ADVERTISEMENT

ಶಿರಸಿ: ಸೌಹಾರ್ದ ಸಾರುವ ಕೆರೆಬೇಟೆ

ಕಲಕರಡಿ:ಸಿದ್ಧೇಶ್ವರ ದೇವಾಲಯ ದೇಣಿಗೆಗೆ ಮುಸ್ಲೀಮರ ಪಾಲು

ಗಣಪತಿ ಹೆಗಡೆ
Published 10 ಏಪ್ರಿಲ್ 2022, 20:30 IST
Last Updated 10 ಏಪ್ರಿಲ್ 2022, 20:30 IST
ಶಿರಸಿ ತಾಲ್ಲೂಕಿನ ಕಲಕರಡಿ ಗ್ರಾಮದಲ್ಲಿ ಸಿದ್ಧೇಶ್ವರ ದೇವಾಲಯದ ಅಭಿವೃದ್ಧಿ ಸಹಾಯಾರ್ಥ ಭಾನುವಾರ ಕೆರೆಬೇಟೆ ನಡೆಯಿತು.
ಶಿರಸಿ ತಾಲ್ಲೂಕಿನ ಕಲಕರಡಿ ಗ್ರಾಮದಲ್ಲಿ ಸಿದ್ಧೇಶ್ವರ ದೇವಾಲಯದ ಅಭಿವೃದ್ಧಿ ಸಹಾಯಾರ್ಥ ಭಾನುವಾರ ಕೆರೆಬೇಟೆ ನಡೆಯಿತು.   

ಶಿರಸಿ: ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರು ಅಂಗಡಿ ಹಾಕುವಂತಿಲ್ಲ. ಮುಸ್ಲಿಮರ ಆಟೊ ಏರುವಂತಿಲ್ಲ. ಹೀಗೆ ಹಲವೆಡೆ ಸಮಾಜವನ್ನು ವಿಭಜಿಸುವ ಯತ್ನ ನಡೆಯುತ್ತಿದೆ. ಆದರೆ ತಾಲ್ಲೂಕಿನ ಕಲಕರಡಿ ಗ್ರಾಮಸ್ಥರು ಇದಕ್ಕೆ ಆಸ್ಪದ ನೀಡುತ್ತಿಲ್ಲ.

ಇಲ್ಲಿನ ಸಿದ್ಧೇಶ್ವರ ದೇವಸ್ಥಾನದ ಸಹಾಯಾರ್ಥ ನಡೆಯುವ ಕೆರೆಬೇಟೆಯಲ್ಲಿ ಮುಸ್ಲಿಂ ಸಮುದಾಯದ ಇಪ್ಪತ್ತಕ್ಕೂ ಹೆಚ್ಚು ಜನರು ಪಾಲ್ಗೊಳ್ಳುತ್ತಾರೆ. ದೇವಾಲಯದ ಅಭಿವೃದ್ಧಿ ದೇಣಿಗೆ ಸಲುವಾಗಿ ಪ್ರತಿ ಕೂಣಿಗೆ ನಿಗದಿಪಡಿಸಲಾದ ದರವನ್ನು ಖುಷಿಯಿಂದಲೇ ಪಾವತಿಸುತ್ತಾರೆ.

ಪ್ರಸಕ್ತ ವರ್ಷವೂ ವಿಭಜಕ ಶಕ್ತಿಗಳು ವಿಜೃಂಭಿಸುತ್ತಿರುವ ನಡುವೆಯೂ ಮುಸ್ಲಿಂ ಸಮುದಾಯದ ಹಲವು ಜನರು ಕೆರೆಬೇಟೆಯಲ್ಲಿ ಪಾಲ್ಗೊಂಡರು. ‘ಸೌಹಾರ್ದದ ವಿಚಾರದಲ್ಲಿ ಭಿನ್ನಾಭಿಪ್ರಾಯವಿಲ್ಲ’ ಎಂಬುದನ್ನು ಸಾರಿದರು.

ADVERTISEMENT

ಕಲಕರಡಿ, ಅಂಡಗಿ, ಬನವಾಸಿ, ಮತ್ತಿತರ ಕಡೆಗಳಿಂದ ಬಂದಿದ್ದ ಮುಸ್ಲಿಂ ಸಮುದಾಯದ ಜನರು ದೇವಾಲಯದವರು ನೀಡಿದ ದೇಣಿಗೆ ಚೀಟಿ ಪಡೆದು, ಸ್ಥಳೀಯರಿಂದ ಕೂಣಿ ಖರೀದಿಸಿ ಮೀನು ಬೇಟೆಗೆ ಇಳಿದಿದ್ದರು.

