ADVERTISEMENT

ಹರಾಜು ಭಾಗ್ಯ: ಕೊಳೆ ಅಡಿಕೆಗೂ ಬಂಪರ್

ವ್ಯಾಪಾರ ಆರಂಭಗೊಂಡ ತಿಂಗಳೊಳಗೆ ಮೂರು ಸಾವಿರ ಕ್ವಿಂಟಲ್ ಆವಕ

ಗಣಪತಿ ಹೆಗಡೆ
Published 22 ಅಕ್ಟೋಬರ್ 2021, 4:46 IST
Last Updated 22 ಅಕ್ಟೋಬರ್ 2021, 4:46 IST
ಶಿರಸಿಯ ಟಿಎಸ್ಎಸ್‍ ವ್ಯಾಪಾರಿ ಅಂಗಳದಲ್ಲಿ ಸಿಪ್ಪೆಕೊಳೆ ಅಡಿಕೆ ಮಾರಾಟಕ್ಕೆ ಇಟ್ಟಿರುವುದು
ಶಿರಸಿಯ ಟಿಎಸ್ಎಸ್‍ ವ್ಯಾಪಾರಿ ಅಂಗಳದಲ್ಲಿ ಸಿಪ್ಪೆಕೊಳೆ ಅಡಿಕೆ ಮಾರಾಟಕ್ಕೆ ಇಟ್ಟಿರುವುದು   

ಶಿರಸಿ: ಮಳೆಗಾಲದ ಅವಧಿಯಲ್ಲಿ ತೋಟದಲ್ಲಿ ಉದುರಿ ಬೀಳುವ ಕೊಳೆ ಅಡಿಕೆಗೆ ಇದೇ ಮೊದಲ ಬಾರಿ ಹರಾಜು ಮೂಲಕ ವಹಿವಾಟು ನಡೆಸುವ ಪ್ರಕ್ರಿಯೆ ನಡೆಯುತ್ತಿದೆ. ಸಹಕಾರ ಸಂಸ್ಥೆಗಳ ಈ ಪ್ರಯೋಗಕ್ಕೆ ರೈತರಿಂದ ಉತ್ತಮ ಸ್ಪಂದನೆಯೂ ಸಿಗುತ್ತಿದೆ.

ಸೆಪ್ಟೆಂಬರ್ ಕೊನೆಯ ವಾರದಿಂದ ಸಿಪ್ಪೆಕೊಳೆ ಅಡಿಕೆ, ಒಡೆದ ಅಡಿಕೆ, ಅರ್ಧಂಬರ್ಧ ಒಣಗಿದ ಅಡಿಕೆ, ಎಳೆ ಅಡಿಕೆಗಳನ್ನು ಖರೀದಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಇಲ್ಲಿನ ಟಿಎಸ್ಎಸ್, ಟಿಎಂಎಸ್, ಕದಂಬ ಮಾರ್ಕೆಟಿಂಗ್ ಸಂಸ್ಥೆ ಹಾಗೂ ಗ್ರಾಮೀಣ ಭಾಗದ ಹಲವು ಪ್ರಾಥಮಿಕ ಸಂಘಗಳು ಖರೀದಿ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಿವೆ. ರೈತರು ಅನಗತ್ಯ ಎಂದು ಬಿಸಾಡುತ್ತಿದ್ದ ಅಡಿಕೆಯನ್ನು ಈಗ ಚೀಲ ತುಂಬಿಸಿ ಮಾರುಕಟ್ಟೆಗೆ ತರುತ್ತಿದ್ದಾರೆ.

ಹರಾಜು ಪ್ರಕ್ರಿಯೆ ಆರಂಭಗೊಂಡ ತಿಂಗಳೊಳಗೆ ಸಹಕಾರ ಸಂಸ್ಥೆಗಳಲ್ಲಿ 3 ಸಾವಿರ ಕ್ವಿಂಟಲ್‍ಗೂ ಹೆಚ್ಚು ಅಡಿಕೆ ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದೆ. ಟಿಎಸ್ಎಸ್ ಸಂಸ್ಥೆಯಲ್ಲೇ 2300ಕ್ಕೂ ಹೆಚ್ಚು ಕ್ವಿಂಟಲ್ ಸಿಪ್ಪೆಕೊಳೆ ಅಡಿಕೆ ವಹಿವಾಟು ನಡೆದಿದೆ. ಕದಂಬ ಮಾರ್ಕೆಟಿಂಗ್ ಮತ್ತು ಟಿಎಂಎಸ್‍ನಲ್ಲಿ ಕ್ರಮವಾಗಿ 300 ಕ್ವಿಂ., 225 ಕ್ವಿಂ. ಆವಕವಾಗಿದೆ.

