ADVERTISEMENT

ಶಿರಸಿ | ಸುಬ್ರಹ್ಮಣ್ಯ ರಥೋತ್ಸವ ಸಂಪನ್ನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 4:58 IST
Last Updated 27 ನವೆಂಬರ್ 2025, 4:58 IST
ಶಿರಸಿಯಲ್ಲಿ ಚಂಪಾಷಷ್ಠಿ ಅಂಗವಾಗಿ ನಗರದ ನಿಲೇಕಣಿಯಲ್ಲಿರುವ ಸುಬ್ರಹ್ಮಣ್ಯ ದೇವರ ರಥೋತ್ಸವ  ನಡೆಯಿತು
ಶಿರಸಿಯಲ್ಲಿ ಚಂಪಾಷಷ್ಠಿ ಅಂಗವಾಗಿ ನಗರದ ನಿಲೇಕಣಿಯಲ್ಲಿರುವ ಸುಬ್ರಹ್ಮಣ್ಯ ದೇವರ ರಥೋತ್ಸವ  ನಡೆಯಿತು   

ಶಿರಸಿ: ಚಂಪಾಷಷ್ಠಿ ಅಂಗವಾಗಿ ನಗರದ ನಿಲೇಕಣಿಯಲ್ಲಿರುವ ಸುಬ್ರಹ್ಮಣ್ಯ ದೇವರ ರಥೋತ್ಸವವು ಬುಧವಾರ ಸಂಭ್ರಮದಿಂದ ನಡೆಯಿತು.

ಮುಂಜಾನೆ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಅಭಿಷೇಕ ಅಲಂಕಾರ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ನಂತರ ಮಧ್ಯಾಹ್ನದ ವೇಳೆಗೆ ಪಲ್ಲಕ್ಕಿ ಮೂಲಕ ದೇವರ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ತಂದು ಸಿಂಗಾರಗೊಂಡು ನಿಂತಿದ್ದ ಮಹಾರಥದಲ್ಲಿ ಸುಬ್ರಹ್ಮಣ್ಯ ದೇವರನ್ನು ಪ್ರತಿಷ್ಠಾಪಿಸಲಾಯಿತು. ಪಲ್ಲಕ್ಕಿಯಲ್ಲಿ ದೇವರ ಉತ್ಸವ ಮೂರ್ತಿ ಬರುತ್ತಿದ್ದಂತೆ ನೆರೆದಿದ್ದ ಭಕ್ತರು ಹರ್ಷೋದ್ಗಾರ ಮಾಡಿದರು. ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಬನವಾಸಿ, ಕುಮಟಾ ಸೇರಿ ಜಿಲ್ಲೆಯ ವಿವಿಧೆಡೆಯಿಂದ ಬಂದ ಭಕ್ತರು ರಥದಲ್ಲಿ ವಿರಾಜಮಾನವಾಗಿ ಕುಳಿತ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಪುನೀತರಾದರು. 

ಹಲವು ಭಕ್ತರು ತಾವು ಬೆಳೆದ ಅಡಿಕೆ, ಭತ್ತದ ತೆನೆ, ತೆಂಗಿನಕಾಯಿ ಸೇರಿ ವಿವಿಧ ಬೆಳೆಗಳನ್ನು ರಥಕ್ಕೆ ಕಟ್ಟುವ ಮೂಲಕ ದೇವರಿಗೆ ಸಮರ್ಪಿಸಿದರು. ನಿಲೇಕಣಿ ಸುಬ್ರಹ್ಮಣ್ಯ ದೇವಸ್ಥಾನದಿಂದ ಅಗಸೇಬಾಗಿಲುವರೆಗೂ ಅಂಗಡಿ ಮುಂಗಟ್ಟುಗಳು ಕಂಡುಬಂದವು.  ಮುಖ್ಯ ರಸ್ತೆಯಲ್ಲಿಯೇ ರಥೋತ್ಸವ ನಡೆಯುವ ಕಾರಣದಿಂದ ಅಲ್ಪ ಮಟ್ಟಿಗೆ ಸಂಚಾರ ದಟ್ಟಣೆ ಉಂಟಾಯಿತು. ಮಹಾರಥದಲ್ಲಿ ವಿರಾಜಮಾನವಾಗಿ ಕುಳಿತ ಸುಬ್ರಹ್ಮಣ್ಯ ದೇವರ ದರ್ಶನವನ್ನು ಸಾವಿರಾರು ಭಕ್ತರು ಪಡೆದು ಪುನೀತರಾದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.