ ಮಳೆಯಾದರೆ, ನದಿಗೆ ಪ್ರವಾಹ ಬಂದು ಸುತ್ತಲಿನ ಕೃಷಿ ಭೂಮಿ ಜಲಾವೃತವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.