ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಪೂರ್ವಸಿದ್ಧತೆ

ಪ್ರತಿ ವಿದ್ಯಾರ್ಥಿಯ ಮಾಹಿತಿ ಸಂಗ್ರಹ

ಸಂಧ್ಯಾ ಹೆಗಡೆ
Published 6 ಜೂನ್ 2020, 20:13 IST
Last Updated 6 ಜೂನ್ 2020, 20:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿರಸಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹೇಗೆ ತಲುಪುತ್ತಾರೆ ಎಂಬ ಕುರಿತು ಪ್ರತಿ ವಿದ್ಯಾರ್ಥಿಯ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ಶಿಕ್ಷಣ ಇಲಾಖೆ ನಿರತವಾಗಿದೆ. ಸಂಬಂಧಪಟ್ಟ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಜೂನ್ 8ರ ಒಳಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ವಿವರ ನೀಡುವಂತೆ ಇಲಾಖೆ ಸೂಚಿಸಿದೆ.

ಜೂನ್ 25ರಿಂದ ಆರಂಭವಾಗಲಿರುವ ಪರೀಕ್ಷೆಯ ಸಂದರ್ಭದಲ್ಲಿ ಮಕ್ಕಳಿಗೆ ಸುರಕ್ಷೆ ಕಾಪಾಡುವ ಉದ್ದೇಶದಿಂದ ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿ 10, ಸಿದ್ದಾಪುರ 7, ಯಲ್ಲಾಪುರ 4, ಮುಂಡಗೋಡ 4, ಹಳಿಯಾಳ 7, ಜೊಯಿಡಾ ತಾಲ್ಲೂಕಿನಲ್ಲಿ 3 ಪರೀಕ್ಷಾ ಕೇಂದ್ರ ನಿಗದಿಪಡಿಸಲಾಗಿದೆ. ಒಟ್ಟು 10,691 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಪ್ರತಿ ವಿದ್ಯಾರ್ಥಿ ಪರೀಕ್ಷಾ ಕೇಂದ್ರ ತಲುಪುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

‘ವಿದ್ಯಾರ್ಥಿ ಪಾಲಕರ ಜೊತೆ ಪರೀಕ್ಷಾ ಕೇಂದ್ರಕ್ಕೆ ಬರುವುದಾದಲ್ಲಿ, ಆ ವಿದ್ಯಾರ್ಥಿ ಯಾವ ವಾಹನದಲ್ಲಿ ಕೇಂದ್ರವನ್ನು ತಲುಪುತ್ತಾನೆ ಎಂಬುದನ್ನು ಸ್ಪಷ್ಟಪಡಿಸಬೇಕು. ಬೈಕ್‌ನಲ್ಲಿ ಬರುವುದಾದರೆ, ಆ ಮಗು ಕಡ್ಡಾಯವಾಗಿ ರೇನ್‌ಕೋಟ್ ಹೊಂದಿರಬೇಕು. ಇಂತಹ ಸೂಕ್ಷ್ಮ ಸಂಗತಿಗಳಿಗೂ ಒತ್ತು ನೀಡಿ, ಪರೀಕ್ಷೆ ಸಿದ್ಧತೆ ನಡೆಸಲಾಗಿದೆ. ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆ ಕೂಡ ಇರುತ್ತದೆ’ ಎಂದು ಡಿಡಿಪಿಐ ದಿವಾಕರ ಶೆಟ್ಟಿ ತಿಳಿಸಿದರು.

ADVERTISEMENT

ಜಡಿಮಳೆಯ ಚಿಂತೆ:ಜೂನ್, ಜುಲೈ ತಿಂಗಳುಗಳಲ್ಲಿ ಮಲೆನಾಡಿನಲ್ಲಿ ಜಡಿಮಳೆಯಾಗುತ್ತದೆ. ಹಳ್ಳ–ಕೊಳ್ಳಗಳು ತುಂಬಿ ಹರಿಯುವ ಗ್ರಾಮೀಣ ಪ್ರದೇಶಗಳಿಂದ ಮಕ್ಕಳನ್ನು ಪರೀಕ್ಷೆಗೆ ಕಳುಹಿಸುವುದೇ ಪಾಲಕರಿಗೆ ದೊಡ್ಡ ಸಾಹಸ. ಇದು ಒಂದೆಡೆಯಾದರೆ, ಪರೀಕ್ಷೆಗೆ ಬರೆಯುವ ಕೊಠಡಿಗಳಲ್ಲಿ ಬೆಳಕಿನ ಕೊರತೆ, ಸೋರುವ ಕೊಠಡಿಗಳು, ಕೈಕೊಡುವ ವಿದ್ಯುತ್‌ನಿಂದ ಮಕ್ಕಳು ನಿರಾತಂಕವಾಗಿ ಪರೀಕ್ಷೆ ಬರೆಯುವುದು ಕಷ್ಟಸಾಧ್ಯ ಎಂದು ಹಲವಾರು ಪಾಲಕರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಕುರಿತು ದಿವಾಕರ ಶೆಟ್ಟಿ ಅವರ ಗಮನ ಸೆಳೆದಾಗ, ‘ಪರೀಕ್ಷಾ ಕೇಂದ್ರಗಳಿರುವ ಶಾಲೆಗಳಲ್ಲಿ ವಿದ್ಯುತ್ ವ್ಯವಸ್ಥೆಯನ್ನು ಇನ್ನೊಮ್ಮೆ ಪರಿಶೀಲಿಸುವಂತೆ ಎಲ್ಲ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ. ಬೆಳಿಗ್ಗೆ 9.30ಕ್ಕೆ ಪರೀಕ್ಷಾ ಕೇಂದ್ರಕ್ಕೆ ಬರುವ ಮಗುವಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಪರೀಕ್ಷೆ ಬರೆಯುವ ಸ್ಥಳದಲ್ಲಿ ಕೂರಿಸಲಾಗುತ್ತದೆ. ಪರೀಕ್ಷಾ ಕೊಠಡಿಯ ಮಾಹಿತಿಯನ್ನು ಪ್ರವೇಶಪತ್ರ ನೀಡುವಾಗಲೇ ಶಾಲೆಯ ಮೂಲಕ ತಿಳಿಸಲಾಗುತ್ತದೆ’ ಎಂದರು.

