ADVERTISEMENT

ಜೊಯಿಡಾ: ರಾಜ್ಯದ ಮೊದಲ ಸಾವಯವ ತಾಲ್ಲೂಕು ಮಾಡಲು ಪ್ರಯತ್ನ

ರಾಜ್ಯ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 13:19 IST
Last Updated 17 ಜೂನ್ 2025, 13:19 IST
ಜೊಯಿಡಾ ತಾಲ್ಲೂಕನ್ನು ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಜ್ಯ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಯವರನ್ನು ಶಾಸಕ ಆರ್ ವಿ ದೇಶಪಾಂಡೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು
ಜೊಯಿಡಾ ತಾಲ್ಲೂಕನ್ನು ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಜ್ಯ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಯವರನ್ನು ಶಾಸಕ ಆರ್ ವಿ ದೇಶಪಾಂಡೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು   

ಜೊಯಿಡಾ: ‘ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಈಗಲೂ ಶೇ 60 ರಷ್ಟು ಜನ ಜೀವನಾಧಾರಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಇಂದಿನ ತಾತ್ಕಾಲಿಕ ಜೀವನದಲ್ಲಿ ಆಹಾರ ಪದ್ಧತಿಯೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಶಾಸಕ ಆರ್.ವಿ ದೇಶಪಾಂಡೆ ಅವರ ವಿಶೇಷ ಆಸಕ್ತಿಯಿಂದ ಜೊಯಿಡಾ ತಾಲ್ಲೂಕನ್ನು ರಾಜ್ಯದ ಮೊದಲ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ’ ಎಂದು ರಾಜ್ಯ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಇಲ್ಲಿ ಮಂಗಳವಾರ ನಡೆದ ಜೊಯಿಡಾ ತಾಲ್ಲೂಕನ್ನು ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಇಲ್ಲಿನ ಜನರಿಗೆ ಪ್ರಕೃತಿ ಬಗ್ಗೆ ವಿಶೇಷ ಆಸಕ್ತಿ, ಪ್ರೀತಿ ಇದ್ದು ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸಲು ಅವಶ್ಯವಿರುವ ಎಲ್ಲ ರೀತಿಯ ಸಹಕಾರ ಮತ್ತು ಸೌಲಭ್ಯಗಳನ್ನು ಇಲಾಖೆ ವತಿಯಿಂದ ಒದಗಿಸಲಾಗುವುದು. ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ನೆರವಿಗೆ ನಿಂತಿದೆ, ಗ್ಯಾರಂಟಿಗಳ ಜೊತೆಗೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ, ಕೃಷಿ, ಆರೋಗ್ಯ ಸೇರಿದಂತೆ ಎಲ್ಲ ಇಲಾಖೆಗಳಿಗೆ ಹೆಚ್ಚಿನ ಅನುದಾನವನ್ನು ಒದಗಿಸಲಾಗುತ್ತಿದೆ’ ಎಂದರು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಇಲಾಖೆಯ ಆಯುಕ್ತ ವೈ.ಎಸ್.ಪಾಟೀಲ್, ‘ಜೊಯಿಡಾ ತಾಲ್ಲೂಕನ್ನು ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸುವ ಯೋಜನೆ ಹತ್ತು ವರ್ಷಗಳಿಂದ ಹಂತ– ಹಂತವಾಗಿ ನಡೆಯುತ್ತಿದೆ. ಜೊಯಿಡಾವನ್ನು ಸಾವಯವ ತಾಲ್ಲೂಕನ್ನಾಗಿ ಸರ್ಕಾರ ಅಥವಾ ಇಲಾಖೆ ಘೋಷಣೆ ಮಾಡಿಲ್ಲ. ಇದು ಮೂರು ವರ್ಷದ ಕಾರ್ಯಕ್ರಮ, ಸದ್ಯ ತಾಲ್ಲೂಕನ್ನು ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ, ಇಲ್ಲಿನ ಕಾಡಿನಲ್ಲಿ ಸಿಗುವ ಜೇನು, ವಿವಿಧ ಹಣ್ಣು ಹಂಪಲು, ಅಪ್ಪಿಮಿಡಿ ಮುಂತಾದವುಗಳಿಗೆ ಸಹ ಮಾನ್ಯತೆ ಸೀಗಬೇಕಾಗಿದೆ, ಇಲ್ಲಿನ ರೈತರ ಅಭಿವೃದ್ಧಿ ದೃಷ್ಟಿಯಿಂದ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಜೊಯಿಡಾವನ್ನು ಗುರುತಿಸುವಂತೆ ಮಾಡಲು ನಿರ್ಧರಿಸಲಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ 19 ರೈತರಿಗೆ ಪವರ್ ಟಿಲ್ಲರ್ ಟ್ರ್ಯಾಕ್ಟರ್‌ಗಳನ್ನು, ಹಾಗೂ ಕೃಷಿ ಇಲಾಖೆಯ ವತಿಯಿಂದ ವಿವಿಧ ಕೃಷಿ ಪರಿಕರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಳಿ ರೈತ ಉತ್ಪಾದಕ ಕಂಪನಿ, ಕುಂಬಾರವಾಡ, ಸಂಜೀವಿನಿ ಮಹಿಳಾ ಸ್ವಸಹಾಯ ಸಂಘ ಜೊತೆಗೆ ಸಂಘ ಸಂಸ್ಥೆಗಳ ವತಿಯಿಂದ ಸ್ಥಳೀಯ ಉತ್ಪನ್ನಗಳ ಮಾರಾಟ, ಪ್ರದರ್ಶನ ನಡೆಯಿತು.

