ADVERTISEMENT

ಕಾರವಾರ | ಸರ್ಕಾರಿ ಆಸ್ಪತ್ರೆ: ತಜ್ಞ ವೈದ್ಯರಿಲ್ಲದ ಕೊರಗು

ಗಂಭೀರ ಕಾಯಿಲೆ ಪತ್ತೆ ಕಷ್ಟ: ಆಸ್ಪತ್ರೆಗಲ್ಲ, ವೈದ್ಯರಿಗಾಗಿ ಹೋರಾಡುವ ಅನಿವಾರ್ಯತೆ

ಗಣಪತಿ ಹೆಗಡೆ
Published 11 ಜನವರಿ 2024, 6:27 IST
Last Updated 11 ಜನವರಿ 2024, 6:27 IST

ಕಾರವಾರ (ಉತ್ತರ ಕನ್ನಡ): ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ‘ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಿ’ ಎಂಬ ಕೂಗು ನಿರಂತರವಾಗಿದೆ. ಆಸ್ಪತ್ರೆ ಸ್ಥಾಪನೆಗೆ ಹೋರಾಟ ನಡೆಯುತ್ತಲೇ ಇದೆ. ಆದರೆ ಇರುವ ಆಸ್ಪತ್ರೆಯಲ್ಲೇ ತಜ್ಞ ವೈದ್ಯರಿಲ್ಲದ ಸ್ಥಿತಿ ಉಂಟಾಗಿದೆ.

ಜಿಲ್ಲೆಯ ವಿವಿಧ ತಾಲ್ಲೂಕು ಆಸ್ಪತ್ರೆಗಳಲ್ಲಿ 104 ಕಾಯಂ ತಜ್ಞ ವೈದ್ಯರ ಅಗತ್ಯವಿದೆ. ಈ ಪೈಕಿ 60 ಮಂದಿ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ. 44 ಹುದ್ದೆಗಳು ಖಾಲಿ ಇದ್ದು ಹಲವು ವರ್ಷವೇ ಕಳೆದಿದೆ. ಅವುಗಳನ್ನು ಭರ್ತಿ ಮಾಡಲು ಆರೋಗ್ಯ ಇಲಾಖೆ ಹರಸಾಹಸಪಡಬೇಕಾದ ಸ್ಥಿತಿಯೂ ಇದೆ.

ಫಿಸಿಶನ್, ಜನರಲ್ ಸರ್ಜನ್, ಸ್ತ್ರೀರೋಗ ತಜ್ಞ, ಮಕ್ಕಳ ತಜ್ಞ, ಅನಸ್ತೇಶಿಯಾ, ಕಿವಿ, ಗಂಟಲು ಮತ್ತು ಮೂಗು ತಜ್ಞ, ಮೂಳೆರೋಗ ತಜ್ಞ, ಕಣ್ಣಿನ ತಜ್ಞ, ಚರ್ಮರೋಗ ತಜ್ಞರ ಹುದ್ದೆಗಳು ಆಸ್ಪತ್ರೆಗಳಲ್ಲಿ ಅಗತ್ಯವಿದೆ. ಈ ತಜ್ಞರ ಹುದ್ದೆಗಳ ಕೊರತೆಯ ಸಮಸ್ಯೆ ಬಹುತೇಕ ತಾಲ್ಲೂಕು ಆಸ್ಪತ್ರೆಗಳಲ್ಲಿ ಇದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಕೆಲವು ಕಡೆ ವೈದ್ಯರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ.

ADVERTISEMENT

‘ಗಂಭೀರ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಒದಗಿಸಲು ತಜ್ಞ ವೈದ್ಯರು ಬೇಕಾಗುತ್ತಾರೆ. ಹುದ್ದೆ ಮಂಜೂರಾತಿ ಇದ್ದರೂ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ತಜ್ಞ ವೈದ್ಯರು ಮುಂದೆ ಬರುತ್ತಿಲ್ಲ. ಬಂದರೂ ಅಲ್ಪಕಾಲ ಕೆಲಸ ಮಾಡಿ ಖಾಸಗಿ ಆಸ್ಪತ್ರೆಗಳತ್ತಲೇ ಮುಖಮಾಡುತ್ತಾರೆ. ಇದರಿಂದ ಹುದ್ದೆ ಭರ್ತಿಯೇ ದೊಡ್ಡ ಸವಾಲು’ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸಮಸ್ಯೆ ಹೇಳಿಕೊಂಡರು.

