ಶಿರಸಿ: ಬೆಟ್ಟ ಭೂಮಿಯಲ್ಲಿ ಬಿದಿರು ಕೃಷಿ ಕೈಗೊಳ್ಳಲು ಬೆಟ್ಟ ಬಳಕೆದಾರರು ಮುಂದಾಗಬೇಕು ಎಂದು ಡಿಎಫ್ಒ ಜಿ.ಆರ್.ಅಜ್ಜಯ್ಯ ಹೇಳಿದರು.
ಇಲ್ಲಿನ ಬೆಟ್ಟ ಸುಸ್ಥಿರ ಅಭಿವೃದ್ಧಿ ಅಭಿಯಾನದ ನಿಯೋಗವು ಬುಧವಾರ ಅವರನ್ನು ಭೇಟಿ ಮಾಡಿ ಸಮಾಲೋಚನೆ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ‘ಬೆಟ್ಟ ಭೂಮಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲೇ ಬರುತ್ತದೆ. ಬೆಟ್ಟ ವನೀಕರಣಕ್ಕೆ ಪೂರ್ಣ ಬೆಂಬಲ ನೀಡಲಾಗುತ್ತದೆ. ಬೆಟ್ಟದ ಗಿಡಮರಗಳ ನಾಶ ಮಾಡಿದರೆ ಕಾನೂನು ಕ್ರಮ ಅನಿವಾರ್ಯ. ಬಳಕೆದಾರರು ಬೆಟ್ಟ ನಿಯಮ ಪಾಲಿಸಬೇಕು’ ಎಂದರು.
ನಿಯೋಗದ ನೇತೃತ್ವ ವಹಿಸಿದ್ದ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ‘ಬೆಟ್ಟ ಅಭಿವೃದ್ಧಿ ಅಭಿಯಾನವನ್ನು ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ನಡೆಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಬೆಟ್ಟ ಪ್ರಯೋಗಗಳ ಬಗ್ಗೆ ಕೊಪ್ಪ, ಶೃಂಗೇರಿ, ತೀರ್ಥಹಳ್ಳಿಗಳ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಟ್ಟ ಜಾಗೃತಿ ಅಭಿಯಾನ ಮುಂದುವರಿಸಲಿದ್ದೇವೆ. ನೆಲಮಾವು ಗ್ರಾಮದ ಬೆಟ್ಟ ಅರಣ್ಯ ರಕ್ಷಣೆ ಬಗ್ಗೆ ಅರಣ್ಯ ಇಲಾಖೆ ಪೂರ್ಣ ಬೆಂಬಲ ನೀಡಬೇಕು’ ಎಂದು ತಿಳಿಸಿದರು.
ಯಡಳ್ಳಿ ಸಹಕಾರ ಸಂಘದ ಅಧ್ಯಕ್ಷ ಜಿ.ಆರ್.ಹೆಗಡೆ ಬೆಳ್ಳೇಕೇರಿ ಮಾತನಾಡಿ, ಬೆಟ್ಟದಲ್ಲಿ ಗಿಡ ನೆಡಲು ತಯಾರಿ ನಡೆದಿದೆ. ಮಾದರಿ ಬಿದಿರು ಯೋಜನೆ ರೂಪಿಸಲು ರೈತರು ಗುಂಪು ರಚಿಸಿದ್ದೇವೆ. ಬೆಟ್ಟ ಅಭಿವೃದ್ಧಿಗೆ ಅರಣ್ಯ ಇಲಾಖೆ ಬೆಂಬಲ ಬೇಕು ಎಂದು ಮನವಿ ಮಾಡಿದರು. ಅಡಿಕೆ ಸಾಂಬಾರು ಬೆಳೆಗಾರ ಸಂಘದ ಅಧ್ಯಕ್ಷ ನಾರಾಯಣ ಗಡಿಕೈ ಅವರು ರೈತ ಸಹಕಾರ ಸಂಘಗಳ ಸಹಕಾರ ಪಡೆಯಲು ಸಿದ್ದಾಪುರ ತಾಲ್ಲೂಕಿನಲ್ಲಿ ಬೆಟ್ಟ ಜಾಗೃತಿ ಕಾರ್ಯಕ್ರಮ ನಡೆಸಲಿದ್ದೇವೆ ಎಂದು ತಿಳಿಸಿದರು.
ನಗರಕ್ಕೆ ತಾಗಿಕೊಂಡಿರುವ ಪುಟ್ಟನಮನೆ ಬೆಟ್ಟ ವ್ಯಾಪಕವಾಗಿ ಅತಿಕ್ರಮಣ ಆಗಿದೆ. ಅದರ ತೆರವಿಗೆ ಸಾಕಷ್ಟು ಮನವಿ ಮಾಡಿದ್ದರೂ ಈವರೆಗೆ ತೆರವು ಕಾರ್ಯ ಸಾಧ್ಯವಾಗಿಲ್ಲ.ಅನಂತ ಅಶೀಸರ, ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ
ಜಿಲ್ಲಾ ಸಾವಯವ ರೈತರ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ ಮಾತನಾಡಿ, ‘ಬೆಟ್ಟ ಜೀವ ವೈವಿಧ್ಯ ಹೆಚ್ಚಿಸಲು ಪ್ರಯತ್ನ, ಹಲಸು ಮುಂತಾದ ವನ ಮಾಡಿರುವ ಬೆಟ್ಟ ಅಭಿವೃದ್ಧಿ ಸ್ಥಳ ಭೇಟಿ ಮಾಡಬೇಕು’ ಎಂದು ಹೇಳಿದರು.
ನೆಲಮಾಂವು ಮಠದ ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ.ಹೆಗಡೆ ಹೆಗ್ನೂರು, ಪ್ರಮುಖರಾದ ಗೋಪಾಲಕೃಷ್ಣ ತಂಗಾರ್ಮನೆ, ಜಿ.ವಿ.ಹೆಗಡೆ, ಮಹೇಶ ಮುಕ್ರಮನೆ, ರತ್ನಾಕರ ಬಾಡಲಕೊಪ್ಪ ಇತರರಿದ್ದರು. ವೃಕ್ಷ ಆಂದೋಲನ ಸಂಚಾಲಕ ಗಣಪತಿ.ಕೆ.ಬಿಸಲಕೊಪ್ಪ ವಂದಿಸಿದರು.
‘ಬೆಟ್ಟ ನಾಶ ತಪ್ಪಿಸಿ’
ಹೇರೂರು ಗ್ರಾಮದ ಕಸ ರಾಶಿಗಳು ನೆಲಮಾಂವ್ ಬೆಟ್ಟ ನಾಶ ಮಾಡುತ್ತಿವೆ. ಅದನ್ನು ಅರಣ್ಯ ಇಲಾಖೆ ಮತ್ತು ಪಂಚಾಯಿತಿ ತಡೆಗಟ್ಟಬೇಕು ಎಂದು ನಿಯೋಗದ ಸದಸ್ಯರು ಒತ್ತಾಯಿಸಿದಾಗ ಪ್ರತಿಕ್ರಿಯಿಸಿದ ಜಾನ್ಮನೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಲಮಾಂವ್‍ನಲ್ಲಿ ಬಿದಿರು ಅಭಿವೃದ್ಧಿ ಕಾರ್ಯಕ್ರಮಕ್ಕೆ ಶೀಘ್ರದಲ್ಲಿ ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.