ADVERTISEMENT

ಮುಂಡಗೋಡ: 67 ಹಾವಿನ ಮರಿ ಆಹಾರ ಅರಸಲು ಬಿಟ್ಟ ಅರಣ್ಯ ಸಿಬ್ಬಂದಿ

70 ಕೆರೆ ಹಾವಿನ ಮೊಟ್ಟೆಗಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 4:17 IST
Last Updated 19 ಸೆಪ್ಟೆಂಬರ್ 2025, 4:17 IST
ಮುಂಡಗೋಡ ತಾಲ್ಲೂಕಿನ ಕಾತೂರ ಅರಣ್ಯ ವಲಯ ವ್ಯಾಪ್ತಿಯ ಸಸ್ಯಪಾಲನಾ ಕ್ಷೇತ್ರದ ಸನಿಹ ಹಾವಿನ ಮರಿಗಳನ್ನು ಗುರುವಾರ ಬಿಡಲಾಯಿತು
ಮುಂಡಗೋಡ ತಾಲ್ಲೂಕಿನ ಕಾತೂರ ಅರಣ್ಯ ವಲಯ ವ್ಯಾಪ್ತಿಯ ಸಸ್ಯಪಾಲನಾ ಕ್ಷೇತ್ರದ ಸನಿಹ ಹಾವಿನ ಮರಿಗಳನ್ನು ಗುರುವಾರ ಬಿಡಲಾಯಿತು   

ಮುಂಡಗೋಡ: ತಾಲ್ಲೂಕಿನ ಪಾಳಾ ಗ್ರಾಮದ ಪೂರ್ವ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಂಡುಬಂದಿದ್ದ ಅಂದಾಜು 70 ಕೆರೆ ಹಾವಿನ ಮೊಟ್ಟೆಗಳನ್ನು ರಕ್ಷಿಸಿ, ಅವುಗಳಿಗೆ ಕೃತಕ ಕಾವು ನೀಡುವ ಮೂಲಕ ಮರಿಗಳನ್ನಾಗಿ ಬೆಳೆಸಲಾಗಿದೆ. ಎರಡು ತಿಂಗಳ ಹಿಂದೆ ಶಾಲೆಯ ಆವರಣದಲ್ಲಿ ಪ್ರತ್ಯಕ್ಷವಾಗಿದ್ದ ಹಾವು ಹಿಡಿಯಲು ಹೋಗಿದ್ದ ವನಪಾಲಕ ಮುತ್ತುರಾಜ ಹಳ್ಳಿ ಹಾಗೂ ಸಿಬ್ಬಂದಿಗೆ ಮೊಟ್ಟೆಗಳು ಕಂಡು ಬಂದಿದ್ದವು.

ಶಾಲಾ ಕಾಂಪೌಂಡ್‌ ಗೋಡೆಯ ಕೆಳಗಡೆ ಮೂರು ಗುಂಪುಗಳಲ್ಲಿ ಮೊಟ್ಟೆಗಳು ಇರುವುದು ಕಂಡುಬಂದಿತ್ತು. ಮೊಟ್ಟೆಗಳನ್ನು ಸಂರಕ್ಷಿಸಿ ಮರಿಗಳನ್ನಾಗಿ ಮಾಡಲು ಸಾಧ್ಯವೇ ಎಂಬುದರ ಕುರಿತು ಅನುಭವಿ ಉರಗ ತಜ್ಞರೊಂದಿಗೆ ವನಪಾಲಕ ಮುತ್ತುರಾಜ ಚರ್ಚಿಸಿದ್ದರು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಉರಗ ತಜ್ಞರ ಮಾರ್ಗದರ್ಶನದಂತೆ, ಮೊಟ್ಟೆಗಳನ್ನು ಮಡಿಕೆಗಳಲ್ಲಿ ಸಂಗ್ರಹಿಸಿ, ತಮ್ಮ ಮನೆಯ ಹಿತ್ತಲಿನಲ್ಲಿ ಮರಿ ಆಗುವ ಪ್ರಕ್ರಿಯೆಗೆ ಪೂರಕ ವಾತಾವರಣ ಕಲ್ಪಿಸಿದ್ದರು.

ಸತತ 50 ದಿನಗಳ ಆರೈಕೆ, ಕೃತಕ ಕಾವು ನೀಡುವ ಪ್ರಕ್ರಿಯೆ ನಂತರ, ಸುಮಾರು 67 ಮೊಟ್ಟೆಗಳಿಂದ ಮರಿಗಳಾಗಿ ಹೊರಬಂದಿವೆ. ವಲಯ ಅರಣ್ಯ ಅಧಿಕಾರಿ ವಿರೇಶ ಬಿ. ನೇತೃತ್ವದಲ್ಲಿ ಮರಿಗಳನ್ನು ಕಾತೂರ ವಲಯದ ಸಸ್ಯ ಪಾಲನಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗುರುವಾರ ಬಿಡಲಾಯಿತು.

