ADVERTISEMENT

ಶಿರಸಿ: ಮೈ ನವಿರೇಳಿಸಿದ ಹೋರಿ ಹಬ್ಬ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2025, 13:41 IST
Last Updated 16 ಫೆಬ್ರುವರಿ 2025, 13:41 IST
ಶಿರಸಿಯ ಮಳಲಗಾಂವ ಗ್ರಾಮದಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ ಹಬ್ಬದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು
ಶಿರಸಿಯ ಮಳಲಗಾಂವ ಗ್ರಾಮದಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ ಹಬ್ಬದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು   

ಶಿರಸಿ: ಜಾನಪದ ಸೊಗಡಿನ ಹಿನ್ನೆಲೆ ಹೊಂದಿರುವ ರಾಜ್ಯಮಟ್ಟದ ಹೋರಿ ಬೆದರಿಸುವ ಹಬ್ಬ ತಾಲ್ಲೂಕಿನ ಮಳಲಗಾಂವದಲ್ಲಿ ಭಾನುವಾರ ನಡೆಯಿತು.

ಕೊರಳಲ್ಲಿ ಮಣ ಭಾರದ ಕೊಬ್ಬರಿ ಮಾಲೆ ಧರಿಸಿದ ಹೋರಿಗಳು ಅಖಾಡದಲ್ಲಿ ಮಿಂಚಿ ಮರೆಯಾಗುತ್ತಿದ್ದ ದೃಶ್ಯ ಅಲ್ಲಿ ಸೇರಿದ್ದ ಸಾವಿರಾರು ಪ್ರೇಕ್ಷಕರ ಮನಸೂರೆಗೊಳಿಸಿತು. 300ಕ್ಕಿಂತಲೂ ಹೆಚ್ಚಿನ ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿ ಅಡಗಿದ್ದ ಸಾಹಸವನ್ನು ಹಾಗೂ ಕೌಶಲವನ್ನು ಮೆರೆದವು. ಜಿಲ್ಲೆ ಸೇರಿದಂತೆ ಶಿವಮೊಗ್ಗ, ದಾವಣಗೆರೆ, ಧಾರವಾಡ, ಬಳ್ಳಾರಿ, ಬೆಳಗಾವಿ, ಗದಗ ಮುಂತಾದ ಜಿಲ್ಲೆಗಳಿಂದ ರೈತರು ತಮ್ಮ ಹೋರಿಗಳೊಂದಿಗೆ ಬಂದು ಹಬ್ಬಕ್ಕೆ ಮೆರುಗು ತಂದರು. 

ಮಾಲೀಕರು ತಮ್ಮ ಹೋರಿಗಳಿಗೆ ಒಣ ಕೊಬ್ಬರಿ ಮಾಲೆಗಳನ್ನು ಹಾಕಿ, ಏಳೆಂಟು ಜನರು ಹಗ್ಗದ ಸಹಾಯದಿಂದ ಹೋರಿ ಹಿಡಿದು ತಂದು ಅಖಾಡಕ್ಕೆ ಬಿಡುತ್ತಿದ್ದರು. ಕೊಬ್ಬರಿ ಮಾಲೆ ಹರಿಯಲು ಬರುವ ಪೈಲ್ವಾನರ ಕೈಗೂ ಸಿಗದಂತೆ ಓಡಿ ದಡ ಸೇರುತ್ತಿದ್ದವು. ಕೆಲವು ಹೋರಿಗಳು ಆವೇಶಭರಿತವಾಗಿ ಓಡಿದರೆ, ಇನ್ನು ಕೆಲವು ಹೂಂಕರಿಸುತ್ತಾ, ಮೆಲ್ಲನೆ ಹೆಜ್ಜೆ ಹಾಕುತ್ತಾ ಆನೆ ನಡಿಗೆಯಂತೆ ನಡೆದು ನೋಡುಗರ ಕಣ್ಮನ ಸೆಳೆದವು. ಹೀಗೆ ಓಡಿ ಹೋಗುವ ಹೋರಿಗಳನ್ನು ತಡೆದು ಕೊಬ್ಬರಿ ಸರವನ್ನು ಹಿಡಿಯಲು ಪೈಲ್ವಾನರು ಪ್ರಾಣದ ಹಂಗು ತೊರೆದು ಶ್ರಮಿಸಿದರು. ನೆರೆದ ಪ್ರೇಕ್ಷಕರು ಓಡಿ ಹೋಗುವ ಹೋರಿಗಳ ದೃಶ್ಯಗಳನ್ನು ಕಂಡು ಕೇಕೆ, ಚಪ್ಪಾಳೆ, ಶಿಳ್ಳೆ ಹೊಡೆದು ಹಬ್ಬಕ್ಕೆ ಮೆರುಗು ತಂದರು. ನಂತರ ವಿಜೇತ ಹೋರಿಗಳಿಗೆ ಬಹುಮಾನ ನೀಡಲಾಯಿತು.

ADVERTISEMENT

ಶಾಸಕ ಭೀಮಣ್ಣ ನಾಯ್ಕ ರೈತ ಜಾತ್ರೆ ಹಾಗೂ ಹೋರಿ ಬೆದರಿಸುವ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿ, ‘ಈ ನೆಲದ ಸೊಗಡನ್ನು ಉಳಿಸಿಕೊಳ್ಳಲು ಇಂಥ ಹಬ್ಬಗಳ ಆಯೋಜನೆ ಅತ್ಯಗತ್ಯವಾಗಿದೆ. ಹೋರಿ ಬೆದರಿಸುವ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಪಾಲ್ಗೊಳ್ಳಬೇಕು’ ಎಂದರು. 

ಸಂಘಟಕ ಸುನೀಲ ನಾಯ್ಕ, ಪ್ರಮುಖ ಅಶ್ವಿನ್ ಭೀಮಣ್ಣ, ಪ್ರದೀಪ ಶೆಟ್ಟಿ, ಮಧುಕರ ಬಿಲ್ಲವ, ರಾಘವೇಂದ್ರ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.