ADVERTISEMENT

ಉತ್ತರ ಕನ್ನಡ ಜಿ.ಪಂ ಅವಧಿಯ ಕೊನೆಯ ಹಂತ

ಚುನಾವಣೆ ಘೋಷಣೆಯಾದರೆ ಇಂದಿನ ಸಾಮಾನ್ಯ ಸಭೆಯೇ ಅಂತಿಮ

ಸದಾಶಿವ ಎಂ.ಎಸ್‌.
Published 16 ಮಾರ್ಚ್ 2021, 19:30 IST
Last Updated 16 ಮಾರ್ಚ್ 2021, 19:30 IST

ಕಾರವಾರ: ಜಿಲ್ಲಾ ಪಂಚಾಯಿತಿಯ ಹಾಲಿ ಆಡಳಿತದ ಅಧಿಕಾರಾವಧಿಯು ಪೂರ್ಣಗೊಳ್ಳುವ ಕೊನೆಯ ಹಂತಕ್ಕೆ ತಲುಪಿದೆ. ಒಂದು ವೇಳೆ, ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯಾದರೆ ಮಾರ್ಚ್ 17ರಂದು ನಡೆಯುವ ಸಾಮಾನ್ಯ ಸಭೆಯು ಈ ಅವಧಿಯಲ್ಲಿ ಕೊನೆಯದ್ದಾಗಲಿದೆ.

Caption

ಜಿಲ್ಲೆಯಲ್ಲಿ 2016ರ ಫೆ.13ರಂದು ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆದಿತ್ತು. ಫೆ.24ರಂದು ಫಲಿತಾಂಶ ಪ್ರಕಟವಾಗಿತ್ತು. ಸುಮಾರು ಏಳು ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಸ್ಥಳೀಯ ಸಂಸ್ಥೆಗಳು ಮೊದಲ ಸಭೆ ಹಮ್ಮಿಕೊಂಡ ದಿನದಿಂದ ಐದು ವರ್ಷಗಳ ತನಕ ಅಧಿಕಾರಾವಧಿ ಚಾಲನೆಗೆ ಬರುತ್ತದೆ. ಅದರ ಪ್ರಕಾರ ಹಾಲಿ ಜಿಲ್ಲಾ ಪಂಚಾಯಿತಿ ಆಡಳಿತದ ಅಧಿಕಾರವು ಏ.24ರಂದು ಕೊನೆಯಾಗಲಿದೆ.

ಈವರೆಗೆ ಜಿಲ್ಲಾ ಪಂಚಾಯಿತಿಯಲ್ಲಿ ಒಟ್ಟು 39 ಸದಸ್ಯ ಬಲವಿತ್ತು. ಆದರೆ, ಈ ಬಾರಿ ಯಲ್ಲಾಪುರ ತಾಲ್ಲೂಕಿನಲ್ಲಿ ಮತ್ತೊಂದು ಸ್ಥಾನವನ್ನು ಸೃಜಿಸಲಾಗಿದ್ದು, ಒಟ್ಟು ಸ್ಥಾನಗಳು 40ಕ್ಕೇರಲಿವೆ. ಹೊಸ ಕ್ಷೇತ್ರ ಯಾವುದು ಎಂಬುದು ಸದ್ಯಕ್ಕೆ ಕುತೂಹಲವಾಗಿಯೇ ಉಳಿದಿದೆ.

ADVERTISEMENT

ಹೊನ್ನಾವರ ತಾಲ್ಲೂಕಿನ ಮಂಕಿ ಪಟ್ಟಣ ಪಂಚಾಯಿತಿಯಾಗಿ ಘೋಷಣೆಯಾದ ಬಳಿಕ ಅಲ್ಲಿನ ಗ್ರಾಮಗಳನ್ನು ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಹೊರಗಿಡಬೇಕಿದೆ. ಹಾಗಾಗಿ ಈ ಬಾರಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಮರುವಿಂಗಡಣೆ ಆಗಿ ನಂತರ ಚುನಾವಣೆ ಘೋಷಣೆಯಾಗಲಿದೆ.