‘ಅಕ್ಕಪಕ್ಕದ ಕೆಲವರು ಗ್ರಾಮಗಳಲ್ಲೇ ನಮ್ಮವರ ಅಂಗಡಿಗಳಿಗೆ ಜಾತ್ರೆ ವೇಳೆ ಅವಕಾಶ ನೀಡಲಿಲ್ಲ. ರಾಜ್ಯದ ಕೆಲವು ಕಡೆ ಇಂತಹ ಘಟನೆ ನಡೆಯುತ್ತಿರುವುದು ತಿಳಿದು ನೋವಾಯಿತು. ಆದರೆ ನಮ್ಮ ಗ್ರಾಮದಲ್ಲಿ ಅಂತಹ ಘಟನೆಗೆ ಆಸ್ಪದ ನೀಡಿಲ್ಲ ಎಂಬುದೇ ನಮಗೆ ಸಮಾಧಾನದ ಜತೆಗೆ ಖುಷಿ ಮೂಡಿಸಿದೆ’ ಎಂದು ಕಲಕರಡಿ ಗ್ರಾಮದ ಮೌಲಾಲಿ ಹೇಳಿದರು.

‘ಪ್ರತಿ ವರ್ಷ ಕೆರೆಬೇಟೆಯಲ್ಲಿ ಪಾಲ್ಗೊಳ್ಳುತ್ತೇವೆ. ಜಾತಿ, ಧರ್ಮದ ಬೇಧವನ್ನು ಈವರೆಗೆ ಯಾರೂ ಇಲ್ಲಿ ಮಾಡಿಲ್ಲ. ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಕೈಲಾದಷ್ಟು ಸಹಾಯವನ್ನೂ ಮಾಡುತ್ತ ಬಂದಿದ್ದೇವೆ’ ಎಂದು ಗ್ರಾಮಸ್ಥ ಅಜೀಜ್ ತಿಳಿಸಿದರು.

‘ಸಿದ್ಧೇಶ್ವರ ದೇವಾಲಯದ ಅಭಿವೃದ್ಧಿ ಚಟುವಟಿಕೆ, ಜೀರ್ಣೋದ್ಧಾರ ಕಾರ್ಯಕ್ಕೆ ಗ್ರಾಮದ ಪ್ರತಿ ಮನೆಗೆ ನಿಗದಿತ ಮೊತ್ತದ ದೇಣಿಗೆ ಚೀಟಿ ನೀಡಲಾಗಿದೆ. ಗ್ರಾಮದ ನಾಲ್ಕೈದು ಮುಸ್ಲಿಂ ಸಮುದಾಯದ ಮನೆಗೂ ಚೀಟಿ ಕಳುಹಿಸಲಾಗಿತ್ತು. ಅವರು ದೇಣಿಗೆ ಪಾವತಿಸಿದ್ದಾರೆ’ ಎಂದು ದೇವಾಲಯದ ಆಡಳಿತ ಸಮಿತಿ ಉಪಾಧ್ಯಕ್ಷ ಲವಪ್ಪ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ಉತ್ಸಾಹ ತುಂಬಿದ ಕೆರೆಬೇಟೆ:ಕಲಕರಡಿ ಗ್ರಾಮದ ಸಿದ್ಧೆಶ್ವರ ದೇವಸ್ಥಾನದ ಅಭಿವೃದ್ಧಿ ಸಹಾಯಾರ್ಥ ಭಾನುವಾರ ಕೆರೆಬೇಟೆ ನಡೆಯಿತು. ಸುಡು ಬಿಸಿಲನ್ನೂ ಲೆಕ್ಕಿಸದೆ ಕಲಕರಡಿ, ಅಂಡಗಿ, ಮಧುರವಳ್ಳಿ, ಬನವಾಸಿ, ಗುಡ್ನಾಪುರ, ಇನ್ನಿತರ ಗ್ರಾಮಗಳ 340ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಪ್ರತಿ ಕೂಣಿಗೆ ತಲಾ ₹500 ನಿಗದಿಪಡಿಸಲಾಗಿದ್ದು, ದೇವಸ್ಥಾನಕ್ಕೆ ಸುಮಾರು ₹1.70 ಲಕ್ಷದಷ್ಟು ಆದಾಯ ಸಂಗ್ರಹವಾಯಿತು. ‘ಇದನ್ನು ದೇವಸ್ಥಾನದ ವಿವಿಧ ಅಭಿವೃದ್ಧಿ ಕೆಲಸಕ್ಕೆ ಬಳಕೆ ಮಾಡಿಕೊಳ್ಳಲಾಗುವುದು’ ಎಂದು ದೇವಾಲಯದ ಸಮಿತಿಯವರು ತಿಳಿಸಿದರು.

---------

ಗ್ರಾಮದಲ್ಲಿ ಹಿಂದೂ–ಮುಸ್ಲಿಂ ಎಂಬ ಭೆದವಿಲ್ಲದೆ ಒಗ್ಗಟ್ಟಾಗಿದ್ದೇವೆ. ಪ್ರತಿಯೊಬ್ಬರೂ ಕಷ್ಟದಲ್ಲಿ ಪರಸ್ಪರ ಸಹಕಾರ ನೀಡುತ್ತೇವೆ.

-ಮೌಲಾಲಿ ಅಲಿ, ಕಲಕರಡಿ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.