ADVERTISEMENT

ಕೊಳೆ ಅಡಿಕೆ ಪ್ರತಿ ಕ್ವಿಂಟಲ್‍ಗೆ ಗರಿಷ್ಠ 3 ಸಾವಿರ, ಹಸಿರು ಅಡಿಕೆಗೆ 5 ಸಾವಿರ, ಗೋಟಡಿಕೆ 7 ಸಾವಿರ ದರ ಕಾಣುತ್ತಿದೆ.

‘ಉದುರಿ ಬಿದ್ದ ಅಡಿಕೆಗಳನ್ನು ಹೆಕ್ಕಿ ತರುವ ಮತ್ತು ಸಂಸ್ಕರಿಸುವ ಕೆಲಸ ಶ್ರಮದಾಯಕ ಎಂಬ ಕಾರಣಕ್ಕೆ ಅವುಗಳನ್ನು ನಿರ್ಲಕ್ಷಿಸುವವರು ಹೆಚ್ಚಿದ್ದರು. ಈಗ ಅವುಗಳಿಗೂ ಹರಾಜು ವ್ಯವಸ್ಥೆ ಕಲ್ಪಿಸಿ ಆದಾಯ ಸಿಗುವಂತೆ ಮಾಡಿರುವದು ಸಹಕಾರ ಸಂಸ್ಥೆಗಳ ರೈತಪರ ಕಾಳಜಿ ತೋರಿಸಿದೆ’ ಎಂಬುದು ಹಲವು ರೈತರ ಅಬಿಪ್ರಾಯ.

‘ಮಳೆ ಪ್ರಮಾಣ ಹೆಚ್ಚಿರುವ ಕಾರಣ ಕೊಳೆರೋಗ ಬಾಧೆಯೂ ಹೆಚ್ಚು. ಈಚಿನ ವರ್ಷಗಳಲ್ಲಿ ಅಡಿಕೆ ಉದುರುವದೂ ಹೆಚ್ಚುತ್ತಿದೆ. ರೈತರು ಎದುರಿಸುತ್ತಿರುವ ನಷ್ಟ ತಪ್ಪಿಸಲು ಕೊಳೆ ಅಡಿಕೆಗೂ ಹರಾಜು ಮೂಲಕ ಖರೀದಿಗೆ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಯಿತು. ಮನೆ ಬಾಗಿಲಿನಲ್ಲಿ ಕಡಿಮೆ ದರಕ್ಕೆ ಮಾರುತ್ತಿದ್ದ ರೈತರು ಈಗ ಶಿಸ್ತುಬದ್ಧ ವ್ಯವಸ್ಥೆಯಲ್ಲಿ ಮಾರಲು ಅನುಕೂಲವಾಗಿದೆ’ ಎನ್ನುತ್ತಾರೆ ಟಿಎಸ್ಎಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ.

ಲಕ್ಷ್ಯ ವಹಿಸುತ್ತಿರುವ ರೈತರು:

‘ಮಳೆಗಾಲದಲ್ಲಿ ಉದುರುವ ಅಡಿಕೆಗೆ ವ್ಯಾಪಕ ಮಾರುಕಟ್ಟೆ ದೊರೆತಿರುವದು ರೈತರಿಗೆ ಅನುಕೂಲ. ಭವಿಷ್ಯದಲ್ಲಿ ಹೊಸ ಪ್ರಯೋಗಗಳಿಗೆ ಇದು ನಾಂದಿಯೂ ಆಗಬಹುದು. ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮಳೆಗಾಲದ ಅಡಿಕೆಯತ್ತ ರೈತರು ಹೆಚ್ಚು ಗಮನಹರಿಸುತ್ತಿದ್ದಾರೆ’ ಎನ್ನುತ್ತಾರೆ ಕದಂಬ ಮಾರ್ಕೆಟಿಂಗ್ ಸಂಸ್ಥೆಯ ವಿಶ್ವೇಶ್ವರ ಭಟ್.

ಅಂಕಿ–ಅಂಶ

ಸಂಸ್ಥೆ;ಆವಕವಾದ ಸಿಪ್ಪೆಕೊಳೆ ಅಡಿಕೆ

ಟಿ.ಎಸ್.ಎಸ್.; 2300 ಕ್ವಿಂ.

ಕದಂಬ ಮಾರ್ಕೆಟಿಂಗ್ ಸಂಸ್ಥೆ; 300 ಕ್ವಿಂ.

ಟಿ.ಎಂ.ಎಸ್.; 225 ಕ್ವಿಂ.

ಇತರೆ; 200 ಕ್ವಿಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.