ADVERTISEMENT

ರೈತರಿಗೆ ಅನ್ಯಾಯ: ಮಧ್ಯಪ್ರವೇಶಕ್ಕೆ ಒತ್ತಾಯ

ಹಳಿಯಾಳದಲ್ಲಿ ಸಕ್ಕರೆ ಕಾರ್ಖಾನೆಯಿಂದ ವಿವಿಧ ರೀತಿಯಲ್ಲಿ ವಂಚನೆ ಆರೋಪ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 15:59 IST
Last Updated 29 ಸೆಪ್ಟೆಂಬರ್ 2022, 15:59 IST
ಸಂದೀಪ‍ಕುಮಾರ ಬೊಬಾಟಿ
ಸಂದೀಪ‍ಕುಮಾರ ಬೊಬಾಟಿ   

ಕಾರವಾರ: ‘ಹಳಿಯಾಳದ ಸಕ್ಕರೆ ಕಾರ್ಖಾನೆಯವರು ರೈತರಿಗೆ ವಿವಿಧ ರೀತಿಯಲ್ಲಿ ಅನ್ಯಾಯ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ರೈತರು ಮತ್ತು ಕಾರ್ಖಾನೆಯವರ ಸಭೆ ನಡೆಸಿ ನ್ಯಾಯ ಕೊಡಿಸಬೇಕು’ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂದೀಪ‍ಕುಮಾರ ಬೊಬಾಟಿ, ‘ಕಾರ್ಖಾನೆ ಆಡಳಿತದವರು ಬೇರೆ ಜಿಲ್ಲೆಗಳಿಂದ ಖರೀದಿಸಿದ ಕಬ್ಬನ್ನು ಮೊದಲು ನುರಿಸುತ್ತಾರೆ. ಸ್ಥಳೀಯ ಬೆಳೆಯನ್ನು ಬೇಸಿಗೆ ಕಾಲದಲ್ಲಿ ಅಂದರೆ, ಫೆಬ್ರುವರಿ, ಮಾರ್ಚ್‌ನಲ್ಲಿ ಬಳಸುತ್ತಾರೆ. ಇದರಿಂದ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ. ಹಳಿಯಾಳ ತಾಲ್ಲೂಕಿನಲ್ಲಿ ಖರೀದಿಸಿದ ಕಬ್ಬನ್ನು ಆದ್ಯತೆ ಮೇರೆಗೆ ಜ.15ರ ಮೊದಲು ನುರಿಸಬೇಕು’ ಎಂದು ಆಗ್ರಹಿಸಿದರು.

‘ಕಾರ್ಖಾನೆಯು ಕಬ್ಬನ್ನು ಇಂದಿಗೂ ಕಡಿಮೆ ದರಕ್ಕೆ ಖರೀದಿಸುತ್ತಿದೆ. ಕಳೆದ ಬಾರಿ ಪ್ರತಿ ಟನ್‌ಗೆ ₹ 2,592 ನೀಡಿತ್ತು. ಈ ಬಾರಿ ಇನ್ನೂ ಕಡಿಮೆ ನೀಡುವುದಾಗಿ ಹೇಳಲಾಗುತ್ತಿದೆ. ಕಬ್ಬಿನ ರಿಕವರಿ ಪ್ರಮಾಣವನ್ನು (ಕಬ್ಬಿನಲ್ಲಿರುವ ಸಕ್ಕರೆ ಅಂಶ) ಕಡಿಮೆ ತೋರಿಸಿ, ತಾಂತ್ರಿಕವಾಗಿ ಮೋಸ ಮಾಡಲಾಗುತ್ತಿದೆ. ಗೊಬ್ಬರ, ಕೂಲಿ, ಸಾಗಾಣಿಕೆ ದರವು ವಿ‍ಪ‍ರೀತ ಏರಿಕೆಯಾಗಿದೆ. ಹಾಗಿರುವಾಗ 10 ವರ್ಷಗಳ ಹಿಂದಿನ ದರದಲ್ಲಿ ಹೇಗೆ ವಹಿವಾಟು ಮಾಡಲು ಸಾಧ್ಯವಾಗುತ್ತದೆ’ ಎಂದು ಪ್ರಶ್ನಿಸಿದರು.

