ಶಿರಸಿ: ರಸ್ತೆ ವಿಸ್ತರಣೆ ಜಾಗದಲ್ಲಿರುವ ವಿದ್ಯುತ್ ಕಂಬಗಳು ಹಾಗೂ ಕುಡಿಯುವ ನೀರಿನ ಪೈಪ್ ಸ್ಥಳಾಂತರ ಕಾಮಗಾರಿ ವಿಳಂಬವಾಗುತ್ತಿರುವ ಕಾರಣಕ್ಕೆ ನಗರಸಭೆ ವ್ಯಾಪ್ತಿಯ ನಿಲೇಕಣಿ ಪ್ರದೇಶದಲ್ಲಿ ಹಾದುಹೋಗಿರುವ ರಸ್ತೆ ದುರಸ್ತಿ ಕಾಣದೆ ವರ್ಷಗಳು ಕಳೆದಿವೆ. ಪ್ರಸ್ತುತ ಮಳೆಯಯಿಂದಾಗಿ ರಸ್ತೆ ಸಂಪೂರ್ಣ ಕೆರೆಯಂತಾಗಿ ಮಾರ್ಪಟ್ಟಿದ್ದು, ಪ್ರಯಾಣಿಕರು ಜೀವಾಪಾಯದ ನಡುವೆಯೇ ಸಂಚರಿಸುವಂತಾಗಿದೆ.
ಶಿರಸಿ –ಕುಮಟಾ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ವಾಣಿಜ್ಯ ನಗರಿ ಹುಬ್ಬಳ್ಳಿಗೆ ಘಟ್ಟದ ಕೆಳಗಿನ ತಾಲ್ಲೂಕಿನ ಪ್ರಮುಖ ಕೊಂಡಿಯಾದ ಈ ರಸ್ತೆಯು ನಿಲೇಕಣಿ ಭಾಗದಲ್ಲಿ ತೆರಳುವಾಗ ಹರ ಸಾಹಸಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರ ಸ್ಥಿತಿ ಹೇಳತೀರದಾಗಿದೆ. ನಿಲೇಕಣಿ ರಸ್ತೆಯಲ್ಲಿರುವ ಗುಂಡಿಗಳಲ್ಲಿ ಬಿದ್ದು ಗಾಯಗೊಂಡ ಘಟನೆಗಳು ನಡೆದಿದೆ. ಆದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವೇಗವಾಗಿ ಕಾಮಗಾರಿ ನಡೆಸುತ್ತಿಲ್ಲ ಎಂಬ ದೂರು ವ್ಯಾಪಕವಾಗಿದೆ. ಪ್ರಾಧಿಕಾರಕ್ಕೆ ಬೆನ್ನೆಲುಬಾಗಿ ನಿಲ್ಲಬೇಕಿದ್ದ ನಗರಾಡಳಿತ ಕೂಡ ನಿರ್ಲಕ್ಷ್ಯ ತೋರುತ್ತಿರುವುದು ಸಮಸ್ಯೆ ಇಮ್ಮಡಿಸುವಂತಾಗಿದೆ.
‘ಒಂದೂವರೆ ವರ್ಷದ ಹಿಂದೆ ನಗರದ ಅಗಸೆಬಾಗಿಲಿನ ಮೀನು ಮಾರುಕಟ್ಟೆಯಿಂದ ನಿಲೇಕಣಿವರೆಗಿನ ರಸ್ತೆಯನ್ನು ವಿಸ್ತರಣೆ ಮಾಡಿ, ಅರ್ಧಂಬರ್ಧ ಚರಂಡಿ ಕಾಮಗಾರಿ ನಡೆಸಿದ್ದರಿಂದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿ ವಾಹನ ಸವಾರರು ಪರದಾಡುವ ಸ್ಥಿತಿ ಎದುರಿಸಬೇಕಾಗಿದೆ. ಈ ಭಾಗದಲ್ಲಿ ರಸ್ತೆಯಂಚಿನ ವಿದ್ಯುತ್ ಕಂಬಗಳು ಹಾಗೂ ನೆಲದೊಳಗೆ ಹಾದು ಹೋಗಿರುವ ಕುಡಿಯುವ ನೀರಿನ ಪೈಪ್‍ಗಳನ್ನು ಸ್ಥಳೀಯ ನಗರಸಭೆಯವರು ಸ್ಥಳಾಂತರ ಮಾಡಿಕೊಡಬೇಕು. ಆದರೆ ಆ ಕೆಲಸ ಆಗುತ್ತಿಲ್ಲ. ಹೀಗಾಗಿ ರಸ್ತೆ ಕಾಮಗಾರಿ ನಡೆಯುತ್ತಿಲ್ಲ’ ಎಂಬುದು ಸ್ಥಳೀಯ ನಿವಾಸಿ ಪ್ರಕಾಶ ನಾಯ್ಕ ಮಾತು.
