ADVERTISEMENT

ಮೂರನೇ ಹಂತದ ಲಸಿಕೆ ಮೇ 11ರಿಂದ: ಜಿಲ್ಲಾಧಿಕಾರಿ

18 ವರ್ಷಕ್ಕಿಂತ ಮೇಲಿನ, 44 ವರ್ಷದ ಒಳಗಿನವರು ಲಸಿಕೆ ಪಡೆಯಲು ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಮೇ 2021, 11:50 IST
Last Updated 10 ಮೇ 2021, 11:50 IST
ಮುಲ್ಲೈ ಮುಗಿಲನ್
ಮುಲ್ಲೈ ಮುಗಿಲನ್   

ಕಾರವಾರ: ‘ಜಿಲ್ಲೆಯಲ್ಲಿ ಮೂರನೇ ಹಂತದ ಕೋವಿಡ್ 19 ಲಸಿಕಾ ಅಭಿಯಾನವುಮೇ 11ರಂದು ಪ್ರಾರಂಭವಾಗಲಿದೆ. 18 ವರ್ಷಕ್ಕಿಂತ ಮೇಲಿನ ಮತ್ತು 44 ವರ್ಷದ ಒಳಗಿನ ಪ್ರತಿಯೊಬ್ಬರೂ ಲಸಿಕೆ ಪಡೆಯಬಹುದು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದ್ದಾರೆ.

18 ವರ್ಷದ ಮೇಲಿನವರಿಗೆ ಮೇ 1ರಿಂದ ಲಸಿಕೆ ನೀಡುವುದಾಗಿ ಈ ಹಿಂದೆ ರಾಜ್ಯ ಸರ್ಕಾರ ‍ಪ್ರಕಟಿಸಿತ್ತು. ಆದರೆ, ಲಸಿಕೆಯ ಪೂರೈಕೆಯಲ್ಲಿ ವಿಳಂಬವಾಗಿದ್ದ ಕಾರಣ ಮುಂದೂಡಲಾಗಿತ್ತು.

ಮೂರನೇ ಹಂತದಲ್ಲಿ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಜಿಲ್ಲೆಯ 10 ತಾಲ್ಲೂಕು ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುವುದು. ಪ್ರತಿದಿನ ಗರಿಷ್ಠ 150 ಜನರಿಗೆ ಉಚಿತವಾಗಿ ನೀಡಲಾಗುವುದು. ಲಸಿಕೆ ಪಡೆಯುವ 18ರಿಂದ 44 ವರ್ಷದೊಳಗಿನ ಫಲಾನುಭವಿಗಳು ಸ್ವಯಂ ಪ್ರೇರಿತರಾಗಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಅಲ್ಲದೇ ಮುಂಗಡವಾಗಿ ಲಸಿಕಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ‘ಆರೋಗ್ಯ ಸೇತು ಆ್ಯಪ್’ ಹಾಗೂ www.cowin.gov.in ಮೂಲಕ ಆನ್‌ಲೈನ್ ನೋಂದಣಿ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ADVERTISEMENT

ಹೆಸರು ನೋಂದಾಯಿತ ಫಲಾನುಭವಿಗಳು ಲಸಿಕಾ ಕೇಂದ್ರಕ್ಕೆ ಬರುವಾಗ ಅಧಿಕೃತ ಗುರುತಿನ ಚೀಟಿ, ಮೊಬೈಲ್, ನೋಂದಣಿ ಹಾಗೂ ಕಾಯ್ದಿರಿಸಿರುವ ಮಾಹಿತಿಯನ್ನು ಕಡ್ಡಾಯವಾಗಿ ತರಬೇಕು. ಲಸಿಕಾ ಕೇಂದ್ರಗಳಲ್ಲಿ ಯಾರಿಗೂ ಸ್ಥಳದಲ್ಲೇ ಹೆಸರು ನೋಂದಣಿಗೆ ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ.

ಬ್ಯಾಂಕಿಂಗ್, ಅರಣ್ಯ, ಹೆಸ್ಕಾಂ, ಶಿಕ್ಷಣ ಇಲಾಖೆ, ಮಾಧ್ಯಮ ಪ್ರತಿನಿಧಿಗಳು ಹಾಗೂ ಇನ್ನೂ ಹಲವಾರು ಇಲಾಖೆಗಳ ನೌಕರರನ್ನು ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ ಲಸಿಕೆ ನೀಡಲು ವಿನಂತಿಸಿದ್ದಾರೆ. ಮೂರನೇ ಹಂತದ ಅಭಿಯಾನದಲ್ಲಿ ಇದರ ಪ್ರಯೋಜನ ಪಡೆಯಬಹುದು. ಈಗಾಗಲೇ ಜಾರಿಯಲ್ಲಿರುವ 45 ವರ್ಷಕ್ಕಿಂತ ಮೇಲಿನ ನಾಗರಿಕರಿಗೆ ನೀಡಲಾಗುತ್ತಿರುವ ಎರಡನೇ ಡೋಸ್ ಲಸಿಕೆಯನ್ನು ನೀಡಲು ಆನ್‌ಲೈನ್, ಸ್ಥಳದಲ್ಲೇ ನೋಂದಣಿ ಸೌಲಭ್ಯವಿದೆ. ಅದೇ ಆರೋಗ್ಯ ಸಂಸ್ಥೆಯ ಪ್ರತ್ಯೇಕ ಲಸಿಕಾ ಕೇಂದ್ರಗಳಲ್ಲಿ ಯಥಾ ಪ್ರಕಾರ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.