ADVERTISEMENT

ಶಿರಸಿ: ತಾಳೆ ಬೆಳೆಯಲ್ಲಿ ಖುಷಿಕಂಡ ಮೃತ್ಯುಂಜಯ

ವರದಾ ನದಿ ತಟದ ಕೃಷಿಕನ ಯಶೋಗಾಥೆ

ಗಣಪತಿ ಹೆಗಡೆ
Published 1 ಏಪ್ರಿಲ್ 2022, 19:30 IST
Last Updated 1 ಏಪ್ರಿಲ್ 2022, 19:30 IST
ಮೃತ್ಯುಂಜಯ ಅವರು ಬೆಳೆದ ತಾಳೆ ಮರಗಳು
ಮೃತ್ಯುಂಜಯ ಅವರು ಬೆಳೆದ ತಾಳೆ ಮರಗಳು   

ಶಿರಸಿ: ತಾಳೆ ಗಿಡ ಬೆಳೆಯುವಂತೆ ಸಲಹೆ ನೀಡಿ ನೆರೆಯ ಶಿವಮೊಗ್ಗ ಜಿಲ್ಲೆಯ ಕೆಲವು ತಜ್ಞರು ಸಸಿಗಳನ್ನು ನೀಡಿ ಹೋಗಿದ್ದರು. ಗ್ರಾಮದಲ್ಲಿ ಹಲವರು ಗಿಡವನ್ನು ನೆಡಲು ಆಸಕ್ತಿ ತೋರಲಿಲ್ಲ. ನಾನು ಮನಸ್ಸು ಮಾಡಿ ಒಂದಷ್ಟು ಗಿಡಗಳನ್ನು ಬೆಳೆದೆ. ಈಗ ಉತ್ತಮ ಫಸಲು ಕೈಗೆ ಸಿಗುತ್ತಿದೆ...

ಹೀಗೆ ಮಾತಿಗಿಳಿದವರು ತಿಗಣಿ ಗ್ರಾಮದ ಮೃತ್ಯುಂಜಯ ಕೆ.ಗೌಡ. ವರದಾ ನದಿ ತಟದಲ್ಲಿ ಸುಮಾರು ಆರು ಎಕರೆಗೂ ವಿಸ್ತಾರದ ಜಾಗದಲ್ಲಿ ಕಳೆದ ಏಳು ವರ್ಷದಿಂದ ತಾಳೆ ಬೆಳೆಯುತ್ತಿರುವ ಕೃಷಿಕ ಇವರು. ಉತ್ತರ ಕನ್ನಡಕ್ಕೆ ಅಪರೂಪ ಎನಿಸಿದ ತಾಳೆ ಬೆಳೆಯನ್ನು ಇವರು ಬೆಳೆದು ಖುಷಿ ಕಾಣುತ್ತಿದ್ದಾರೆ.

ತಾಳೆ ಎಣ್ಣೆ ತಯಾರಿಕೆ ಈಚೆಗೆ ಹೆಚ್ಚುತ್ತಿದ್ದು ತಾಳೆ ಹಣ್ಣಿಗೆ ಹೆಚ್ಚು ಬೇಡಿಕೆ ಇದೆ. ಪ್ರತಿ ಟನ್ ಬೆಳೆಗೆ ₹13,500 ಬೆಂಬಲ ಬೆಲೆಯನ್ನೂ ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ ಸೀಮಿತ ಬೆಳೆಗಾರರು ಮಾತ್ರ ಇದನ್ನು ಬೆಳೆಯುತ್ತಿದ್ದಾರೆ. ಈ ಪೈಕಿ ಮೃತ್ಯುಂಜಯ ಕೂಡ ಒಬ್ಬರು.

ADVERTISEMENT

‘2013ರಲ್ಲಿ ಪ್ರಯೋಗಕ್ಕಾಗಿ ಕೆಲವು ಗಿಡ ಬೆಳೆದೆ. ಬಳಿಕ ನಾಲ್ಕು ಎಕರೆ ಭೂಮಿಯನ್ನು ಅದಕ್ಕಾಗಿ ಮೀಸಲಿಟ್ಟೆ. ಆರಂಭಿಕ ಹಂತದಲ್ಲಿ ಫಸಲು ಸಿಗದೆ ಬೇಸರವಾಗಿತ್ತು. ತಾಳೆ ಗಿಡ ಮರವಾಗಿ ಗೊನೆ ಬಿಡಲು ಕನಿಷ್ಠ ಐದು ವರ್ಷ ಬೇಕಾಯಿತು. ಈಗ ಸರಾಸರಿ 25 ರಿಂದ 30 ಟನ್ ಬೆಳೆ ತೆಗೆಯುತ್ತಿದ್ದೇನೆ’ ಎನ್ನುವಾಗ ಅವರ ಮುಖದಲ್ಲಿ ಸಂಭ್ರಮ ಎದ್ದು ಕಾಣುತ್ತಿತ್ತು.

