
ಹಳಿಯಾಳ: ಸ್ಥಳೀಯ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಬೇಡಿಕೆಯಂತೆ ಪ್ರತಿ ಟನ್‌ಗೆ ₹ 3,363 ದರವನ್ನು ನೀಡಬೇಕೆಂದು ಆಗ್ರಹಿಸಿ ಕಬ್ಬು ಬೆಳೆಗಾರರು ಗುರುವಾರ ಪ್ರತಿಭಟನೆ ಆರಂಭಿಸಿದ್ದಾರೆ
ಇಲ್ಲಿಯ ತಹಶೀಲ್ದಾರ್ ಕಾರ್ಯಾಲಯದ ಎದುರಿನ ಶಿವಾಜಿ ವೃತ್ತದಲ್ಲಿ ಕಬ್ಬು ಬೆಳೆಗಾರರು ಸೇರಿ ಪ್ರತಿಭಟನೆ ನಡೆಸಿದರು.
ಸರ್ಕಾರ ಎಫ್.ಆರ್.ಪಿ ದರವನ್ನು ₹ 4,000 ನಿಗದಿ ಮಾಡಿದೆ. ಆದರೆ ಸ್ಥಳೀಯ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಪ್ರತಿ ಟನ್‌ಗೆ ₹ 3,050 ದರವನ್ನು ನಿಗದಿ ಮಾಡಿ ಘೋಷಣೆ ಮಾಡಿದೆ. ಇವುಗಳಲ್ಲಿ ₹ 950ನ್ನು ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚವೆಂದು ಕಡಿತಗೊಳಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ₹ 893 ರನ್ನು ಕಾರ್ಖಾನೆಯವರು ಹೆಚ್ಚುವರಿಯಾಗಿ ತೆಗೆದುಕೊಂಡಿದ್ದಾರೆ. ಆ ಬಗ್ಗೆ ಸರ್ಕಾರ ಲೆಕ್ಕಪರಿಶೋಧನೆ (ಆಡಿಟ್) ಮಾಡಿದಾಗ ಗೊತ್ತಾಗಿದೆ. ಕಬ್ಬು ಬೆಳೆಗಾರರಿಗೆ ಕಳೆದ ಮೂರು ವರ್ಷಗಳಿಂದ ಪಾವತಿಸಬೇಕಾಗಿದ್ದ ₹ 256ನ್ನು ಪಾವತಿಸಬೇಕು. ಪ್ರಸಕ್ತ ಸಾಲಿನಲ್ಲಿ ಕಬ್ಬು ನುರಿಸುವ ಮುಂಚೆ ಬೆಳೆಗಾರರ ಬೇಡಿಕೆಯಂತೆ ದರವನ್ನು ₹ 3,363 ನೀಡಬೇಕು. ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರಿಸಲಾಗುವುದು’ ಎಂದು ಬೆಳೆಗಾರರು ತಿಳಿಸಿದ್ದಾರೆ.
ಮುಖಂಡರಾದ ನಾಗೇಂದ್ರ ಜೀವೋಜಿ, ಕುಮಾರ ಬೋಬಾಟಿ, ಶಂಕರ ಕಾಜಗಾರ, ಅಶೋಕ ಮೇಟಿ, ಪ್ರಕಾಶ ಫಾಕರೆ, ಸಾತೋರಿ ಗೋಡಿಮನಿ, ಮೋಹನ ಮೆಲಗಿ, ಪುಂಡ್ಲಿಕ ಗೋಡಿಮನಿ, ಸುರೇಶ ಶಿವನ್ನವರ, ರಾಮದಾಸ ಬೆಳಗಾಂವರ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.