ರಾಜ್ಯ ಕೃಷಿ ನಿರ್ದೇಶಕ ಜಿ.ಟಿ.ಪುತ್ರ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ನಾರಾಯಣ ಹೆಗಡೆ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶಿವಪ್ರಸಾದ ಗಾಂವಕರ, ಶಿರಸಿ ವಿಜ್ಞಾನ ಕೇಂದ್ರದ ರೂಪಾ ಪಾಟೀಲ್, ಜಿಲ್ಲಾ ಉಪ ಕೃಷಿ ನಿರ್ದೇಶಕಿ ಪ್ರತಿಭಾ ಹೂಗಾರ, ಜಿಲ್ಲಾ ಪಂಚಾಯಿತಿ ಅಧಿಕಾರಿ ಪ್ರಕಾಶ್ ಹಾಲಮ್ಮನ್ನವರ ಇದ್ದರು.

ಮಂಗಳವಾರ ಜೊಯಿಡಾದಲ್ಲಿ ನಡೆದ ಜೊಯಿಡಾ ತಾಲ್ಲೂಕನ್ನು ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸುವ ಕಾರ್ಯಕ್ರಮದಲ್ಲಿ ರಾಜ್ಯ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹಾಗೂ ಶಾಸಕ ಆರ್ ವಿ ದೇಶಪಾಂಡೆ ಯವರು ತಾಲ್ಲೂಕಿನ ಅರ್ಹ 19 ರೈತರಿಗೆ ಪವರ್ ಟಿಲ್ಲರ್ ಟ್ರ್ಯಾಕ್ಟರ್ ಗಳನ್ನು ವಿತರಿಸಿದರು.
//
//
ಜೊಯಿಡಾದಲ್ಲಿ ಮಂಗಳವಾರ ನಡೆದ ಜೊಯಿಡಾ ತಾಲ್ಲೂಕನ್ನು ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ರಾಜ್ಯ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಮಾತನಾಡಿದರು.

‘ಇಲ್ಲಿನ ಶೇ6 ರಷ್ಟು ರೈತರು ಮಾತ್ರ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುತ್ತಿದ್ದಾರೆ. ರೈತರ ಅಭಿವೃದ್ಧಿ ದೃಷ್ಟಿಯಿಂದ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸುವ ಪ್ರಯತ್ನ ಮಾಡುವುದು ನನ್ನ ಜವಾಬ್ದಾರಿಯಾಗಿತ್ತು. ಪ್ರತಿ ಕುಟುಂಬದ ರೈತರನ್ನು ಭೇಟಿ ಮಾಡಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕಾರ್ಯ ಕೃಷಿ ಇಲಾಖೆ ಮತ್ತು ಸಂಬಂಧಿತ ಸಂಘ ಸಂಸ್ಥೆಗಳು ಮಾಡಬೇಕು ಸಾವಯವ ಕೃಷಿ ಮೂಲಕ ಜೊಯಿಡಾ ಜಗತ್ತಿನಲ್ಲಿ ಗುರುತಿಸಿಕೊಳ್ಳಬೇಕು ಇದಕ್ಕೆ ಜನರ ಸಹಭಾಗಿತ್ವ ಮುಖ್ಯ’ ಶಾಸಕ ಆರ್. ವಿ. ದೇಶಪಾಂಡೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.