ADVERTISEMENT

ಕಲಕರಡಿ: ಶಾಲೆಗೆ ಬಣ್ಣ ಬಳಿದ ಯುವಕರು

ಶಾಲೆ ಆರಂಭಕ್ಕೂ ಮುನ್ನ ಸಿಂಗಾರ, ಶ್ರಮದಾನ

ಗಣಪತಿ ಹೆಗಡೆ
Published 12 ಸೆಪ್ಟೆಂಬರ್ 2020, 7:05 IST
Last Updated 12 ಸೆಪ್ಟೆಂಬರ್ 2020, 7:05 IST
   

ಶಿರಸಿ: ಶಾಲೆಗಳ ಪುನರಾರಂಭಕ್ಕೆ ಕೆಲವೇ ದಿನ ಇದ್ದು, ತಾಲ್ಲೂಕಿನ ಕಲಕರಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಗ್ರಾಮದ ಯುವಕರೇ ಸೇರಿ ಒಂದೇ ದಿನದಲ್ಲಿ ಬಣ್ಣ ಬಳಿದು ಸಿಂಗರಿಸಿದ್ದಾರೆ.

ವಾಯುಪುತ್ರ ಯುವಕ ಮಂಡಳಿಯ ಸದಸ್ಯರೆಲ್ಲ ಸೇರಿ ಬುಧವಾರ ಈ ಕೆಲಸ ಮಾಡಿದ್ದಾರೆ.ಒಂದಿಡೀ ದಿನ ಬಣ್ಣ ಬಳಿದು ಶಾಲೆ ಸಿಂಗರಿಸಿದ್ದಾರೆ. ಮೂವತ್ತಕ್ಕೂ ಹೆಚ್ಚು ಜನ ಈ ಕಾರ್ಯದಲ್ಲಿ ಭಾಗಿಯಾಗಿದ್ದರು. ಬಣ್ಣ ಬಳಿಯಲು ತಗುಲಿದ ಸುಮಾರು ₹10 ಸಾವಿರಕ್ಕೂ ಹೆಚ್ಚು ವೆಚ್ಚವನ್ನು ಯುವಕರೇ ಭರಿಸಿಕೊಂಡಿದ್ದಾರೆ.

ರೈತಾಪಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಸ್ಥಳೀಯ ಯುವಕರು ಮತ್ತು ಉದ್ಯೋಗದಲ್ಲಿರುವ ಗ್ರಾಮದ ಯುವಕರು ಬಿಡುವು ಮಾಡಿಕೊಂಡು ಈ ಕೆಲಸ ಮಾಡಿದ್ದಾರೆ. ‘ಕಲಕರಡಿ ಬಾಯ್ಸ್’ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಶಾಲೆಗೆ ಬಣ್ಣ ಬಳಿಯುವ ಬಗ್ಗೆ ಚರ್ಚೆ ನಡೆಸಿಕೊಂಡಿದ್ದರು. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಲು ಮುಂದಾದ ಬಳಿಕ ಕೆಲಸ ಆರಂಭಿಸಿ ಒಂದೇ ದಿನದಲ್ಲಿ ಶಾಲಾ ಕಟ್ಟಡಕ್ಕೆ ಬಣ್ಣ ಬಳಿದಿದ್ದಾರೆ. ಜೊತೆಗೆ ಸಮೀಪದಲ್ಲಿರುವ ಮಾರುತಿ ದೇವಾಲಯಕ್ಕೂ ಬಣ್ಣ ಬಳಿದುಕೊಟ್ಟಿದ್ದಾರೆ.

ADVERTISEMENT

‘ನಾವು ಇದೇ ಶಾಲೆಯಲ್ಲಿ ಕಲಿತಿದ್ದೆವು. ಕೊರೊನಾದಿಂದ ಶಾಲೆ ಆರಂಭಗೊಳ್ಳಲು ತಡವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶಾಲೆ ಆರಂಭಗೊಳ್ಳಬಹುದು. ಹೀಗಾಗಿ ಅದಕ್ಕೂ ಪೂರ್ವದಲ್ಲಿ ಮಾಸಿ ಹೋಗಿದ್ದ ಶಾಲೆಯ ಗೋಡೆಗಳಿಗೆ ಬಣ್ಣ ಬಳಿಸಲು ತೀರ್ಮಾನಿಸಿದೆವು’ ಎಂದು ಯುವಕ ಮಂಡಳದ ಅಧ್ಯಕ್ಷ ವಿನಯ ನಾಯ್ಕ ತಿಳಿಸಿದರು.

‘ಶಾಲೆಗೆ ಬಣ್ಣ ಬಳಿಸಲು ವಿಶೇಷ ಅನುದಾನ ಲಭ್ಯವಿಲ್ಲ ಎಂಬ ವಿಚಾರ ಇತ್ತೀಚೆಗೆ ಗಮನಕ್ಕೆ ಬಂದಿತ್ತು. ನಮ್ಮೂರಿನ ಶಾಲೆ ಎಂಬ ಅಭಿಮಾನ ನಮ್ಮಲ್ಲಿದೆ. ಈ ಕಾರಣಕ್ಕೆ ನಾವೇ ಒಂದಷ್ಟು ಯುವಕರು ಸೇರಿ ಹಣ ಸಂಗ್ರಹಿಸಿ ಬಣ್ಣ ಬಳಿಸಲು ತೀರ್ಮಾನಿಸಿದೆವು’ ಎಂದು ಯುವ ಮುಖಂಡ ಸಂತೋಷ ಕಲಕರಡಿ ಹೇಳಿದರು.

‘ಆರಂಭದಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಚರ್ಚೆ ಆರಂಭಿಸಿದೆವು. ನಮ್ಮ ನಿರ್ಧಾರಕ್ಕೆ ಅನೇಕರು ಸಹಮತ ಸೂಚಿಸಿದರು. ಅಗತ್ಯವಿರುವ ಹಣ ಸಂಗ್ರಹಿಸಲು ಸಲಹೆ ನೀಡಿದರು. ಗ್ರಾಮದಲ್ಲಿರುವ ಯುವಕರೇ ಒಂದಷ್ಟು ಹಣ ನೀಡಿದರು. ಬೆಂಗಳೂರಿನಲ್ಲಿ ನೆಲೆಸಿರುವ ಕೆಲವರೂ ಆರ್ಥಿಕ ನೆರವು ಒದಗಿಸಿಕೊಟ್ಟರು’ ಎಂದು ವಿವರಿಸಿದರು.

*
ದಾನಿಗಳ ನೆರವಿನೊಂದಿಗೆ ಶಾಲೆಗೆ ಬಣ್ಣ ಬಳಿಯಲಾಗಿದೆ. ಯುವಕರು ಮಾದರಿ ಕಾರ್ಯ ಮಾಡಿದ್ದಾರೆ.
–ಮಂಗಲಾ, ಮುಖ್ಯ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.