ADVERTISEMENT

ತಜ್ಞರ ವರದಿ ಆಧರಿಸಿ ಕಾಮಗಾರಿಗಳಿಗೆ ಅನುಮೋದನೆ: ಸಚಿವ ಸಿ.ಸಿ.ಪಾಟೀಲ ಭರವಸೆ

ಸೇತುವೆಗಳಿಗೆ ವಿಶೇಷ ಅನುದಾನ: ಮುಖ್ಯಮಂತ್ರಿ ಜೊತೆ ಚರ್ಚಿಸಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 15:38 IST
Last Updated 30 ಆಗಸ್ಟ್ 2021, 15:38 IST
ಕಾರವಾರಕ್ಕೆ ಸೋಮವಾರ ಭೇಟಿ ನೀಡಿದ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಅವರಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದರು. ಸಚಿವ ಶಿವರಾಮ ಹೆಬ್ಬಾರ, ಶಾಸಕಿ ರೂಪಾಲಿ ನಾಯ್ಕ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಇದ್ದಾರೆ.
ಕಾರವಾರಕ್ಕೆ ಸೋಮವಾರ ಭೇಟಿ ನೀಡಿದ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಅವರಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದರು. ಸಚಿವ ಶಿವರಾಮ ಹೆಬ್ಬಾರ, ಶಾಸಕಿ ರೂಪಾಲಿ ನಾಯ್ಕ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಇದ್ದಾರೆ.   

ಕಾರವಾರ: ‘ಭೂಕುಸಿತವಾಗಿರುವ ಕಳಚೆ, ಅರಬೈಲ್‌ನಂತಹ ಪ್ರದೇಶಗಳಲ್ಲಿ ದುರಸ್ತಿಗೆ ವಿಶೇಷ ತಾಂತ್ರಿಕ ಸಹಾಯ ಅಗತ್ಯವಿದೆ. ಆ ಪ್ರದೇಶಗಳಿಗೆ ಭೇಟಿ ನೀಡಿದ ತಜ್ಞರ ವರದಿ ಇನ್ನಷ್ಟೇ ಸಲ್ಲಿಕೆಯಾಗಬೇಕಿದೆ’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯಲ್ಲಿ ಆಗಿರುವ ಹಾನಿ ಮತ್ತು ಕಾಮಗಾರಿಗಳ ಕುರಿತು ಅಧಿವೇಶನದ ಸಮಯದಲ್ಲಿ ಈ ಭಾಗದ ಶಾಸಕರನ್ನು ಸೇರಿಸಿಕೊಂಡು ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು. ತಜ್ಞರ ವರದಿಯನ್ನು ಆಧರಿಸಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗುವುದು’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯಲ್ಲಿ ತಕ್ಷಣ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆಗೆ ₹110 ಕೋಟಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ₹100 ಕೋಟಿ ಮಂಜೂರು ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆಯ ಖಾತೆಗೆ ಈಗಾಗಲೇ ಹಣ ವರ್ಗಾವಣೆಯಾಗಿದೆ. ಹೆಚ್ಚು ಹಾನಿಗೀಡಾದ ಪ್ರದೇಶಗಳ ತ್ವರಿತ ದುರಸ್ತಿಗೆ ಆದ್ಯತೆ ನೀಡಲು ಸೂಚಿಸಿದ್ದೇನೆ’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯಲ್ಲಿ ಸೇತುವೆಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹಾಗೂ ಈ ಭಾಗದ ಶಾಸಕರು ಬೇಡಿಕೆಯಿಟ್ಟಿದ್ದಾರೆ. ಮುಖ್ಯಮಂತ್ರಿ ಮತ್ತು ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಹಣ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದರು.