ತುರ್ತು ಸಂದರ್ಭಕ್ಕೆ ನಿಗದಿಪಡಿಸಿರುವ ಕೇಂದ್ರಗಳು

ಶಿರಸಿ– ಮಾರಿಕಾಂಬಾ ಪದವಿಪೂರ್ವ ಕಾಲೇಜು, ವಿದ್ಯೋದಯ ಪ್ರೌಢಶಾಲೆ ಯಡಳ್ಳಿ

ಸಿದ್ದಾಪುರ– ಲಿಟ್ಲ್‌ಫ್ಲವರ್ ಪ್ರೌಢಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜು ಹಳದಕಟ್ಟಾ

ಯಲ್ಲಾಪುರ– ಮದರ್‌ ತೆರೇಸಾ ಪ್ರೌಢಶಾಲೆ

ಮುಂಡಗೋಡ– ಲೊಯೋಲಾ ಕೇಂದ್ರೀಯ ವಿದ್ಯಾಲಯ

ಹಳಿಯಾಳ– ಸರ್ಕಾರಿ ಪದವಿಪೂರ್ವ ಕಾಲೇಜು ಹಳೇ ದಾಂಡೇಲಿ

ಜೊಯಿಡಾ– ಹೋಲಿ ಫ್ಯಾಮಿಲಿ ಹಿರಿಯ ಪ್ರಾಥಮಿಕ ಶಾಲೆ

ಮಕ್ಕಳು ಪಾಲಿಸಬೇಕಾದ ನಿಯಮ

* ಮಕ್ಕಳು ಕಡ್ಡಾಯವಾಗಿ ಜೆಲ್ ಅಥವಾ ಇಂಕ್ ಪೆನ್ ಬಳಸಬಾರದು

* ಎಲ್ಲ ಮೊಬೈಲ್ ಒಂದೆಡೆ ಇಟ್ಟು ಆಮೇಲೆ ಮಕ್ಕಳಿಗೆ ನೀಡುವುದರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ತರಬಾರದು

* ಮಕ್ಕಳು ಮನೆಯಿಂದಲೇ ಕುಡಿಯುವ ನೀರನ್ನು ತರಬೇಕು. ಕೊರೊನಾ ಸೋಂಕಿನ ಭಯದಿಂದ ನೀರಿನ ವಿತರಣೆ ಇರುವುದಿಲ್ಲ

* ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ ತರಬಾರದು. ಕಡ್ಡಾಯವಾಗಿ ಸ್ಕೂಲ್‌ಬ್ಯಾಗ್‌ಗಳಲ್ಲಿಯೇ ಅಗತ್ಯ ಸಾಮಗ್ರಿಗಳನ್ನು ತರಬೇಕು

* ನಿಗದಿತ ಸಮಯದಲ್ಲಿ ಪರೀಕ್ಷಾ ಕೇಂದ್ರ ತಲುಪಬೇಕು. ಒಂದೊಮ್ಮೆ ತಡವಾದಲ್ಲಿ, ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಆದರೆ, ಹೆಚ್ಚುವರಿ ಸಮಯ ನೀಡುವುದಿಲ್ಲ

* ಒಟ್ಟು ಪರೀಕ್ಷಾ ಕೇಂದ್ರಗಳು 35

* ಈ ಹಿಂದೆ ನೋಂದಾಯಿಸಿದ್ದ ವಿದ್ಯಾರ್ಥಿಗಳು 10,324

* ವಲಸೆ ಹೋಗಿರುವ ಮಕ್ಕಳ ಸಂಖ್ಯೆ 307

* ವಲಸೆ ಬಂದ ಮಕ್ಕಳ ಸಂಖ್ಯೆ 367

ಪ್ರತಿ ವಿದ್ಯಾರ್ಥಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಕೊರೊನಾ ಸೋಂಕಿನ ಬಗ್ಗೆ ವಿದ್ಯಾರ್ಥಿ ಭಯವಿಲ್ಲದೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಾತಾವರಣ ನಿರ್ಮಿಸಲಾಗುತ್ತದೆ

– ದಿವಾಕರ ಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.