ADVERTISEMENT

‘ಹಾವು ಹಿಡಿಯಲು ಹೋದಾಗ ಕಂಡುಬಂದಿದ್ದ ಮೊಟ್ಟೆಗಳನ್ನು ಸಂಗ್ರಹಿಸಿದ್ದೆ. ಅದರಲ್ಲಿ ಮೂರು ಮೊಟ್ಟೆಗಳು ಹಾಳಾಗಿದ್ದವು. ಮೊಟ್ಟೆ ಇದ್ದ ಜಾಗದ ಮಣ್ಣನ್ನೂ ಸಹ ಸಂಗ್ರಹಿಸಿ, ಅದನ್ನು ಮಡಿಕೆಗಳಲ್ಲಿ ತುಂಬಿ, ಮೊಟ್ಟೆಗಳನ್ನು ಅದರಲ್ಲಿಟ್ಟು, ಒಣ ಭತ್ತದ ಹುಲ್ಲಿನಿಂದ ಮುಚ್ಚಿದೆ. ದೊಡ್ಡದಾದ ಪ್ಲಾಸ್ಟಿಕ್‌ ಟ್ಯಾಂಕ್‌ನಲ್ಲಿ ಮಡಿಕೆಗಳನ್ನು ಇಟ್ಟು ಬಟ್ಟೆಯಿಂದ ಟ್ಯಾಂಕ್‌ನ ಬಾಯಿ ಮುಚ್ಚಿದ್ದೆ. ಕೆಲವು ದಿನಗಳ ನಂತರ ಟ್ಯಾಂಕ್‌ಗೆ ಮುಚ್ಚಿದ್ದ ಬಟ್ಟೆ ತೆರೆದು ಮೊಟ್ಟೆ ಒತ್ತಿ ನೋಡಿದಾಗ, ಮರಿ ಬಿಡುವ ಪ್ರಕ್ರಿಯೆ ನಡೆಯುತ್ತಿರುವುದು ಗೋಚರಿಸಿತು. ಈ ಕುರಿತು ಉಡುಪಿಯ ಉರಗತಜ್ಞ ಗುರುರಾಜ ಸನೀಲ ಅವರ ಮಾರ್ಗದರ್ಶನ ಪಡೆದಿದ್ದೆ. ಪೊರೆ ಬಿಟ್ಟ ಒಂದು ವಾರದ ನಂತರ ಮರಿಗಳನ್ನು ಆಹಾರ ಅರಸಲು ಅನುಕೂಲವಾಗುವಂತೆ ಸಸ್ಯಪಾಲನಾ ಕ್ಷೇತ್ರದ ಆವರಣದಲ್ಲಿ ಬಿಡಲಾಯಿತು‘ ಎಂದು ವನಪಾಲಕ ಮುತ್ತುರಾಜ ಹಳ್ಳಿ ಹೇಳಿದರು.

‘ಸರ್ಕಾರಿ ವಸತಿಗೃಹದ ಹಿಂಬದಿಯಲ್ಲಿ ಖಾಲಿ ಜಾಗವಿದ್ದಿದ್ದರಿಂದ, ಅಲ್ಲಿ ಮರಿಗಳನ್ನು ಮಾಡಲು ಸೂಕ್ತ ತಾಣ ಸಿಕ್ಕಿದಂತಾಗಿದೆ. ಮನೆಯಲ್ಲಿ ಕುಟುಂಬಸ್ಥರು ನಿತ್ಯವೂ ಆತಂಕ ವ್ಯಕ್ತಪಡಿಸುತ್ತಿದ್ದರು. ಹಾವುಗಳನ್ನು ಮನೆಯವರೆಗೆ ತರುವುದು ಸರಿಯಲ್ಲ ಎಂದು ಭಯದಿಂದ ಹೇಳುತ್ತಿದ್ದರು. ಆದರೂ ಅವುಗಳನ್ನು ರಕ್ಷಿಸಿ, ನಿಸರ್ಗಕ್ಕೆ ಬಿಡಬೇಕೆಂಬ ಆಸೆ ಬಲವಾಗಿತ್ತು. ಉರಗಗಳ ರಕ್ಷಣೆಯಲ್ಲಿ ಇದೊಂದು ಹೊಸ ಅನುಭವ ನೀಡಿದೆ. ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ನಿರಂತರವಾಗಿತ್ತು‘ ಎಂದರು.

ಕಾತೂರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಉರಗಗಳ ರಕ್ಷಣೆಯಲ್ಲಿ ವನಪಾಲಕ ಮುತ್ತುರಾಜ ಹಾಗೂ ಇನ್ನಿತರ ಸಿಬ್ಬಂದಿ ಉತ್ತಮ ಕೆಲಸ ಮಾಡುತ್ತಿದ್ದಾರೆ
ವಿರೇಶ.ಬಿ. ವಲಯ ಅರಣ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.