ADVERTISEMENT

ಶಿರಸಿ ಅರ್ಬನ್ ಬ್ಯಾಂಕ್ ಸಹಕಾರ ಕ್ಷೇತ್ರಕ್ಕೆ ಮಾದರಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 7:30 IST
Last Updated 8 ಜನವರಿ 2026, 7:30 IST
ಕನ್ನಡ ಸಾಹಿತ್ಯ ಪರಿಷತ್ ಶಿರಸಿ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ಎನ್.ಹೊಸ್ಮನಿ ಮಾತನಾಡಿದರು
ಕನ್ನಡ ಸಾಹಿತ್ಯ ಪರಿಷತ್ ಶಿರಸಿ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ಎನ್.ಹೊಸ್ಮನಿ ಮಾತನಾಡಿದರು   

ಶಿರಸಿ: ‘ಉತ್ತರ ಕನ್ನಡ ಜಿಲ್ಲೆಯ ಸಹಕಾರ ಕ್ಷೇತ್ರವು ಅತ್ಯಂತ ಸದೃಢವಾಗಿ ಬೆಳೆದಿದ್ದು, ದೇಶದ ಸಹಕಾರ ಚಳವಳಿಯ ಆರಂಭದ ಕಾಲದಲ್ಲೇ ಸ್ಥಾಪನೆಯಾದ ಶಿರಸಿ ಅರ್ಬನ್ ಬ್ಯಾಂಕ್ ಇಂದು ಸಮಾಜಕ್ಕೆ ಶ್ರೇಷ್ಠ ಸೇವೆ ನೀಡುವಲ್ಲಿ ಅಗ್ರಸ್ಥಾನದಲ್ಲಿದೆ’ ಎಂದು ಚಿಂತಕ ಪ್ರೊ.ಕೆ.ಎನ್. ಹೊಸ್ಮನಿ ಅಭಿಪ್ರಾಯಪಟ್ಟರು.

ನಗರದ ನೆಮ್ಮದಿ ಕುಟೀರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಶಿರಸಿ ಘಟಕವು ಬುಧವಾರ ಆಯೋಜಿಸಿದ್ದ ದಿ. ಶೇಷಗಿರಿರಾವ್ ನಾರಾಯಣರಾವ್ ಕೇಶವೈನ್ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸಹಕಾರ ಚಳವಳಿಯ 120 ವರ್ಷಗಳ ಇತಿಹಾಸದಲ್ಲಿ ಬಂಡವಾಳಶಾಹಿ ವ್ಯವಸ್ಥೆಯನ್ನು ವಿರೋಧಿಸಿ, ಜನರ ಜೀವನ ಮಟ್ಟ ಸುಧಾರಿಸುವ ಉದ್ದೇಶದೊಂದಿಗೆ ಈ ವ್ಯವಸ್ಥೆ ರೂಪುಗೊಂಡಿದೆ. 1905ರಲ್ಲಿ ಕೇವಲ 12 ಸದಸ್ಯರಿಂದ ಆರಂಭವಾದ ಈ ಬ್ಯಾಂಕ್‍ಅನ್ನು ಶೇಷಗಿರಿರಾವ್ ಕೇಶವೈನ್ ಅವರು 59 ವರ್ಷಗಳ ಕಾಲ ಸಮರ್ಥವಾಗಿ ಮುನ್ನಡೆಸಿದ್ದರು. ಅವರ ದಕ್ಷತೆ ಹಾಗೂ ದೂರದೃಷ್ಟಿಯಿಂದಾಗಿ ಇಂದು ಬ್ಯಾಂಕ್ ರಾಷ್ಟ್ರಮಟ್ಟದ 10 ಪ್ರಮುಖ ಅರ್ಬನ್ ಬ್ಯಾಂಕ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಪ್ರವಾಹ ಹಾಗೂ ಯುದ್ಧದಂತಹ ತುರ್ತು ಸಂದರ್ಭಗಳಲ್ಲಿ ಬ್ಯಾಂಕ್ ನೀಡಿದ ಸಾಮಾಜಿಕ ನೆರವು ಸ್ಮರಣೀಯ’ ಎಂದರು.

ಬ್ಯಾಂಕಿನ ಅಧ್ಯಕ್ಷ ಜಯದೇವ ನಿಲೇಕಣಿ ಮಾತನಾಡಿ, ‘ಹಿರಿಯರ ಪರಿಶ್ರಮ, ಪ್ರಾಮಾಣಿಕತೆ ಮತ್ತು ಶಿಸ್ತಿನಿಂದಾಗಿ ಇಂದು 51 ಸಾವಿರ ಸದಸ್ಯರನ್ನು ಹೊಂದುವ ಮೂಲಕ ಸಂಸ್ಥೆ ಬೃಹತ್ ಆಗಿ ಬೆಳೆದಿದೆ’ ಎಂದರು. ಯಡಳ್ಳಿ ಸಹಕಾರ ಸಂಘದ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೆಕೇರಿ ಮಾತನಾಡಿ, ‘ಸಹಕಾರಿ ರಂಗದಲ್ಲಿ ಸರ್ಕಾರದ ಹಸ್ತಕ್ಷೇಪ ಕಡಿಮೆ ಆಗಬೇಕು ಮತ್ತು ಮುಂದಿನ ಪೀಳಿಗೆಗೆ ಈ ತತ್ವವನ್ನು ಹಸ್ತಾಂತರಿಸುವುದು ಇಂದಿನ ಸವಾಲಾಗಿದೆ’ ಎಂದರು. ಅಧ್ಯಕ್ಷತೆ ವಹಿಸಿದ್ದ ಪರಿಷತ್ ಶಿರಸಿ ಘಟಕದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಅವರು, ‘ಪ್ರಾಮಾಣಿಕ ಆಡಳಿತವಿದ್ದಾಗ ಮಾತ್ರ ಸಂಸ್ಥೆಗಳು ಬೆಳೆಯಲು ಸಾಧ್ಯ’ ಎಂದರು.

ADVERTISEMENT

ಕೃಷ್ಣ ಪದಕಿ ಸ್ವಾಗತಿಸಿದರು. ವಾಸುದೇವ ಶಾನುಭಾಗ ನಿರೂಪಿಸಿದರು. ಕೆ. ಮಹೇಶ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.