ಕಾರವಾರ: ಜಿಲ್ಲೆಯಲ್ಲಿ ಬೀದಿನಾಯಿಗಳ ಕಡಿತ ಪ್ರಕರಣ ಹೆಚ್ಚುತ್ತಿರುವುದು ಒಂದೆಡೆಯಾದರೆ, ಬೀದಿನಾಯಿಗಳಿಗೆ ರೇಬಿಸ್ ರೋಗನಿರೋಧಕ ಲಸಿಕೆ ಪೂರೈಸುವ ಬದಲು ಸಾಕುನಾಯಿಗಳಿಗೆ ಮಾತ್ರ ಉಚಿತ ಲಸಿಕೆ ನೀಡುವ ಪಶುಸಂಗೋಪನೆ ಇಲಾಖೆಯ ಕ್ರಮಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದೆ.
ಈ ಹಿಂದೆ ನಡೆದ ಜಾನುವಾರು ಗಣತಿ ವರದಿ ಪ್ರಕಾರ ಜಿಲ್ಲೆಯಲ್ಲಿ 75,151 ಸಾಕುನಾಯಿಗಳು, 24,511 ಬೀದಿನಾಯಿಗಳು ಇವೆ ಎಂದು ಇಲಾಖೆ ಅಂದಾಜಿಸಿದೆ. ಸೆ.28 ರಿಂದ ಅ.28ರ ವರೆಗೆ ರೇಬಿಸ್ ರೋಗನಿರೋಧಕ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ.
‘ಸಾಕುನಾಯಿಗಳಿಗೆ ಲಸಿಕೆ ನೀಡಲು ಆದ್ಯತೆ ನೀಡುವಂತೆ ಮಾರ್ಗಸೂಚಿ ಇದೆ. 75 ಸಾವಿರಕ್ಕೂ ಹೆಚ್ಚು ನಾಯಿಗಳಿದ್ದರೂ ಈವರೆಗೆ 40 ಸಾವಿರ ಲಸಿಕೆಯಷ್ಟೇ ಪೂರೈಕೆ ಆಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.
‘ಸಾಕುನಾಯಿಗಳಿಗೆ ಹಣ ಪಾವತಿಸಿ ಲಸಿಕೆ ಕೊಡಿಸಲು ಅವುಗಳ ಮಾಲೀಕರು ಸಮರ್ಥರಿರುತ್ತಾರೆ. ಖಾಸಗಿ ಪಶು ಆಸ್ಪತ್ರೆಗಳಲ್ಲಿಯೂ ಅವುಗಳಿಗೆ ಲಸಿಕೆ ಕೊಡಿಸಲು ಅವಕಾಶವಿದೆ. ಆದರೆ, ಬೀದಿನಾಯಿಗಳಿಗೆ ರೇಬಿಸ್ ರೋಗನಿರೋಧಕ ಲಸಿಕೆ ನೀಡುವ ಅಗತ್ಯವಿದೆ. ನೂರಾರು ಬೀದಿನಾಯಿಗಳಿಗೆ ಚಿಕಿತ್ಸೆ, ಆರೈಕೆ ಇಲ್ಲದೆ ರೇಬಿಸ್ ಕಾಯಿಲೆಯಿಂದ ಜೀವ ಕಳೆದುಕೊಳ್ಳುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ನಗರದ ಲಿಂಗನಾಯ್ಕವಾಡಾ ನಿವಾಸಿ ನಿರ್ಮಲಾ ಆರೋಪಿಸಿದರು.
ಜಿಲ್ಲೆಯಲ್ಲಿ ಪ್ರತಿ ವರ್ಷ ಸರಾಸರಿ 12 ಸಾವಿರ ಬೀದಿನಾಯಿ ಕಡಿತ ಪ್ರಕರಣಗಳು ವರದಿಯಾಗುತ್ತಿವೆ. ನಗರ ಪ್ರದೇಶದಲ್ಲೇ ಈ ಸಮಸ್ಯೆ ಗಂಭೀರವಾಗಿದೆ ಎಂಬುದಾಗಿ ಆರೋಗ್ಯ ಇಲಾಖೆ ವರದಿ ಹೇಳುತ್ತಿದೆ.