‘ಭೂಕುಸಿತವಾಗುತ್ತಿರುವ ಪ್ರದೇಶಗಳ ಸಮೀಪವೇ ಕೈಗಾ ಅಣು ವಿದ್ಯುತ್ ಸ್ಥಾವರವಿದೆ. ಅದರ ಸುರಕ್ಷತೆಯ ಬಗ್ಗೆ ಏನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಕೇಳಿದಾಗ, ‘ಅದರ ಬಗ್ಗೆ ತಜ್ಞರು ಉತ್ತರಿಸುತ್ತಾರೆ. ಭೂಕುಸಿತವಾದ ಪ್ರದೇಶಗಳ ದುರಸ್ತಿಯ ಬಗ್ಗೆ ಸರ್ಕಾರದ ಗಮನವಿದೆ’ ಎಂದು ಸಚಿವ ಪಾಟೀಲ ಉತ್ತರಿಸಿದರು.

‘ರಾಜಕೀಯ ಮಾಡಬೇಕಿಲ್ಲ’:

‘ಅಣಶಿ ಘಟ್ಟದಲ್ಲಿ ಸ್ಥಳೀಯರೇ ಮಣ್ಣು ತೆರವು ಮಾಡಿದಂತೆ ಇಲಾಖೆಯಿಂದಲೇ ಮಾಡಬಹುದಿತ್ತಲ್ಲವೇ’ ಎಂದು ಸುದ್ದಿಗಾರರು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವರಾಮ ಹೆಬ್ಬಾರ, ‘ಅಣಶಿ ಘಟ್ಟದ ದುರಸ್ತಿಗೆ ಮಳೆ ಕಡಿಮೆಯಾಗುವಂತೆ ಅಧಿಕಾರಿಗಳು ತಿಳಿಸಿದ್ದರು. ಸ್ಥಳೀಯರು ಹಣ ವ್ಯಯಿಸಿ ಕೆಲಸ ಮಾಡಬೇಕಾಗಿಲ್ಲ. ಯಾವುದೇ ರಾಜಕೀಯ ಪಕ್ಷ ಮಾಡಬೇಕಾಗಿಲ್ಲ. ಅವರು ವ್ಯಯಿಸಿದ ಹಣವನ್ನು ಇಲಾಖೆಯಿಂದ ಭರಿಸುವುದಾಗಿ ತಿಳಿಸಿದ್ದೆವು. ಅದಕ್ಕೆ ಒಪ್ಪಿಕೊಂಡ ಮೇಲೆಯೇ ಅನುಮತಿ ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ವಿಶ್ವಬ್ಯಾಂಕ್ ಅನುದಾನದಲ್ಲಿ ಅಣಶಿ ಮತ್ತು ಕಾರವಾರ– ಜೊಯಿಡಾ ರಸ್ತೆ ಕಾಮಗಾರಿಗೆ ಟೆಂಡರ್ ಕೂಡ ಆಗಿತ್ತು. ಆದರೆ, ಕಾಳಿ ಹುಲಿ ಸಂರಕ್ಷಿತ ವಲಯದ ಕಾರಣದಿಂದ ರಸ್ತೆ ಈಗ ಇರುವುದಕ್ಕಿಂತ ವಿಸ್ತರಣೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ಆದೇಶವಾಯಿತು. ಈಗ ಎಲ್ಲಿ ಮಣ್ಣು ಬಿದ್ದಿದೆಯೋ ಅಲ್ಲಿ ಶಾಶ್ವತ ಪರಿಹಾರದ ಬಗ್ಗೆ ತಿಳಿಯಲು ತಾಂತ್ರಿಕ ತಜ್ಞರ ತಂಡ ಭೇಟಿ ನೀಡಲಿದೆ’ ಎಂದರು.

ಶಾಸಕರಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಸುನೀಲ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

* ಉತ್ತರ ಕನ್ನಡದಲ್ಲಿ ಆಗಿರುವ ಹಾನಿಯ ಬಗ್ಗೆ ಸಚಿವ ಹೆಬ್ಬಾರರು ಹೇಳಿದಾಗ ತಮಾಷೆ ಮಾಡಿದ್ದೆ. ನಾನು ಕಣ್ಣಾರೆ ಕಂಡಾಗ ಪರಿಸ್ಥಿತಿಯ ಭೀಕರತೆ ಅನುಭವಕ್ಕೆ ಬಂದಿದೆ.

– ಸಿ.ಸಿ.ಪಾಟೀಲ, ಲೋಕೋಪಯೋಗಿ ಇಲಾಖೆ ಸಚಿವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.