ADVERTISEMENT

SSLC Results: ಭೂ ಕುಸಿತದಿಂದ ಕಂಗೆಡದ ದಿಟ್ಟೆ- ರಾಜ್ಯಕ್ಕೇ 6ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 19 ಮೇ 2022, 16:24 IST
Last Updated 19 ಮೇ 2022, 16:24 IST
ವಾಣಿ ಗಜಾನನ ಭಟ್ಟ
ವಾಣಿ ಗಜಾನನ ಭಟ್ಟ   

ಕಾರವಾರ: ಕುಗ್ರಾಮದಲ್ಲಿ ಭೂ ಕುಸಿತದಿಂದಾಗಿ ಶಾಲಾ ತರಗತಿಗಳು ತಿಂಗಳುಗಟ್ಟಲೆ ನಡೆಯಲಿಲ್ಲ. ಆದರೆ, ಇದರಿಂದ ಬಾಲಕಿ ಎದೆಗುಂದಲಿಲ್ಲ. ಆನ್‌ಲೈನ್‌ ತರಗತಿಗೆ ತಪ್ಪದೇ ಹಾಜರಾದಳು. ಗಮನವಿಟ್ಟು ಅಧ್ಯಯನ ಮಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ಮಾಧ್ಯಮದಲ್ಲಿ ಶೇ 99.2ರಷ್ಟು ಅಂಕಗಳೊಂದಿಗೆ ರಾಜ್ಯಕ್ಕೇ ಆರನೇ ಸ್ಥಾನ ಪಡೆದುಕೊಂಡಿದ್ದಾಳೆ.

ಯಲ್ಲಾಪುರ ತಾಲ್ಲೂಕಿನ ಕಳಚೆಯ ವಾಣಿ ಗಜಾನನ ಭಟ್ಟ, ಈ ಸಾಧನೆಯ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನ ಸೆಳೆದಿದ್ದಾಳೆ. ಕಳಚೆಯ ಸರ್ಕಾರಿ ಪ್ರೌಢಶಾಲೆಯ ಈ ವಿದ್ಯಾರ್ಥಿನಿ, ಕನ್ನಡ ಭಾಷೆ ಪರೀಕ್ಷೆಯಲ್ಲಿ 125, ಹಿಂದಿಯಲ್ಲಿ 100, ವಿಜ್ಞಾನದಲ್ಲಿ 100, ಸಮಾಜ ವಿಜ್ಞಾನದಲ್ಲಿ 100, ಇಂಗ್ಲಿಷ್‌ನಲ್ಲಿ 99 ಹಾಗೂ ಗಣಿತದಲ್ಲಿ 96, ಒಟ್ಟು 620 ಅಂಕಗಳನ್ನು ಪಡೆದುಕೊಂಡಿದ್ದಾಳೆ.

ಕಳೆದ ವರ್ಷ ಜುಲೈ 22, 23ರಂದು ಕಳಚೆ ಗ್ರಾಮದಲ್ಲಿ ಉಂಟಾಗಿದ್ದ ಭಾರಿ ಭೂಕುಸಿತದಿಂದ ಮತ್ತು ಅತಿವೃಷ್ಟಿ
ಯಿಂದ ಇಲ್ಲಿನ ಪ್ರೌಢಶಾಲೆಗೆ ಸಂಪರ್ಕ ತಪ್ಪಿ ಹೋಗಿತ್ತು. ಇದರಿಂದ ಕೆಲವು ತಿಂಗಳು ತರಗತಿಗಳನ್ನು ಹಮ್ಮಿಕೊ
ಳ್ಳಲು ಸಾಧ್ಯವಾಗಿರಲಿಲ್ಲ. ಕೋವಿಡ್ ಕಾರಣದಿಂದಲೂ ಆನ್‌ಲೈನ್ ತರಗತಿಗಳೇ ಆಸರೆಯಾಗಿದ್ದವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಆಗ ಪ್ರಾಕೃತಿಕ ವಿಕೋಪದಿಂದ ತನ್ನ ಕಲಿಕೆಗೆ ತೊಂದರೆಯಾಗಿದ್ದನ್ನು ಅವರೊಂದಿಗೆ ವಿವರಿಸುತ್ತ ಬೇಸರದಿಂದ ಕಣ್ಣೀರು ಹಾಕಿದ್ದಳು. ಬೊಮ್ಮಾಯಿ ಅವರು ಸಾಂತ್ವನ ಹೇಳಿ ಬೆನ್ನುತಟ್ಟಿ ಧೈರ್ಯ ತುಂಬಿದ್ದರು.

ADVERTISEMENT

‘ಆನ್‌ಲೈನ್ ತರಗತಿಯ ಮೂಲಕ ಕಲಿಕೆಯನ್ನು ಸವಾಲಾಗಿ ಸ್ವೀಕರಿಸಿದೆ. ಮನೆಯಲ್ಲಿ ಪರಿಶ್ರಮದಿಂದ ಅಧ್ಯಯನ ಮಾಡಿದೆ. ಹಾಗಾಗಿ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು’ ಎಂದು ವಾಣಿ ಹೇಳುತ್ತಾಳೆ.

ಆಕೆಯನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ವಜ್ರಳ್ಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ ಗಾಂವ್ಕಾರ, ಉಪಾಧ್ಯಕ್ಷೆ ರತ್ನಾ ಬಾಂದೇಕರ್, ಸದಸ್ಯ ಗಜಾನನ ಭಟ್ಟ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷಿ ಆರ್.ಬಂಟ್, ಶಾಲೆಯ ಮುಖ್ಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.