‘ನಿಲೇಕಣಿ ಕ್ರಾಸ್‌ನಿಂದ ಕುಮಟಾ ರಸ್ತೆ ಕಡೆ ತೆರಳುವ ಮಾರ್ಗದಲ್ಲಿ ಎತ್ತರದಲ್ಲಿ ಚರಂಡಿ ನಿರ್ಮಿಸಿದ್ದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೆ, ರಸ್ತೆ ಮೇಲೆ ನಿಂತಿದೆ. ಇದರಿಂದ ರಸ್ತೆ ಕೆರೆಯಂತಾಗಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಮಳೆಗಾಲ ಆರಂಭವಾಗುವ ಮುನ್ನ ಸಂಪೂರ್ಣ ನಿಲೇಕಣಿ ಭಾಗದಲ್ಲಿ ರಸ್ತೆ ಕಾಮಗಾರಿ ಮುಕ್ತಾಯಗೊಳಿಸದಿದ್ದರೆ ಇನ್ನಷ್ಟು ಅವಘಡಕ್ಕೆ ಕಾರಣವಾಗಲಿದೆ. ನಗರಸಭೆಯ ಜತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಎಚ್ಚೆತ್ತುಕೊಂಡು ಶೀಘ್ರವಾಗಿ ಕಾಮಗಾರಿ ಆರಂಭಿಸಬೇಕು’ ಎಂದು ಅವರು ಒತ್ತಾಯಿಸಿದರು.
‘ತಿಂಗಳ ಹಿಂದೆ ನಿಲೇಕಣಿ ಭಾಗದಲ್ಲಿ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಶಿರಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಬಾಳೆಗಿಡ ನೆಟ್ಟು ಸಂಚಾರ ತಡೆ ನಡೆಸಿ, ಎನ್‌ಎಚ್‌ಎಐ (ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ಅಧಿಕಾರಿಗಳು ಸ್ಥಳಕ್ಕಾಗಿಮಿಸುವಂತೆ ಪಟ್ಟು ಹಿಡಿದಿದ್ದರು. ಸ್ಥಳಕ್ಕಾಗಮಿಸಿದ ಅವರು, ರಾಜ್ಯ ಸರ್ಕಾರದಿಂದ ವಿದ್ಯುತ್ ಕಂಬ, ಕುಡಿಯುವ ನೀರಿನ ಪೈಪ್ ಸ್ಥಳಾಂತರಗೊಳಿಸಿದರೆ ತಕ್ಷಣ ಕಾಮಗಾರಿ ಆರಂಭಿಸುತ್ತೇವೆ ಎಂದು ಭರವಸೆ ನೀಡಿದ್ದರು. ಅದಕ್ಕೆ ಒಪ್ಪದ ಪ್ರತಿಭಟನಕಾರರು ತಾತ್ಕಾಲಿಕ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿದ್ದರು. ಅದಕ್ಕೆ ಅಧಿಕಾರಿಗಳು ಒಪ್ಪಿದ್ದರೂ ಈವರೆಗೆ ಸ್ಪಂದನೆ ದೊರೆತಿಲ್ಲ’ ಎನ್ನುತ್ತಾರೆ ಸ್ಥಳೀಯರು.
ರಸ್ತೆ ಕಾಮಗಾರಿ ನಡೆಸಲು ಗುತ್ತಿಗೆ ಕಂಪನಿಯವರಿಗೆ ನಗರಸಭೆಯಿಂದ ಸಹಕಾರ ಅಗತ್ಯ. ತಕ್ಷಣ ವಿದ್ಯುತ್ ಕಂಬಗಳು ನೀರಿನ ಪೈಪ್‍ಲೈನ್‍ಗಳನ್ನು ಸ್ಥಳಾಂತರಿಸುವ ಕೆಲಸ ಆಗಬೇಕುವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.