ADVERTISEMENT

ಸಂಘದ ಹಳಿಯಾಳ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ ಕಾಜಗಾರ್ ಮಾತನಾಡಿ, ‘ಈ ವರ್ಷ ಅತಿವೃಷ್ಟಿಯಿಂದ ಕಬ್ಬು, ಭತ್ತ ಹಾಗೂ ಗೋವಿನಜೋಳದ ಬೆಳೆಗೆ ಹಾನಿಯಾಗಿದೆ. ಪರಿಹಾರ ನೀಡುವಂತೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಶಾಸಕ ಆರ್.ವಿ.ದೇಶಪಾಂಡೆ ಈ ಹಿಂದೆ ಭರವಸೆ ನೀಡಿದಂತೆ ಪರಿಹಾರ ಒದಗಿಸಬೇಕು. ಬಳಿಕವೇ ಅವರನ್ನು ನಮ್ಮೂರಿಗೆ ಬರಲು ಅವಕಾಶ ಕೊಡುತ್ತೇವೆ’ ಎಂದರು.

ಪ್ರಮುಖರಾದ ನಾಗೇಂದ್ರ ಜಿಯೋಜಿ, ‘ಮೊದಲು ಒಂದು ಟನ್ ಕಬ್ಬಿಗೆ 120 ಕೆ.ಜಿ. ಸಕ್ಕರೆ ಉತ್ಪಾದನೆಯಾಗುತ್ತಿತ್ತು. ಈಗ ಯೂನಿಟ್ ಸಂಖ್ಯೆ ಕಡಿಮೆ ತೋರಿಸುತ್ತಿದ್ದಾರೆ. ಹಳಿಯಾಳ ತಾಲ್ಲೂಕಿನಲ್ಲಿ 11 ಲಕ್ಷ ಟನ್ ಕಬ್ಬು ಬೆಳೆಯಲಾಗುತ್ತದೆ. ಪ್ರತಿ ಟನ್‌ಗೆ ₹ 500ರಿಂದ ₹ 600 ಕಡಿಮೆ ದರ ಸಿಗುತ್ತಿದೆ’ ಎಂದು ಆರೋಪಿಸಿದರು.

ಪಾವತಿಯಾಗದ ಬಾಕಿ:‘2016–17ರ ಹಂಗಾಮಿನಲ್ಲಿ ನುರಿದ ಪ್ರತಿ ಟನ್ ಕಬ್ಬಿಗೆ ₹ 305 ಹೆಚ್ಚುವರಿ ದರ ನೀಡುವುದಾಗಿ ಕಾರ್ಖಾನೆಯು ಭರವಸೆ ನೀಡಿತ್ತು. ಸುಮಾರು 7 ಲಕ್ಷ ಟನ್‌ಗಳ ₹ 21 ಕೋಟಿಯನ್ನು ಕಾರ್ಖಾನೆ ಉಳಿಸಿಕೊಂಡಿದೆ. ಅದನ್ನು ಬಡ್ಡಿ ಸಮೇತ 15 ದಿನಗಳ ಒಳಗಾಗಿ ರೈತರ ಖಾತೆಗಳಿಗೆ ಜಮೆ ಮಾಡಬೇಕು’ ಎಂದು ಸಂದೀಪಕುಮಾರ ಬೊಬಾಟಿ ಆಗ್ರಹಿಸಿದರು.

ಪ್ರಮುಖರಾದ ಅಶೋಕ ಮೇಟಿ, ಪುಂಡಲೀಕ ಪಾಕರಿ, ರಾಮದಾಸ ಬೆಳಗಾಂವಕರ್, ಮೋಹನ್ ಗುರವ ಇದ್ದರು.

***

ರೈತರಿಗೆ ಅನ್ಯಾಯವಾಗುತ್ತಿದ್ದರೂ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಗಮನ ಹರಿಸುತ್ತಿಲ್ಲ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕೂಡಲೇ ಸಭೆ ಹಮ್ಮಿಕೊಳ್ಳಬೇಕು.
–ಸಂದೀಪ‍ಕುಮಾರ ಬೊಬಾಟಿ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.