‘ಈಗ 400ಕ್ಕೂ ಹೆಚ್ಚು ತಾಳೆ ಮರಗಳು ಬೆಳೆದು ನಿಂತಿವೆ. ಸರಿಯಾಗಿ ಬೆಳೆದ ಮರ ಗರಿಷ್ಠ 1 ಕ್ವಿಂಟಲ್‍ಗೂ ಅಧಿಕ ಫಸಲು ಒಮ್ಮೆಲೇ ನೀಡುತ್ತದೆ. ಒಂದೊಂದು ಗೊನೆಯೆ 60 ಕೆ.ಜಿ.ಯಿಂದ 70 ಕೆಜಿಯಷ್ಟು ತೂಗುತ್ತದೆ’ ಎಂದು ತಾಳೆ ಬೆಳೆಯ ಗರಿಮೆ ಪರಿಚಯಿಸಿದರು.

‘ವರದಾ ನದಿ ತಟದಲ್ಲಿದ್ದರೂ ಬೇಸಿಗೆಯಲ್ಲಿ ತೋಟಕ್ಕೆ ನೀರು ಹಾಯಿಸಲು ಸಮಸ್ಯೆ ಆಗುತ್ತಿತ್ತು. ವೋಲ್ಟೇಜ್ ಕೊರತೆಯಿಂದ ಪಂಪ್‌ಸೆಟ್ ಕೆಲಸ ಮಾಡುತ್ತಿರಲಿಲ್ಲ. ಪ್ರತ್ಯೇಕ ಪರಿವರ್ತಕ ಅಳವಡಿಸಿಕೊಂಡ ಬಳಿಕ ಸಮಸ್ಯೆ ನೀಗಿದೆ. ಹೇರಳ ನೀರು ದೊರೆತರೆ ತಾಳೆ ಗಿಡ ಫಸಲು ಚೆನ್ನಾಗಿ ಕೊಡುತ್ತದೆ’ ಎಂದರು.

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನಲ್ಲಿರುವ ಕಲ್ಪವೃಕ್ಷ ಪಾಮ್ ಪ್ರೊಡ್ಯೂಸಿಂಗ್ ಕಂಪನಿ ತಾಂತ್ರಿಕ ಸಲಹೆ ನೀಡುತ್ತಿದೆ. ಬೆಳೆಯನ್ನು ನೇರವಾಗಿ ಕಂಪನಿಯೇ ಖರೀದಿಸುತ್ತಿದೆ.

ತಾಳೆ ಬೆಳೆಗೆ ಸಹಾಯಧನ:‘ಅಡುಗೆ ಎಣ್ಣೆ, ಲ್ಯೂಬ್ರಿಕಂಟ್ಸ್ ತಯಾರಿಕೆಗೆ ತಾಳೆ ಹಣ್ಣು ಬಳಕೆಯಾಗುತ್ತಿದ್ದು ಬೇಡಿಕೆಯೂ ಹೆಚ್ಚಿದೆ. ಬೆಳೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರದಿಂದ ತಾಳೆ ಬೆಳೆಗಾರರಿಗೆ ಸೌಲಭ್ಯ ಒದಗಿಸಲಾಗುತ್ತಿದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ.

‘ತಾಳೆ ಗಿಡಗಳನ್ನು ಬೆಳೆಯುವ ನರ್ಸರಿಗಳಿಗೆ ಸಹಾಯಧನ ಸೌಲಭ್ಯ ಒದಗಿಸಲಾಗುತ್ತಿದೆ. ತೋಟಸಿದ್ಧಪಡಿಸಲು, ಮೊದಲ ನಾಲ್ಕು ವರ್ಷ ತೋಟಗಳ ನಿರ್ವಹಣೆ, ಬಳಿಕ ಪ್ರತಿ ವರ್ಷ ಮರಗಳಿಗೆ ಗೊಬ್ಬರ ನೀಡಲು ಸಹಾಯಧನವನ್ನು ಒದಗಿಸಲಾಗುತ್ತದೆ. ಕಟಾವು ಯಂತ್ರಗಳಿಗೂ ಶೇ.50ರಷ್ಟು ಸಹಾಯಧನ ಸೌಲಭ್ಯವಿದೆ’ ಎಂದು ವಿವರಿಸಿದರು.

*
ತಾಳೆ ಬೆಳೆಯಲು ಸ್ವಲ್ಪ ತಾಳ್ಮೆ ಬೇಕು. ಮೊದಲ ನಾಲ್ಕು ವರ್ಷ ಫಸಲು ಸಿಗದಿದ್ದರೂ ನಂತರ ಉತ್ತಮ ಆದಾಯ ತಂದುಕೊಡುತ್ತದೆ.
-ಮೃತ್ಯುಂಜಯ ಕೆ.ಗೌಡ, ತಾಳೆ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.