ಶಿರಸಿ: ತಾಲ್ಲೂಕಿನ ಬಿದ್ರಳ್ಳಿಯಿಂದ ಸಹಸ್ರಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ಸುಮಾರು 5 ಕಿ.ಮೀ ರಸ್ತೆ ತೀರಾ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ. ಅನೇಕ ಬಾರಿ ಸರ್ವಋತು ರಸ್ತೆ ನಿರ್ಮಿಸಿಕೊಡುವಂತೆ ಶಾಸಕರು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಬಿದ್ರಳ್ಳಿ ಕ್ರಾಸ್ ಬಳಿ ಗ್ರಾಮಸ್ಥರೆಲ್ಲರೂ ಶನಿವಾರ ಪ್ರತಿಭಟನೆ ನಡೆಸಿದರು.
ಗ್ರಾಮಸ್ಥ ಧಾಕಪ್ಪ ಮಡಿವಾಳ ಸಹಸ್ರಳ್ಳಿ ಮಾತನಾಡಿ, ಸಹಸ್ರಳ್ಳಿ, ಡೊಂಬೆಸರ, ಮೊರಿಜಡ್ಡಿ ಸಂಪರ್ಕಿಸುವ ರಸ್ತೆಯ ಹೊಂಡಮಯವಾಗಿ ವಾಹನ ಸಂಚಾರ ಮಾಡುವಂತಿಲ್ಲ. ಬೈಕ್ ಸವಾರರು ಅನೇಕ ಬಾರಿ ಬಿದ್ದು ಗಾಯಗೊಂಡಿದ್ದಾರೆ. ರಸ್ತೆ ಸರಿಪಡಿಸುವಂತೆ ಉಂಚಳ್ಳಿ ಪಂಚಾಯಿತಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಮಳೆಗಾಲದಲ್ಲಿ ಹೊಂಡಗಳನ್ನು ತುರ್ತು ದುರಸ್ತಿಗೊಳಿಸಿ, ಮಳೆಗಾಲದ ನಂತರ ಶಾಶ್ವತ ರಸ್ತೆ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಗ್ರಾಮಸ್ಥ ಅಣ್ಣಪ್ಪ ಗೌಡ ಮಾತನಾಡಿ, ಶಾಶ್ವತ ರಸ್ತೆಗೆ ಗ್ರಾಮಸಭೆ, ವಾರ್ಡ್ ಸಭೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಹೊರತು ಬೇಡಿಕೆ ಈಡೇರಿಸಿಲ್ಲ. ನಮಗೆ ಶಾಶ್ವತ ರಸ್ತೆ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದರು.
ಈ ವೇಳೆ ಪ್ರತಿಭಟನಾಕಾರರು, ಸಹಸ್ರಳ್ಳಿ ಗ್ರಾಮಕ್ಕೆ ಶಾಶ್ವತ ರಸ್ತೆಗಾಗಿ ಅನೇಕ ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ ಆಡಳಿತ ವರ್ಗ ನಮ್ಮನ್ನು ಕಡೆಗಣಿಸುತ್ತಿದೆ. ಈ ವರ್ಷ ಶಾಶ್ವತ ರಸ್ತೆ ನಿರ್ಮಾಣವಾಗದಿದ್ದರೆ ಶಿರಸಿ-ಬನವಾಸಿ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸುತ್ತೇವೆ. ಅಲ್ಲದೇ ಗ್ರಾಮಸ್ಥರೆಲ್ಲರೂ ಸೇರಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸ್ಥಳೀಯರಾದ ಸತೀಶ ಗೌಡ, ಕೃಷ್ಣಪ್ಪ ಮಡಿವಾಳ, ದಯಾ ನಾಯ್ಕ, ನಿತ್ಯಾನಂದ ನಾಯ್ಕ, ಅರುಣ ಜೋಗಿ, ಪ್ರಕಾಶ ನಾಯ್ಕ, ಶಂಕರ ಗೌಡ, ಉದೇಶ ನಾಯ್ಕ, ರವಿ ನಾಯ್ಕ, ಸಂತೋಷ ನಾಯ್ಕ ಮತ್ತಿತರರು ಇದ್ದರು.
ತಾಲ್ಲೂಕು ಪಂಚಾಯಿತಿಯಿಂದ ₹2 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ. ಮಳೆಗಾಲದ ನಂತರ ರಸ್ತೆ ಕಾಮಗಾರಿ ಆರಂಭಿಸುತ್ತೇವೆ. ಮುಂದಿನ ದಿನಗಳಲ್ಲಿ ಶಾಸಕ ಬಳಿ ವಿನಂತಿಸಿ ಸಂಪೂರ್ಣ ರಸ್ತೆಗೆ ಅನುದಾನ ನೀಡುವಂತೆ ಕೋರಲಾಗುವುದುದೇವೇಂದ್ರ ನಾಯ್ಕ ಉಂಚಳ್ಳಿ ಗ್ರಾಮ ಪಂಚಾಯಿತಿ ಸದಸ್ಯ
‘ಪಂಚಾಯಿತಿಯಲ್ಲಿ ಹಣವಿಲ್ಲ’:
ಮಳೆಗಾಲದಲ್ಲಿ ಸುಗಮ ಸಂಚಾರಕ್ಕೆ ಹೊಂಡ-ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದಾಗ ಪಿಡಿಒ ಆಶಾ ಗೌಡ ಪ್ರತಿಕ್ರಿಯಿಸಿ ಗ್ರಾಮ ಪಂಚಾಯಿಯಿಯಿಂದ ಈಗಾಗಲೇ ಕ್ರಿಯಾ ಯೋಜನೆ ಸಿದ್ದಪಡಿಸಿ ಅನುಮೋದನೆಗೆ ಕಳುಹಿಸಿದ್ದೇವೆ. ತುರ್ತು ದುರಸ್ತಿಗೂ ಪಂಚಾಯಿತಿಯಲ್ಲಿ ಹಣವಿಲ್ಲ ಎಂದು ಹೇಳಿದಾಗ ಆಕ್ರೋಶಗೊಂಡ ಸ್ಥಳೀಯರು ಪಂಚಾಯಿತಿಯಿಂದ ಶಾಶ್ವತ ರಸ್ತೆ ಕೇಳುತ್ತಿಲ್ಲ. ಹೊಂಡ-ಗುಂಡಿಗಳನ್ನು ಮುಚ್ಚಲು ಹಣವಿಲ್ಲವೇ? ಪಂಚಾಯಿತಿ ಹಣವೆಲ್ಲ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.