
ಕಾರವಾರ: ‘ನಾಲ್ಕೂವರೆ ದಶಕಗಳಿಂದ ಸಕ್ರೀಯ ರಾಜಕಾರಣದಲ್ಲಿರುವ ಆರ್.ವಿ.ದೇಶಪಾಂಡೆ ಅಧಿಕಾರವನ್ನು ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ. ಹಳಿಯಾಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ದೇಶಪಾಂಡೆ ಭ್ರಷ್ಟಾಚಾರಕ್ಕೆ ಪುರಾವೆ ಸಿಗುತ್ತದೆ’ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಆರೋಪಿಸಿದರು.
‘ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಕ್ತ ಪುರಾವೆ ಇದ್ದರೆ ಬಿಡುಗಡೆ ಮಾಡಲಿ’ ಎಂಬ ಶಾಸಕ ಆರ್.ವಿ.ದೇಶಪಾಂಡೆ ಹೇಳಿಕೆಗೆ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೀಗೆ ತಿರುಗೇಟು ನೀಡಿದರು.
‘ಉತ್ತರ ಕನ್ನಡ ಜಿಲ್ಲೆ ಹಿಂದುಳಿಯಲು ಆರ್.ವಿ.ದೇಶಪಾಂಡೆ ಅವರ ನಿಷ್ಕಾಳಜಿತನ ಕಾರಣ. ಅವರಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸುವ ನೈತಿಕತೆ ಇಲ್ಲ. ಕಾಗೇರಿಗಿಂತಲೂ 10 ವರ್ಷ ಹೆಚ್ಚು ಆಡಳಿತದ ಅನುಭವ ಇರುವ ದೇಶಪಾಂಡೆ ಸುದೀರ್ಘ ಅವಧಿಗೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದವರು. ಉನ್ನತ ಶಿಕ್ಷಣ ಸಚಿವರಾಗಿದ್ದರೂ ಜಿಲ್ಲೆಗೆ ವಿಶ್ವವಿದ್ಯಾಲಯ ಮಂಜೂರಿ ಮಾಡಿಸಿಲ್ಲ. ಪ್ರವಾಸೋದ್ಯಮ ಸಚಿವರಾದಾಗಲೂ ಅಭಿವೃದ್ಧಿ ಮಾಡಲಿಲ್ಲ. ಕೈಗಾರಿಕೆ ಸಚಿವರಾಗಿದ್ದಾಗಲೇ ಬೃಹತ್ ಉದ್ಯಮಗಳನ್ನು ಸ್ಥಗಿತಗೊಳಿಸಿದ್ದರು. ಅಳ್ನಾವರ–ದಾಂಡೇಲಿ ರೈಲು ಸಂಪರ್ಕ ಸ್ಥಗಿತಕ್ಕೂ ಅವರೇ ಕಾರಣ’ ಎಂದರು.
‘ಶಿರಸಿಯಲ್ಲಿ ಸುಸಜ್ಜಿತ ಆಸ್ಪತ್ರೆ, ಅತಿ ಹೆಚ್ಚು ವಸತಿ ಯೋಜನೆ ಮನೆ ಮಂಜೂರು ಮಾಡಿಸಿದ್ದು ಕಾಗೇರಿ. ಬೆಳೆವಿಮೆ ಮಂಜೂರು ಮಾಡಿಸುವಲ್ಲಿ ಅವರ ಪಾತ್ರ ಮಹತ್ವದ್ದಿದೆ. ಶಿರಸಿ ಕ್ಷೇತ್ರಕ್ಕೂ ಹಳಿಯಾಳ ಕ್ಷೇತ್ರಕ್ಕೂ ತುಲನೆ ಮಾಡಿ ದೇಶಪಾಂಡೆ ಮಾತನಾಡಲಿ. ದೇಶಪಾಂಡೆ ಸುಳ್ಳಿನ ಇನ್ನೊಂದು ರೂಪ’ ಎಂದರು.
‘ಹಳೆ ದಾಂಡೇಲಿಗೆ ರೈಲು ಸಂಪರ್ಕ ಆಗಬೇಕಿದೆ. ಈ ಹಿಂದೆ ರೈಲ್ವೆ ಹಳಿಗೆ ಮೀಸಲಿಟ್ಟಿದ್ದ ಜಾಗದಲ್ಲಿ ಹಕ್ಕುಪತ್ರ ನೀಡುವ ನಿಯಮಬಾಹೀರ ಕೆಲಸ ದೇಶಪಾಂಡೆ ಮಾಡಿದ್ದಾರೆ. ದಾಂಡೇಲಿಯಲ್ಲಿ ತಾನು ಶಾಸಕನಾಗಿದ್ದಾಗ ಮಂಜೂರು ಮಾಡಿಸಿದ್ದ ಜಿ ಪ್ಲಸ್ 2 ಕಟ್ಟಡ ಇನ್ನೂ ಪೂರ್ಣಗೊಂಡಿಲ್ಲ. ಜನರು ಪ್ರತಿಭಟಿಸಲು ಮುಂದಾದರೆ ದೇಶಪಾಂಡೆ ಬೆದರಿಕೆ ಹಾಕುತ್ತಾರೆ’ ಎಂದರು.
ಬಿಜೆಪಿ ಜಿಲ್ಲಾ ಘಟಕದ ವಕ್ತಾರ ಜಗದೀಶ ಮೊಗಟಾ, ಸುನೀಲ ಸೋನಿ, ಕಿಶನ್ ಕಾಂಬ್ಳೆ, ಮಂಗೇಶ ದೇಶಪಾಂಡೆ, ನಾಗೇಶ ಕುರ್ಡೇಕರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.