‘ರೇಬಿಸ್ ರೋಗನಿರೋಧಕ ಲಸಿಕೆ ಅಭಿಯಾನದಡಿ ಕಳೆದ ಎರಡು ವರ್ಷಗಳಿಂದ ಉಚಿತವಾಗಿ ಸಾಕುನಾಯಿಗಳಿಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭಗೊಂಡಿದೆ. ಗ್ರಾಮ ಮಟ್ಟದಲ್ಲಿ ಅಭಿಯಾನ ನಡೆದಿದ್ದು, ಪೂರೈಕೆಯಾದ ಲಸಿಕೆಯಲ್ಲಿ ಶೇ 80ರಷ್ಟು ವಿತರಣೆ ಪ್ರಕ್ರಿಯೆ ಮುಗಿದಿದೆ’ ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಮೋಹನ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರತಿ ವರ್ಷ 10–12 ಸಾವಿರ ಬೀದಿನಾಯಿ ಕಡಿತ ಪ್ರಕರಣ ಜಿಲ್ಲೆಯಲ್ಲಿ 24 ಸಾವಿರಕ್ಕೂ ಹೆಚ್ಚು ಬೀದಿನಾಯಿಗಳಿರುವ ಅಂದಾಜು ಗ್ರಾಮಮಟ್ಟದಲ್ಲಿ ಲಸಿಕೆ ಅಭಿಯಾನ
ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಸಮಸ್ಯೆಯಿದ್ದು ಬೀದಿನಾಯಿ ಸೆರೆಹಿಡಿಯುವ ನಿಷ್ಣಾತರಿಲ್ಲ. ಬೀದಿನಾಯಿ ಸೆರೆಹಿಡಿದು ಕೊಟ್ಟರೆ ಅವುಗಳಿಗೂ ಲಸಿಕೆ ನೀಡಬಹುದುಡಾ.ಮೋಹನ ಕುಮಾರ್ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ
‘ಮಿಷನ್ ರೇಬಿಸ್’ ಅಂಕೋಲಾಕ್ಕೆ ವಿಸ್ತರಣೆ ರೇಬಿಸ್ ಮುಕ್ತ ರಾಜ್ಯ ಗೋವಾ ತನ್ನ ಗಡಿಭಾಗದ ತಾಲ್ಲೂಕುಗಳಲ್ಲಿ ರೇಬಿಸ್ ರೋಗನಿರೋಧಕ ಲಸಿಕೆಯನ್ನು ‘ಮಿಷನ್ ರೇಬಿಸ್’ ಎಂಬ ಸರ್ಕಾರೇತರ ಸಂಸ್ಥೆಯ ಮೂಲಕ ಉಚಿತವಾಗಿ ವಿತರಿಸುತ್ತಿದೆ. ಸಂಸ್ಥೆಯ ಸಿಬ್ಬಂದಿ ಪ್ರತಿ ವರ್ಷ ಕಾರವಾರ ಜೊಯಿಡಾ ತಾಲ್ಲೂಕಿನಲ್ಲಿ ಸಾವಿರಾರು ಬೀದಿನಾಯಿಗಳಿಗೆ ಲಸಿಕೆ ನೀಡುತ್ತಿದ್ದಾರೆ. ‘ಕಾರವಾರದಂತೆ ಅಂಕೋಲಾದಲ್ಲಿಯೂ ಬೀದಿನಾಯಿಗಳಿಗೆ ಉಚಿತ ಲಸಿಕೆ ಹಾಕಲು ಮಿಷನ್ ರೇಬಿಸ್ ಸಂಸ್ಥೆ ಒಪ್ಪಿದೆ. ಸದ್ಯದಲ್ಲಿ ಅಲ್ಲಿಯೂ ಕಾರ್ಯಾಚರಣೆ ನಡೆಸಲಿದ್ದಾರೆ’ ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಮೋಹನ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.