ADVERTISEMENT

ನಿತ್ಯವೂ 200 ಕಿ.ಮೀ ಪ್ರಯಾಣಿಸುವ ಶಿಕ್ಷಕ!

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2018, 13:58 IST
Last Updated 2 ನವೆಂಬರ್ 2018, 13:58 IST
ಶಿಕ್ಷಕ ಜಯಶೀಲ್‌ ಆಗೇರ್
ಶಿಕ್ಷಕ ಜಯಶೀಲ್‌ ಆಗೇರ್   

ಮುಂಡಗೋಡ: ಪ್ರತಿ ನಿತ್ಯ 200 ಕಿ.ಮೀ ಪ್ರಯಾಣಿಸಿ ಶಿಕ್ಷಕರೊಬ್ಬರು ಪಾಠ ಮಾಡುತ್ತಿದ್ದಾರೆ. ಕುಟುಂಬದಲ್ಲಿ ಒಬ್ಬನೇ ಮಗನಾಗಿರುವುದು ಹಾಗೂ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿರುವುದು ಅವರದೀರ್ಘ ಪ್ರಯಾಣಕ್ಕೆ ಕಾರಣವಾಗಿದೆ.

ಅಂಕೋಲಾದ ಜಯಶೀಲ್‌ ಆಗೇರ, ಮುಂಡಗೋಡ ತಾಲ್ಲೂಕಿನ ತುಂಬರಗಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ವರ್ಷಗಳಿಂದ ಸಹಶಿಕ್ಷಕರಾಗಿದ್ದಾರೆ. ಅಂಕೋಲಾದಿಂದ ಈ ಶಾಲೆಗೆ 100 ಕಿ.ಮೀ.ಗೂ ಅಧಿಕ ದೂರವಿದೆ. ಶಾಲೆಯಲ್ಲಿ ಕರ್ತವ್ಯ ಮುಗಿಸಿ ಮತ್ತೆ ಬಸ್‌ನಲ್ಲಿ 5–6 ಗಂಟೆಪ್ರಯಾಣಿಸಿ ಅಂಕೋಲಾಕ್ಕೆ ಹೋಗುತ್ತಾರೆ. ಅವರು ಇದಕ್ಕೂ ಮುಂಚೆ ಗುಂಜಾವತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

‘ತಾಯಿ ಹಾಗೂ ಪತ್ನಿ ಸಹ ಅಂಕೋಲಾ ತಾಲ್ಲೂಕಿನಲ್ಲಿ ಶಿಕ್ಷಕಿಯರಾಗಿದ್ದಾರೆ. ಕುಟುಂಬದಲ್ಲಿ ಒಬ್ಬನೇ ಮಗನಾಗಿರುವುದರಿಂದ ಎಷ್ಟೇ ದೂರವಾದರೂ ಪ್ರಯಾಣಿಸಿ ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ. ಕೆಲವೊಮ್ಮೆ ತಾಯಿಗೆ ಆರೋಗ್ಯ ಸಮಸ್ಯೆ ಕಾಣಿಸುತ್ತದೆ. ಅಂತಹ ಸಮಯದಲ್ಲಿ ನಾನು ಇರಲೇಬೇಕು. ಕುಟುಂಬ ನಿರ್ವಹಣೆ ಜೊತೆಗೆ ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗುತ್ತೇನೆ’ ಎನ್ನುತ್ತಾರೆ ಜಯಶೀಲ್‌ ಆಗೇರ.

ADVERTISEMENT

‘ಪ್ರತಿದಿನ ಬೆಳಿಗ್ಗೆ 4.30ಕ್ಕೆದಿನಚರಿ ಆರಂಭವಾಗುತ್ತದೆ. 6 ಗಂಟೆಗೂ ಮೊದಲೇಅಂಕೋಲಾ ಬಸ್‌ ನಿಲ್ದಾಣಕ್ಕೆ ಬಂದು ಯಲ್ಲಾಪುರ ತಲುಪುತ್ತೇನೆ. ಅಲ್ಲಿಂದ ಮುಂಡಗೋಡ ತಲುಪಿ ಮುಖ್ಯ ಶಿಕ್ಷಕರ ಬೈಕ್‌ನಲ್ಲಿ ಶಾಲೆಗೆ ಹೋಗುತ್ತೇನೆ. ರಾತ್ರಿ 9ಕ್ಕೆಮರಳಿ ಮನೆ ತಲುಪುತ್ತೇನೆ. ಈ ಹಿಂದೆ ಹಾನಗಲ್‌ ತಾಲ್ಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವಾಗ ಗೊಟಗೋಡಿಕೊಪ್ಪದಿಂದ ಮಳಗಿವರೆಗೆ ಬೈಕ್‌ನಲ್ಲಿ ಬಂದು ಅಲ್ಲಿಯೇ ಬೈಕ್‌ ಇಡುತ್ತಿದ್ದೆ. ನಂತರ ಬಸ್‌ನ ಮೂಲಕ ಶಿರಸಿಗೆ ಬಂದು ಅಂಕೋಲಾ ತಲುಪುತ್ತಿದ್ದೆ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಮಸ್ಯೆ ಬಗೆಹರಿಯುವ ವಿಶ್ವಾಸ ಹೊಂದಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.