SSLC Results | ಉತ್ತರ ಕನ್ನಡ: ರ‍್ಯಾಂಕ್ ಏರಿದರೂ ಇಳಿದ ಫಲಿತಾಂಶ
ಕಾರವಾರ: ಕಳೆದ ಎರಡು ವರ್ಷಗಳಿಂದ ಫಲಿತಾಂಶ ಪಟ್ಟಿಯಲ್ಲಿ ನಿರೀಕ್ಷೆಗಿಂತಲೂ ಸ್ಥಾನ ಕುಸಿತ ಕಾಣುತ್ತಿದ್ದ ಉತ್ತರ ಕನ್ನಡ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಗಳು ಈ ಬಾರಿ ಮುಂಬಡ್ತಿ ಪಡೆದಿವೆ.
ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯು 3ನೇ ಸ್ಥಾನವನ್ನು, ಶಿರಸಿ ಶೈಕ್ಷಣಿಕ ಜಿಲ್ಲೆ 7ನೇ ಸ್ಥಾನವನ್ನು ಪಡೆದಿವೆ. ಕಳೆದ ಬಾರಿ ಎರಡೂ ಜಿಲ್ಲೆಗಳು ಕ್ರಮವಾಗಿ 5 ಮತ್ತು 8ನೇ ಸ್ಥಾನ ಪಡೆದಿದ್ದವು. ಸ್ಥಾನ ಏರಿಕೆಯಾಗಿದ್ದರೂ ಫಲಿತಾಂಶ ಪ್ರಮಾಣ ಕಳೆದ ವರ್ಷಕ್ಕಿಂತ ಕುಸಿತ ಕಂಡಿದೆ.
ಕಳೆದ ವರ್ಷ ಉತ್ತರ ಕನ್ನಡ ಶೇ 86.54 ಮತ್ತು ಶಿರಸಿ ಶೇ 84.19ರಷ್ಟು ಫಲಿತಾಂಶ ದಾಖಲಿಸಿದ್ದವು. ಫಲಿತಾಂಶವು ಈ ಬಾರಿ ಕ್ರಮವಾಗಿ ಶೇ 83.21 ಮತ್ತು ಶೇ 80.47ಕ್ಕೆ ಇಳಿಕೆಯಾಗಿದೆ. ಪರೀಕ್ಷೆಗೆ ಕುಳಿತಿದ್ದ 18,258 ವಿದ್ಯಾರ್ಥಿಗಳ ಪೈಕಿ 3,323 ಮಂದಿ ಅನುತ್ತೀರ್ಣಗೊಂಡಿದ್ದಾರೆ.
‘ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪಾಠಗಳ ಪುನರ್‌ಮನನ, ವಿಶೇಷ ತರಗತಿಗಳನ್ನು ಆಯೋಜಿಸುವ ಮೂಲಕ ಅನುತ್ತೀರ್ಣಗೊಳ್ಳುವ ಆತಂಕದಲ್ಲಿದ್ದವರನ್ನು ಒತ್ತಡದಿಂದ ಹೊರತರಲಾಯಿತು. ಇದರಿಂದ ಫಲಿತಾಂಶ ಸುಧಾರಣೆಗೆ ನೆರವಾಯಿತು. ಒಟ್ಟಾರೆ ಫಲಿತಾಂಶ ಕುಸಿತವಾಗಿದ್ದರೂ ಸ್ಥಾನದಲ್ಲಿ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪರೀಕ್ಷೆ ಮತ್ತು ಉತ್ತಮ ಪತ್ರಿಕೆಗಳ ಮೌಲ್ಯಮಾಪನ ಇನ್ನಷ್ಟು ಕಟ್ಟುನಿಟ್ಟಾಗಿ ನಡೆದಿದೆ. ಕಳೆದ ವರ್ಷ ಗ್ರೇಸ್ ಅಂಕ ನೀಡಿದ್ದರಿಂದ ಫಲಿತಾಂಶ ಹೆಚ್ಚಳವಾಗಿತ್ತು’ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಫಲಿತಾಂಶ ವಿಶ್ಲೇಷಿಸಿದರು.
‘ಕಲಿಕೆಯಲ್ಲಿ ಮುಂದಿರುವ ಮತ್ತು ತೀರಾ ಹಿಂದುಳಿದ ವಿದ್ಯಾರ್ಥಿಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಅವರಿಗೆ ವಿಶೇಷ ತರಗತಿ ನಡೆಸಿದ್ದು ಅನುಕೂಲವಾಗಿದೆ. ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸುತ್ತಿದ್ದ ವಿದ್ಯಾರ್ಥಿಗಳಿಗೆ ಪೂರ್ಣ ಅಂಕ ಗಳಿಕೆಗೆ, ತೀರಾ ಕಡಿಮೆ ಅಂಕ ಗಳಿಸುತ್ತಿದ್ದ ವಿದ್ಯಾರ್ಥಿಗಳು ಸರಾಸರಿ 40 ರಿಂದ 50 ಅಂಕ ಸಾಧನೆಗೆ ‘ಪ್ರೇರಣಾ ಶಿಬಿರ’ದ ಮೂಲಕ ಪ್ರತ್ಯೇಕ ತರಬೇತಿ ನೀಡಲಾಗಿತ್ತು. ಇದರಿಂದ ಫಲಿತಾಂಶ ಸುಧಾರಿಸಿತು’ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಪಿ.ಬಸವರಾಜ್ ಹೇಳಿದರು.
‘ಪರೀಕ್ಷೆ ಒತ್ತಡದಿಂದ ವಿದ್ಯಾರ್ಥಿಗಳನ್ನು ಹೊರತರುವ ಜೊತೆಗೆ ಅವರಲ್ಲಿ ಸ್ಥೈರ್ಯ ತುಂಬಲು ಪರೀಕ್ಷೆಗೆ ಕೆಲವು ದಿನಗಳ ಮುನ್ನ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ಹಿರಿಯ ಅಧಿಕಾರಿಗಳು ಶಾಲೆಗಳನ್ನು ದತ್ತು ತೆಗೆದುಕೊಂಡು ಅವರೇ ಖುದ್ದು ಪರೀಕ್ಷೆ ಎದುರಿಸುವ ಕುರಿತು ಮಾರ್ಗದರ್ಶನ ತರಗತಿ ನಡೆಸಿದ್ದು ಫಲ ನೀಡಿದೆ’ ಎಂದು ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಲತಾ ನಾಯಕ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.