‘ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪಿಸಲು ಹೋರಾಟ ಒಂದೆಡೆ ನಡೆಯುತ್ತಿದೆ. ಆದರೆ, ಇರುವ ಆಸ್ಪತ್ರೆಗಳಲ್ಲೇ ವೈದ್ಯರ ಕೊರತೆ ಉಂಟಾಗಿರುವುದು ಜಿಲ್ಲೆಯ ಆರೋಗ್ಯ ವ್ಯವಸ್ಥೆಯನ್ನು ಅಣಕಿಸುವಂತೆ ಮಾಡಿದೆ. ಆಸ್ಪತ್ರೆ ಸ್ಥಾಪನೆಗೆ ಬೇಡಿಕೆಗೆ ಹೋರಾಟ ನಡೆಸುವುದಕ್ಕಿಂತ ಸದ್ಯ ತಜ್ಞ ವೈದ್ಯರ ನೇಮಕಕ್ಕೆ ಹೋರಾಟ ನಡೆಸಬೇಕಾಗಿ ಬಂದಿದೆ’ ಎಂದು ಹೋರಾಟಗಾರ ಮಹೇಶ ನಾಯ್ಕ ಹೇಳಿದರು.

ಎಲ್ಲೆಲ್ಲಿ ಖಾಲಿ?

ಫಿಸಿಶಿಯನ್: ಶಿರಸಿ, ದಾಂಡೇಲಿ, ಯಲ್ಲಾಪುರ, ಮುಂಡಗೋಡ, ಹಳಿಯಾಳ.ಜನರಲ್ ಸರ್ಜನ್: ಯಲ್ಲಾಪುರ, ಮುಂಡಗೋಡ, ಜೊಯಿಡಾ

ಸ್ತ್ರೀರೋಗ ತಜ್ಞ: ಅಂಕೋಲಾ, ಜೊಯಿಡಾ, ಪಾಳಾ (ಸಮುದಾಯ ಆರೋಗ್ಯ ಕೇಂದ್ರ)

ಮಕ್ಕಳ ತಜ್ಞ: ಹಳಿಯಾಳ, ಜೊಯಿಡಾ, ಹೊನ್ನಾವರ, ದಾಂಡೇಲಿ, ಪಾಳಾ ಮತ್ತು ಶಿರಾಲಿ (ಸಮುದಾಯ ಆರೋಗ್ಯ ಕೇಂದ್ರಗಳು)

ಅನಸ್ತೇಶಿಯಾ: ಜೊಯಿಡಾ, ದಾಂಡೇಲಿ, ಯಲ್ಲಾಪುರ, ಮುಂಡಗೋಡ, ಪಾಳಾ

ಕಿವಿ, ಗಂಟಲು ಮತ್ತು ಮೂಗು: ಹೊನ್ನಾವರ, ಕುಮಟಾ, ಯಲ್ಲಾಪುರ, ಜೊಯಿಡಾ

ಕಣ್ಣುತಜ್ಞ: ಕುಮಟಾ, ಹೊನ್ನಾವರ, ಭಟ್ಕಳ, ಸಿದ್ದಾಪುರ, ಅಂಕೋಲಾ, ಮುಂಡಗೋಡ, ಶಿರಸಿ

ಮೂಳೆರೋಗ ತಜ್ಞ: ಜೊಯಿಡಾ, ಮುಂಡಗೋಡ

ಚರ್ಮರೋಗ ತಜ್ಞ: ಅಂಕೋಲಾ, ಸಿದ್ದಾಪುರ, ಯಲ್ಲಾಪುರ, ಹಳಿಯಾಳ, ಜೊಯಿಡಾ, ಭಟ್ಕಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.