ADVERTISEMENT

ಶಿರಸಿ: ಬಾವಿ ತೋಡಲು ಮಹಿಳೆಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2024, 23:31 IST
Last Updated 12 ಫೆಬ್ರುವರಿ 2024, 23:31 IST
ಶಿರಸಿಯ ಗಣೇಶನಗರದಲ್ಲಿ ಗೌರಿ ನಾಯ್ಕ ತೋಡುತ್ತಿರುವ ಬಾವಿಯನ್ನು ಅಧಿಕಾರಿಗಳು ವೀಕ್ಷಿಸಿದರು
ಶಿರಸಿಯ ಗಣೇಶನಗರದಲ್ಲಿ ಗೌರಿ ನಾಯ್ಕ ತೋಡುತ್ತಿರುವ ಬಾವಿಯನ್ನು ಅಧಿಕಾರಿಗಳು ವೀಕ್ಷಿಸಿದರು   

ಶಿರಸಿ: ತಾಲ್ಲೂಕಿನ ಹುತ್ಗಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣೇಶನಗರದ ಅಂಗನವಾಡಿ
ಕೇಂದ್ರ 6ರ ಹಿಂಭಾಗದಲ್ಲಿ ಇಲ್ಲಿನ ಗೌರಿ ನಾಯ್ಕ ತೋಡುತ್ತಿದ್ದ ಬಾವಿಗೆ ಎದುರಾದ ‘ಇಲಾಖೆಗಳ ಅನುಮತಿ ತೊಡಕು’ ತಾತ್ಕಾಲಿಕವಾಗಿ ನಿವಾರಣೆಯಾಗಿದೆ. 

ಸೋಮವಾರ ಅಂಗನವಾಡಿಗೆ ನೂರಾರು ಸಾರ್ವಜನಿಕರು ಆಗಮಿಸಿ ಬಾವಿ ತೋಡಲು ನಿರಾಕರಿಸುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅನುಮತಿ ನೀಡುವಂತೆ ಆಗ್ರಹಿಸಿದರು.

ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆಯ ಡಿ.ಆರ್.ಬೆಳ್ಳಿಮನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವೀಣಾ ಶಿರ್ಸಿಕರ್, ಶಿಕ್ಷಣ ಇಲಾಖೆಯ ಪಿ.ಬಸವರಾಜ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿ ಸತೀಶ ಹೆಗಡೆ ಸಾರ್ವಜನಿಕರ ಜತೆ ಸುದೀರ್ಘ ಚರ್ಚಿಸಿ, ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸಿಕೊಂಡು ಬಾವಿ ತೋಡಲು ಮೌಖಿಕ ಅನುಮತಿ
ನೀಡಿದರು. 

ADVERTISEMENT

ಇದೇ ವೇಳೆ ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು, ಅಂಗನವಾಡಿಗೆ ಕಾಂಪೌಂಡ್, ಬಾವಿಗೆ ರಿಂಗ್, ಕಟ್ಟೆ, ಪಂಪ್ ಸೆಟ್ ಹಾಗೂ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಕೊಡುವುದಾಗಿ ಭರವಸೆನೀಡಿದರು. ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ ನಾಯ್ಕ, ಉಪಾಧ್ಯಕ್ಷೆ ಶೋಭಾ ನಾಯ್ಕ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.