ADVERTISEMENT

ಕಾರವಾರ | ಕೋವಿಡ್ ನಿಯಮಾವಳಿಯ ಸಂಪೂರ್ಣ ನಿರ್ಲಕ್ಷ್ಯ; ಮಾರುಕಟ್ಟೆಯಲ್ಲಿ ಜನಸಾಗರ

ಕಾರವಾರ ಮಾರುಕಟ್ಟೆಯಲ್ಲಿ ಜನಸಾಗರ

​ಪ್ರಜಾವಾಣಿ ವಾರ್ತೆ
Published 25 ಮೇ 2021, 7:35 IST
Last Updated 25 ಮೇ 2021, 7:35 IST
ಕಾರವಾರದ ಮಾರುಕಟ್ಟೆಯಲ್ಲಿ ಮಂಗಳವಾರ ಕಂಡು ಬಂದ ಜನ ಸಾಗರ
ಕಾರವಾರದ ಮಾರುಕಟ್ಟೆಯಲ್ಲಿ ಮಂಗಳವಾರ ಕಂಡು ಬಂದ ಜನ ಸಾಗರ   

ಕಾರವಾರ: ಕೋವಿಡ್ ನಿಯಂತ್ರಣದ ಭಾಗವಾಗಿ ಜಿಲ್ಲೆಯಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು, ಮಂಗಳವಾರ ಮತ್ತು ಶುಕ್ರವಾರ ಬೆಳಿಗ್ಗೆ 6ರಿಂದ 10ರ ತನಕ ವಿನಾಯಿತಿ ನೀಡಲಾಗಿದೆ. ಹಾಗಾಗಿ ನಗರದ ಮಾರುಕಟ್ಟೆಯಲ್ಲಿ ಮಂಗಳವಾರ ಜನಸಾಗರವೇ ಕಂಡುಬಂತು.

ಕಿರಾಣಿ, ತರಕಾರಿ ಅಂಗಡಿಗಳ ಎದುರು ಬೆಳಿಗ್ಗೆ 7ರಿಂದಲೇ ಸಾವಿರಾರು ಜನರ ಸೇರಿದ್ದರು. ಅಗತ್ಯ ವಸ್ತುಗಳ ಖರೀದಿಗೆ ಮತ್ತೆ ಶುಕ್ರವಾರದ ತನಕ ಕಾಯಬೇಕು ಎಂಬ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಾರುಕಟ್ಟೆಗೆ ಧಾವಿಸಿದರು. ಈ ಸಂದರ್ಭದಲ್ಲಿ ಪ್ರತಿ ಅಂಗಡಿಯ ಮುಂದೆ ನೂರಾರು ಮಂದಿ ಗುಂಪುಗೂಡಿದ್ದರು.

ಸ್ಥಳಕ್ಕೆ ಬಂದ ಪೊಲೀಸರು ಜನರಲ್ಲಿ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದರು. ಅವರು ಇರುವಷ್ಟು ಹೊತ್ತು ಸ್ವಲ್ಪ ದೂರ ದೂರ ನಿಂತಿದ್ದ ಜನ, ಪೊಲೀಸರು ಹೋದ ಬಳಿಕ ಮತ್ತೆ ಗುಂಪು ಸೇರಿದರು. ಪುನಃ ಸ್ಥಳಕ್ಕೆ ಬಂದ ಪೊಲೀಸರು ಕೆಲವು ಅಂಗಡಿಗಳನ್ನು ಅವುಗಳ ಮಾಲೀಕರಿಗೆ ಎಚ್ಚರಿಕೆ ನೀಡಿ ಮುಚ್ಚಿಸಿದರು. ನಿಯಮಾವಳಿ ಮೀರಿ ಜನ ಸೇರಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ADVERTISEMENT

ಕೋವಿಡ್ ನಿಯಂತ್ರಣದ ಕ್ರಮವಾಗಿ ಜಿಲ್ಲೆಯಲ್ಲಿ ಜೂನ್ 7ರ ತನಕ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿದೆ. ಈ ಬಗ್ಗೆ ಮುಂದುವರಿದ ಆದೇಶದಲ್ಲಿ ವಾರದಲ್ಲಿ ಎರಡು ದಿನ ವಿನಾಯಿತಿ ನೀಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಭಾನುವಾರ ಆದೇಶ ಹೊರಡಿಸಿದ್ದರು.

ಮೇ 22ರವರೆಗಿನ ಲಾಕ್‌ಡೌನ್ ಆದೇಶದಲ್ಲಿ ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿತ್ತು. ಉಳಿದ ದಿನಗಳಲ್ಲಿ ಬೆಳಿಗ್ಗೆ 6ರಿಂದ 10ರ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿತ್ತು. ಈ ನಡುವೆ ಜಿಲ್ಲೆಯಲ್ಲಿ ಪ್ರತಿ ದಿನ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡುಬಂತು. ಹಾಗಾಗಿ ನಿಯಮಾವಳಿಯಲ್ಲಿ ಬದಲಾವಣೆ ಮಾಡಿದ ಜಿಲ್ಲಾಧಿಕಾರಿ, ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸಲು ನಿರ್ದೇಶನ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.