ಕಾರವಾರ: ಜಲಶಕ್ತಿ ಮೂಲಕ ವಿದ್ಯುತ್ ಉತ್ಪಾದಿಸುತ್ತಿರುವ ಕದ್ರಾ ಜಲಾಶಯದಲ್ಲಿ ಆದಷ್ಟು ಶೀಘ್ರದಲ್ಲಿ ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಪ್ರಕ್ರಿಯೆಯೂ ಆರಂಭಗೊಳ್ಳುವ ಸಾಧ್ಯತೆ ಇದೆ.
ಕಾಳಿ ನದಿಗೆ ನಿರ್ಮಿಸಿದ ಕೊನೆಯ ಅಣೆಕಟ್ಟೆಯ ಹಿನ್ನೀರು ಪ್ರದೇಶದಲ್ಲಿ ಸೌರ ಫಲಕಗಳನ್ನು ಅಳವಡಿಸಿ, ಅವುಗಳ ಮೂಲಕ 100 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ರಾಜ್ಯ ಸರ್ಕಾರದ ಯೋಜನೆ ಕಾರ್ಯಗತಗೊಳ್ಳುವ ಕಾಲ ಸಮೀಪಿಸಿದೆ. ಯೋಜನೆ ಕಾರ್ಯಸಾಧ್ಯತೆಯ ಕುರಿತು ಮೂರು ತಿಂಗಳ ಹಿಂದೆ ಖಾಸಗಿ ಸಂಸ್ಥೆಯೊಂದು ಸಮೀಕ್ಷೆ ನಡೆಸಿದೆ.
‘ಜಲಾಶಯದ ಹಿನ್ನೀರಿನಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ನೀರು ಆವರಿಸಿಕೊಂಡಿದೆ. ಈ ಪ್ರದೇಶವನ್ನು ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಹಿಂದಿನಿಂದಲೂ ಚರ್ಚೆ ನಡೆಯುತ್ತಿತ್ತು. ತೇಲುವ ಸೋಲಾರ್ ಪಾರ್ಕ್ ನಿರ್ಮಿಸಿ ಅದರ ಮೂಲಕ ವಿದ್ಯುತ್ ಉತ್ಪಾದಿಸಬೇಕೆಂಬ ಪ್ರಸ್ತಾವ ಐದಾರು ವರ್ಷಗಳ ಹಿಂದೆಯೇ ಇತ್ತು. ಕಳೆದ ವರ್ಷ ಯೋಜನೆ ಕಾರ್ಯರೂಪಕ್ಕೆ ತರುವ ಬಗ್ಗೆ ಸ್ಥಳ ಸಮೀಕ್ಷೆ ನಡೆಸಿ, ವಿಸ್ತೃತ ಯೋಜನಾ ವರದಿ ಸಲ್ಲಿಸಲು ಟೆಂಡರ್ ಕರೆಯಲಾಗಿತ್ತು. ಪಹರಿ ಪವರ್ ಕಾರ್ಪೊರೇಷನ್ ಎಂಬ ಸಂಸ್ಥೆಯೊಂದು ಬಾಥಿಮೆಟ್ರಿಕ್ ಸಮೀಕ್ಷೆ ನಡೆಸಿದೆ’ ಎಂದು ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿ) ಅಧಿಕಾರಿಯೊಬ್ಬರು ತಿಳಿಸಿದರು.
‘ಕಾಳಿ ನದಿಗೆ ನಿರ್ಮಿಸಿದ ಐದು ಜಲಾಶಯಗಳ ಪೈಕಿ ಕದ್ರಾ ಹಿನ್ನೀರು ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಸೂಕ್ತ ಎಂಬ ಅಭಿಪ್ರಾಯವಿತ್ತು. ಈ ಕಾರಣಕ್ಕಾಗಿಯೇ ಇಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೆ ಪ್ರಯತ್ನ ನಡೆದಿದೆ. ಸಮುದ್ರ ಮಟ್ಟದಿಂದ ಕಡಿಮೆ ಎತ್ತರದಲ್ಲಿ ಈ ಪ್ರದೇಶ ಇರುವುದರಿಂದ ಸಹಜವಾಗಿ ಉಷ್ಣತೆಯೂ ಹೆಚ್ಚು. ಇದು ಸೌರ ವಿದ್ಯುತ್ ಉತ್ಪಾದನೆಗೆ ಸೂಕ್ತ ಎಂಬ ಕಾರಣವಿರಬಹುದು’ ಎಂದೂ ಹೇಳಿದರು.
ಕದ್ರಾದಲ್ಲಿ ಸದ್ಯ ತಲಾ 50 ಮೆಗಾ ವ್ಯಾಟ್ ಸಾಮರ್ಥ್ಯದ ಮೂರು ವಿದ್ಯುದಾಗಾರಗಳಿದ್ದು, ಅವು 150 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿವೆ.
ಕದ್ರಾ ಜಲಾಶಯದಲ್ಲಿ ಸೌರ ವಿದ್ಯುತ್ ಉತ್ಪಾದನೆ ಯೋಜನೆ ಆರಮಭಿಸುವ ಬಗ್ಗೆ ಕೆಲ ದಿನಗಳ ಹಿಂದೆ ಸಮೀಕ್ಷೆ ನಡೆದಿದ್ದು ಸಮೀಕ್ಷೆ ವರದಿ ಆಧರಿಸಿ ಸರ್ಕಾರದ ಹಂತದಲ್ಲಿ ನಿರ್ಣಯ ಆಗಲಿದೆ.– ಶ್ರೀಧರ ಕೋರಿ, ಕಾಳಿ ವಿದ್ಯುತ್ ಯೋಜನೆಯ ಮುಖ್ಯ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.