ADVERTISEMENT

ಮೈಸೂರು, ದಕ್ಷಿಣ ಕನ್ನಡಕ್ಕೆ ಚಾಂಪಿಯನ್ ಪಟ್ಟ

ರಾಜ್ಯಮಟ್ಟದ ಥ್ರೋಬಾಲ್ ಪಂದ್ಯಾವಳಿ:ಫೈನಲ್‌ನಲ್ಲಿ ಪ್ರಬಲ ಸೆಣಸಾಟ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 2:44 IST
Last Updated 30 ಡಿಸೆಂಬರ್ 2025, 2:44 IST
ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಥ್ರೋಬಾಲ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ದಕ್ಷಿಣ ಕನ್ನಡ ಜಿಲ್ಲೆಯ ಬಾಲಕಿಯರ ತಂಡಕ್ಕೆ ಬಹುಮಾನ ವಿತರಿಸಲಾಯಿತು.
ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಥ್ರೋಬಾಲ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ದಕ್ಷಿಣ ಕನ್ನಡ ಜಿಲ್ಲೆಯ ಬಾಲಕಿಯರ ತಂಡಕ್ಕೆ ಬಹುಮಾನ ವಿತರಿಸಲಾಯಿತು.   

ಕಾರವಾರ: ಇಲ್ಲಿನ ಬಾಡದ ಶಿವಾಜಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಎರಡು ದಿನ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಥ್ರೋಬಾಲ್ ಪಂದ್ಯಾವಳಿ ಸೋಮವಾರ ಮುಕ್ತಾಯಗೊಂಡಿತು.

ಬಾಲಕ ಮತ್ತು ಬಾಲಕಿಯರ ವಿಭಾಗದ ಫೈನಲ್ ಪಂದ್ಯಗಳು ರೋಚಕತೆಯಿಂದ ಕೂಡಿದ್ದವು. ತುರುಸಿನಿಂದ ನಡೆದ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಮೈಸೂರು ತಂಡ, ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿ ಪ್ರಶಸ್ತಿಗೆ ಮುತ್ತಿಕ್ಕಿದವು.

33 ಶೈಕ್ಷಣಿಕ ಜಿಲ್ಲೆಗಳಿಂದ 64 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು. ಉತ್ತರ ಕನ್ನಡದ ಬಾಲಕರ ತಂಡವು ಮೊದಲ ಸುತ್ತಿನಲ್ಲಿ, ಬಾಲಕಿಯರ ತಂಡವು ಎರಡನೇ ಸುತ್ತಿನಲ್ಲಿ ಹೊರಬಿದ್ದವು. ಆದರೆ, ಎರಡೂ ವಿಭಾಗಗಳಲ್ಲೂ ಸಮತೋಲಿತ ಪ್ರದರ್ಶನ ನೀಡಿದ ಮೈಸೂರು ಮತ್ತು ದಕ್ಷಿಣ ಕನ್ನಡ ತಂಡಗಳು ಪ್ರಶಸ್ತಿಗೆ ಸೆಣಸಾಟ ನಡೆಸಿದ್ದವು.

ADVERTISEMENT

ಅಂತಿಮ ಪಂದ್ಯದಲ್ಲಿ ಮೈಸೂರು ಬಾಲಕರ ತಂಡವು ದಕ್ಷಿಣ ಕನ್ನಡ ತಂಡವನ್ನು 24–26, 25–23, 15–12 ಸೆಟ್‌ಗಳಿಂದ ಸೋಲುಣಿಸಿತು. ದಕ್ಷಿಣ ಕನ್ನಡ ಬಾಲಕಿಯರ ತಂಡವು ಮೈಸೂರು ತಂಡವನ್ನು 25–21, 15–25, 15–13 ಸೆಟ್‌ಗಳಿಂದ ಪರಾಭವಗೊಳಿಸಿತು.

ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ 875 ಕ್ರೀಡಾಪಟುಗಳು ಪಾಲ್ಗೊಂಡು ಪ್ರದರ್ಶನ ನೀಡಿದರು. ತರಬೇತುದಾರರು, ತಂಡದ ವ್ಯವಸ್ಥಾಪಕರು ಸೇರಿದಂತೆ 1 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಪ್ರೀಮಿಯರ್ ಪದವಿ ಪೂರ್ವ ಕಾಲೇಜು, ಅಮ್ಮುರಬಿ ಪದವಿ ಪೂರ್ವ ಕಾಲೇಜು, ಶಿವಾಜಿ ಕಾಲೇಜಿನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕ್ರೀಡಾಕೂಟಕ್ಕೆ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಚಾಲನೆ ನೀಡಿದ್ದರು. ಸಮಾರೋಪ ಸಮಾರಂಭದಲ್ಲಿ ಪದವಿ ಪೂರ್ವ ಕಾಲೇಜುಗಳ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಟಿ.ಸಿ ಟ್ರೋಫಿ ವಿತರಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸತೀಶ ನಾಯ್ಕ, ಜಿ.ಡಿ.ಮನೋಜೆ, ರಮೇಶ ಪತ್ರೇಕರ, ಡಿ.ಆರ್.ನಾಯ್ಕ, ಪ್ರಕಾಶ ಮೇಥಾ, ಪ್ರಕಾಶ ರಾಣೆ, ಪ್ರಶಾಂತ ರಾಣೆ, ಕಿರಣ ನಾಯ್ಕ, ಸಂಜಯ ಗೌಡಾ, ಎ.ಸಿ.ಗಾಂವಕರ, ಹರೀಶ ನಾಯಕ, ಶ್ರೀದೇವಿ ನಾಯ್ಕ, ಪಿಂಕಿ, ರಾಘವೇಂದ್ರ ನಾಯ್ಕ, ರಾಜೇಶ ಸೈಲ್, ಇತರರು ಪಾಲ್ಗೊಂಡಿದ್ದರು.

ಕಾರವಾರದಲ್ಲಿ ಹಮ್ಮಿಕೊಂಡಿದ್ದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಮೈಸೂರು ಜಿಲ್ಲೆಯ ಬಾಲಕರ ತಂಡಕ್ಕೆ ಬಹುಮಾನ ವಿತರಿಸಲಾಯಿತು.

33 ಜಿಲ್ಲೆಗಳ 64 ತಂಡ ಭಾಗಿ 875 ಕ್ರೀಡಾಪಟುಗಳಿಂದ ಪ್ರದರ್ಶನ ದಕ್ಷಿಣ ಕನ್ನಡ, ಮೈಸೂರು ತಂಡದ ನಡುವೆ ಎರಡೂ ವಿಭಾಗದಲ್ಲೂ ಪೈಪೋಟಿ