ಜಿಲ್ಲೆಯಲ್ಲಿ 2016ರಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿ 2011ರ ಜನಗಣತಿ ಆಧರಿಸಿ ಮೂರು ಕ್ಷೇತ್ರಗಳನ್ನು ಹೆಚ್ಚಿಸಲಾಗಿತ್ತು. ಅದಕ್ಕೂ ಮೊದಲು 2010ರಲ್ಲಿ ಚುನಾವಣೆಯಾದಾಗ 36 ಕ್ಷೇತ್ರಗಳಿದ್ದವು. ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೇರಿತ್ತು. ಜಯಶ್ರೀ ಮೊಗೇರ ಐದು ವರ್ಷ ಅಧ್ಯಕ್ಷೆಯಾಗಿ ಅಧಿಕಾರ ನಿಭಾಯಿಸಿದರು.

ಈ ಬಾರಿ ಜಿಲ್ಲೆಯಲ್ಲಿ ರಾಜಕೀಯ ಚಿತ್ರಣ ಬೇರೆಯ ರೀತಿಯಲ್ಲಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಕಳೆದ ಬಾರಿ ಕಾಂಗ್ರೆಸ್‌ ಶಾಸಕರಾಗಿದ್ದ ಶಿವರಾಮ ಹೆಬ್ಬಾರ ಬಿಜೆಪಿ ಸೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಎರಡೂ ಪಕ್ಷಗಳ ಸಮಬಲದ ಸ್ಪರ್ಧೆಯಾಗಿದೆ. ಜಿಲ್ಲಾ ಪಂಚಾಯಿತಿ ಚುನಾವಣೆಗೆ ಹಾಲಿ ಸದಸ್ಯರು ಹಾಗೂ ಹೊಸದಾಗಿ ಟಿಕೆಟ್ ಆಕಾಂಕ್ಷಿಗಳು ಸಿದ್ಧತೆ ಮಾಡಿಕೊಳ್ಳುತ್ತಿರುವುದೂ ಮೇಲ್ನೋಟಕ್ಕೇ ಗೋಚರಿಸುತ್ತಿದೆ.

ಆಡಳಿತಾಧಿಕಾರಿ ಸಾಧ್ಯತೆ

ಜಿಲ್ಲಾ ಪಂಚಾಯಿತಿಗೆ ಇನ್ನೊಂದು ತಿಂಗಳ ಒಳಗೆ ಚುನಾವಣೆ ಘೋಷಣೆ ಆಗದಿದ್ದರೆ ಇನ್ನೊಂದು ಸಾಮಾನ್ಯ ಸಭೆ ಹಮ್ಮಿಕೊಳ್ಳಲು ಅವಕಾಶ ಸಿಗಬಹುದು. ಎರಡು ತಿಂಗಳ ಹಿಂದೆ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆದಿದ್ದು, ಮತ್ತೊಂದು ಸಭೆಯ ಒಳಗೆ ಅವಧಿ ಮುಗಿಯುವ ಸಾಧ್ಯತೆಯಿದೆ.

ಒಂದು ವೇಳೆ ಶೀಘ್ರವೇ ಚುನಾವಣೆ ಪ್ರಕಟವಾದರೆ, ಚುನಾವಣೆ ನಡೆದು ಮತ ಎಣಿಕೆ ಪೂರ್ಣವಾಗಿ ಆಡಳಿತ ಮಂಡಳಿ ರಚನೆಯಾಗುವ ತನಕವೂ ಸರ್ಕಾರ, ಜಿಲ್ಲಾ ಪಂಚಾಯಿತಿಗೆ ಆಡಳಿತಾಧಿಕಾರಿಯನ್ನು ನೇಮಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.